ಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್, ರೇವಣ್ಣರನ್ನು ಬಂಧಿಸದ್ದೇಕೆ? ಗೃಹ ಸಚಿವ ಪರಮೇಶ್ವರ ಕೊಟ್ಟ ಕಾರಣ ಇಲ್ಲಿದೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ರಾಜ್ಯ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಕ್ಕೆ ಗೃಹ ಸಚಿವ ಜಿ ಪರಮೇಶ್ವರ ತಿರುಗೇಟು ನೀಡಿದ್ದಾರೆ. ಜತೆಗೆ, ಯಾಕೆ ರೇವಣ್ಣ, ಪ್ರಜ್ವಲ್​​ರನ್ನು ಬಂಧಿಸಿಲ್ಲ ಎಂಬ ಕಾರಣವನ್ನೂ ನೀಡಿದ್ದಾರೆ. ಅದೇನೆಂಬುದು ಇಲ್ಲಿದೆ.

Follow us
Ganapathi Sharma
| Updated By: Digi Tech Desk

Updated on:May 01, 2024 | 12:58 PM

ಬೆಂಗಳೂರು, ಮೇ 1: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಹಾಗೂ ಶಾಸಕ ಹೆಚ್​ಡಿ ರೇವಣ್ಣರನ್ನು (HD Revanna) ಇನ್ನೂ ಯಾಕೆ ಬಂಧಿಸಿಲ್ಲ ಎಂಬ ಪ್ರಶ್ನೆಗೆ ಗೃಹ ಸಚಿವ ಜಿ ಪರಮೇಶ್ವರ (G Parameshwara) ಉತ್ತರ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾರನ್ನೇ ಆದರೂ ಏಕಾಏಕಿ ಬಂಧಿಸುವುದಿಲ್ಲ. ಅದಕ್ಕೆ ಪುರಾವೆಗಳು, ದೂರಿನಲ್ಲಿ ಏನು ಹೇಳಿರುತ್ತಾರೆ ಎಂಬುದೆಲ್ಲ ಮುಖ್ಯವಾಗುತ್ತವೆ. ಪ್ರಕರಣ ಯಾವ ಸೆಕ್ಷನ್ ಅಡಿಯಲ್ಲಿ ಬರುತ್ತದೆ? ಅದರಲ್ಲಿ ಬಂಧಿಸಲು ಅವಕಾಶ ಇದೆಯೇ? ಜಾಮೀನು ಪಡೆಯುವಂಥ ಪ್ರಕರಣವೇ? ಈ ಅಂಶಗಳನ್ನೆಲ್ಲ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.

ಅಪರಾಧ ದಂಡಸಂಹಿತೆಯ (CRPC) ಸೆಕ್ಷನ್ 41a ಅಡಿ‌ ನೊಟೀಸ್ ಕೊಟ್ಟಿದ್ದಾರೆ. ಅದರಂತೆ, ಆರೋಪಿಗಳು 24 ಗಂಟೆಯ ಒಳಗೆ ಬಂದು ವಿಚಾರಣೆಗೆ ಹಾಜರಾಗಬೇಕು. ವಿಚಾರಣೆಗೆ ಹಾಜರಾಗದೇ ಹೋದರೆ ಎಸ್​ಐಟಿ ತಂಡ ಮುಂದಿನ ಪ್ರಕ್ರಿಯೆ ಮಾಡಲಿದೆ. ನಾವು ಎಸ್​ಐಟಿ ರಚನೆ ಮಾಡಿ ತನಿಖೆಗೆ ವಹಿಸಿದ್ದೇವೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವಂತಹದ್ದು ಏನೂ ಇಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಇದರಲ್ಲಿ ಬಹಳ ಜನರ ಜೀವನದ ಪ್ರಶ್ನೆ ಇದೆ. ಇಷ್ಟ ಬಂದ ಹಾಗೆ ತನಿಖೆ‌ ಮಾಡಲು ಆಗುವುದಿಲ್ಲ. ಹಾಗಾಗಿಯೇ ಎಸ್​ಐಟಿ ರಚನೆ ಮಾಡಿದ್ದೇವೆ ಎಂದು ಪರಮೇಶ್ವರ ಹೇಳಿದರು.

