ಲೈಂಗಿಕ ದೌರ್ಜನ್ಯ ಆರೋಪ: ಮೇ 3 ರಂದು ಜರ್ಮನಿಯಿಂದ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ವಾಪಸ್
Prajwal Revanna Sexual Assault Case: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಮೊಮ್ಮಗ, ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ. ಆದರೆ ಸಂಸದ ಪ್ರಜ್ವಲ್ ರೇವಣ್ಣ ಸದ್ಯ ವಿದೇಶ ಪ್ರವಾಸದಲ್ಲಿದ್ದು, ಶುಕ್ರವಾರ (ಮೇ 03) ರಂದು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ.
ಬೆಂಗಳೂರು, ಮೇ 01: ಮಹಿಳೆಯರ ಮೇಲೆ ಲೈಗಿಂಕ ದೌರ್ಜನ್ಯವೆಸಗಿರುವ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna )ಸದ್ಯ ವಿದೇಶ ಪ್ರವಾಸದಲ್ಲಿದ್ದು, ಶುಕ್ರವಾರ (ಮೇ 03)ರ ಮಧ್ಯರಾತ್ರಿ ರಾಜ್ಯಕ್ಕೆ ಮರಳಲಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಫ್ರಾಂಕ್ಫರ್ಟ್ (Germany) ತೆರಳಿದ್ದು, ಬೆಂಗಳೂರಿಗೆ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದಾರೆ. ಮೇ3 ರಂದು ಮಧ್ಯಾಹ್ನ 1.30ಕ್ಕೆ ವಿಮಾನ ಫ್ರಾಂಕ್ಫರ್ಟ್ನಿಂದ ಹೊರಡಲಿದ್ದು, ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಆಗಮಿಸಲಿದ್ದಾರೆ ಎಂದು ಟಿವಿ9 ಡಿಜಿಟಲ್ಗೆ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.
ನೋಟಿಸ್ ನೀಡಿದ SIT
ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರು ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ (SIT) ನೋಟಿಸ್ ನೀಡಿದೆ. ವಿಶೇಷ ತನಿಖಾ ತಂಡ ವಿಡಿಯೋ ಪರಿಶೀಲನೆಗೆ ಪ್ರತ್ಯೇಕ ತಂಡ ರಚಿಸಿದೆ. ಸಂತ್ರಸ್ತೆಯರ ವಿಚಾರಣೆಗೆ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿದೆ. ಪೊಲೀಸರು ವೀಡಿಯೋ ದಲ್ಲಿರುವ ಐವರು ಮಹಿಳೆಯರಿಂದ ಮಾಹಿತಿ ಕಲೆ ಹಾಕಲು ಯತ್ನಿಸುತ್ತಿದೆ.
ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆ ಹಿಂದೆ ಹೆಚ್ಡಿ ಕುಮಾರಸ್ವಾಮಿ ಕೈವಾಡ: ಡಿಕೆ ಸುರೇಶ್ ಗಂಭೀರ ಆರೋಪ
ಏನಿದು ಪ್ರಕರಣ
ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಶ್ಲೀಲ ವಿಡಿಯೋಗಳು ಇರುವ ಪೆನ್ಡ್ರೈವ್ ಕಳೆದ ಕೆಲ ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಹರದಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದರು. ಮಹಿಳಾ ಆಯೋಗದಲ್ಲಿ ದೂರು ದಾಖಲಾದ ಬೆನ್ನಲ್ಲೇ ಪ್ರಕರಣದ ಕುರಿತು ಕುಲಂಕುಶ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದು, ತನಿಖೆ ನಡೆಯುತ್ತಿದೆ.
ಹೆಚ್ಡಿ ರೇವಣ್ಣ ವಿರುದ್ಧ ದೂರು
ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಬೆನ್ನಲ್ಲೇ ತಂದೆ ಹೆಚ್.ಡಿ.ರೇವಣ್ಣ ವಿರುದ್ಧವೂ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಈ ಹಿಂದೆ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಹೆಚ್ಡಿ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಎ1 ಹೆಚ್.ಡಿ.ರೇವಣ್ಣ, ಎ2 ಪ್ರಜ್ವಲ್ ರೇವಣ್ಣ ಆಗಿದ್ದಾರೆ.
ಐಪಿಸಿ ಸೆಕ್ಷನ್ 354A (ಲೈಂಗಿಕ ಕಿರುಕುಳ ಆರೋಪ), 354D (ಮಹಿಳೆಗೆ ಮುಜುಗರ ಆಗುವಂತೆ ಮಾಡುವುದು), 506 (ಬೆದರಿಕೆ), 509 (ಮಹಿಳೆ ಮಾನಕ್ಕೆ ಹಾನಿ) ರಡಿ FIR ದಾಖಲಿಸಲಾಗಿದೆ. ಹಲವು ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ದೃಶ್ಯಗಳು ಹರಿದಾಡಿದ್ದವು. ಹೀಗಾಗಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Wed, 1 May 24