ಎಸ್​ಐಟಿ ರಚನೆ ಬಳಿಕವೂ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಲೀಕ್ ಆದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲವನ್ನು ಎಸ್​ಐಟಿ ಗಮನಿಸುತ್ತದೆ. ಅದಕ್ಕೆ ನಾವೇನೂ ಹೇಳಲು ಬರುವುದಿಲ್ಲ ಎಂದರು.

ಹೆಚ್​ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನಡುವಣ ಆರೋಪ ಪ್ರತ್ಯಾರೋಪಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಬಹಳ ಜನ ಅದರ ಬಗ್ಗೆ ಹೇಳಿಕೆ ಕೊಡ್ತಿದ್ದಾರೆ. ಅದಕ್ಕೆಲ್ಲ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ತನಿಖಾ ವರದಿ ಬಂದ ಮೇಲೆ ಏನು ಸತ್ಯಾಸತ್ಯತೆ ಇದೆ ಎಂಬುದರ ಮೇಲೆ ಕ್ರಮ ಆಗುತ್ತದೆ‌. ತನಿಖಾ ವರದಿ ಬರುವ ವರೆಗೂ ಯಾರೂ ಹೇಳಿಕೆ ಕೊಡಬಾರದು ಎಂದರು.

ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ವಿಡಿಯೋ ಮೂಲ ಹುಡುಕುವುದು ಹೇಗೆ, ಹೇಗಿರಲಿದೆ ಎಸ್​ಐಟಿ ತನಿಖೆ? ಇಲ್ಲಿದೆ ಮಾಹಿತಿ

ವಿದೇಶದಲ್ಲಿರೋ ಪ್ರಜ್ವಲ್ ಕರೆ ತರುವ ವಿಚಾರವಾಗಿ ಮಾತನಾಡಿ, ಎಸ್​​ಐಟಿ ಈಗಾಗಲೇ ನೊಟೀಸ್ ಜಾರಿ ಮಾಡಿದೆ. ಪ್ರಜ್ವಲ್ ವಿದೇಶಕ್ಕೆ ಹೋಗಿರುವ ಬಗ್ಗೆ ಎಲ್ಲ ಮಾಹಿತಿ ಇದೆ. ವಾಪಸ್ ಕರೆದುಕೊಂಡು ಬರಲು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಎಸ್​ಐಟಿ ಮಾಡಲಿದೆ. ಇದಕ್ಕೆ ಕೇಂದ್ರ ಸರ್ಕಾರದ ಸಹಕಾರವೂ ಬೇಕಾಗಬಹುದು. ಅಥವಾ ಎಸ್​ಐಟಿ ತಂಡದವರೇ ಕರೆದುಕೊಂಡು ಬರಬಹುದು ಎಂದರು.

ಬಿಜೆಪಿ, ಜೆಡಿಎಸ್ ಅಂತರ: ಆಂತರಿಕ ವಿಚಾರ ಎಂದ ಪರಮೇಶ್ವರ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಿಜೆಪಿ, ಜೆಡಿಎಸ್ ಅಂತರ ಕಾಯ್ದುಕೊಳ್ಳುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ, ಅದು ಅವರ ಪಕ್ಷದ ಆಂತರಿಕ ವಿಚಾರ. ಯಾವ ನಿಲುವನ್ನಾದ್ರೂ ತೆಗೆದುಕೊಳ್ಳಲಿ ಇದು ಅವರಿಗೆ ಬಿಟ್ಟಿದ್ದು. ಅಂತರ ಕಾಯ್ದುಕೊಳ್ಳುತ್ತಾರಾ, ತಬ್ಬಿಕೊಳ್ತಾರಾ ಅವರಿಗೆ ಬಿಟ್ಟಿದ್ದು ಎಂದು ವ್ಯಂಗ್ಯವಾಡಿದರು. ಜತೆಗೆ, ಈ ಪ್ರಕರಣದಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ ಎಂದೂ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 am, Wed, 1 May 24