ಪ್ರಜ್ವಲ್ ರೇವಣ್ಣ ಕೇಸ್: ಅಶ್ಲೀಲ ವಿಡಿಯೋಗಳ ಬಗ್ಗೆ ಕೋರ್ಟ್​ ಮುಂದೆ ಸ್ಫೋಟಕ ಸಾಕ್ಷ್ಯ ನುಡಿದ ಕಾರು ಚಾಲಕ

Prajwal Revanna Case: ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಜಾಮೀನು ಸಿಗದೇ ಜೈಲು ಪಾಲಾಗಿದ್ದಾರೆ. ಇದರ ಮಧ್ಯ ಇತ್ತ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಡ್ರೈವರ್​ ಕಾರ್ತಿಕ್​, ಇಂದು(ಮೇ 26) ಕೋರ್ಟ್​ ಮುಂದೆ ಸ್ಫೋಟಕ ಸಾಕ್ಷ್ಯ ನುಡಿದಿದ್ದಾರೆ. ಅಶ್ಲೀಲ ದೃಶ್ಯಾವಳಿಗಳು ಸಿಕ್ಕಿದ್ದು ಹೇಗೆಂಬ ಮಾಹಿತಿ ನೀಡಿರುವ ವಿವರ ಟಿವಿ9ಗೆ ಲಭ್ಯವಾಗಿದ್ದು, ಏನೆಲ್ಲಾ ಹೇಳಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

ಪ್ರಜ್ವಲ್ ರೇವಣ್ಣ ಕೇಸ್: ಅಶ್ಲೀಲ ವಿಡಿಯೋಗಳ ಬಗ್ಗೆ ಕೋರ್ಟ್​ ಮುಂದೆ ಸ್ಫೋಟಕ ಸಾಕ್ಷ್ಯ ನುಡಿದ ಕಾರು ಚಾಲಕ
Prajwal Revanna
Updated By: ರಮೇಶ್ ಬಿ. ಜವಳಗೇರಾ

Updated on: May 26, 2025 | 9:15 PM

ಬೆಂಗಳೂರು, (ಮೇ 26): ಅಶ್ಲೀಲ ವಿಡಿಯೋ (obscene video) ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜೈಲಿನಲ್ಲಿದ್ದು, ಇತ್ತ ಪ್ರಜ್ವಲ್ ರೇವಣ್ಣ ಕಾರಿನ ಚಾಲಕ ಕಾರ್ತಿಕ್​ ಕೋರ್ಟ್​ ಮುಂದೆ ಸ್ಫೋಟಕ ಸಾಕ್ಷ್ಯ ನುಡಿದಿದ್ದಾರೆ. ಪ್ರಜ್ವಲ್ ರೇವಣ್ಣ ಮೊಬೈಲ್​ ನಲ್ಲಿ 2000 ಅಶ್ಲೀಲ ಫೋಟೋ, 40 ರಿಂದ 50 ವಿಡಿಯೋಗಳಿದ್ದವು ಎಂದು ಕಾರ್ತಿಕ್​, ಇಂದು (ಮೇ 26) ಜನಪ್ರತಿನಿಧಿಗಳ ವಿಶೇಷ ಕೋರ್ಟ್ (Special Court) ನಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಅಲ್ಲದೇ ಮೊಬೈಲ್​ ನಲ್ಲಿದ್ದ ಅಶ್ಲೀಲ ವಿಡಿಯೋಗಳು ಹೇಗೆ ಸಿಕ್ಕವು ಎನ್ನುವ ಬಗ್ಗೆ ಕೋರ್ಟ್​ ಮುಂದೆ ಹೇಳಿದ್ದಾರೆ.

ಕೋರ್ಟ್ ಮುಂದೆ ಕಾರ್ತಿಕ್ ನೀಡಿರುವ ಹೇಳಿಕೆ ಇಲ್ಲಿದೆ

2009ರಿಂದ ಹೆಚ್.ಡಿ.ರೇವಣ್ಣ ಬಳಿ ಡ್ರೈವರ್ ಆಗಿದ್ದೆ. ನಂತರ ಭವಾನಿ ರೇವಣ್ಣ, ಸೂರಜ್ ರೇವಣ್ಣ ಕಾರಿಗೂ ಚಾಲಕನಾಗಿದ್ದೆ. 2018ರಿಂದ ಪ್ರಜ್ವಲ್ ರೇವಣ್ಣ ಕಾರು ಚಾಲಕನಾಗಿ ಕೆಲಸ ಮಾಡಿದ್ದೇನೆ.ಆ ಸಂದರ್ಭದಲ್ಲಿ ಕ್ಷೇತ್ರ ಸಂಚಾರ ಮಾಡುತ್ತಿದ್ದಾಗ ಕಾರಿನಲ್ಲೇ ಪ್ರಜ್ವಲ್ ರೇವಣ್ಣ ಮೊಬೈಲ್​ ನಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸುತ್ತಿದ್ದರು. ನಾನು ಅವರ ಕಡೆ ನೋಡಿದಾಗ ಫೋನ್ ತಿರುಗಿಸಿಕೊಳ್ಳುತ್ತಿದ್ದರು ಎಂದು ಕೊರ್ಟ್​ ಮುಂದೆ ಸಾಕ್ಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಪ್ರಜ್ವಲ್​ ರೇವಣ್ಣಗೆ ಮತ್ತೊಂದು ಶಾಕ್ ಕೊಟ್ಟ ಕೋರ್ಟ್

ಪ್ರಜ್ವಲ್ ರೇವಣ್ಣ ಮೊಬೈಲ್ ಪಾಸ್ ವರ್ಡ್ ನನಗೆ ತಿಳಿದಿತ್ತು. ಒಂದು ದಿನ ಜಯನಗರದ ಅವರ ಗೆಳತಿ ಮನೆಗೆ ಹೋದಾಗ ಕಾರಿನಲ್ಲಿ ಮೊಬೈಲ್ ಬಿಟ್ಟಿದ್ದರು.ಆಗ ಮೊಬೈಲ್ ತೆಗೆದು ನೋಡಿದಾಗ ಅಶ್ಲೀಲ ಫೋಟೋ, ವಿಡಿಯೋಗಳಿದ್ದವು. 2000 ಅಶ್ಲೀಲ ಫೋಟೋ, 40 ರಿಂದ 50 ವಿಡಿಯೋಗಳಿದ್ದವು. ಭವಾನಿ ರೇವಣ್ಣರಿಗೆ ತೋರಿಸಲೆಂದು ವಿಡಿಯೋಗಳನ್ನು ವರ್ಗಾಯಿಸಿಕೊಂಡೆ. ಮಗನಿಗೆ ಬುದ್ದಿ ಹೇಳಲಿ ಎಂದು ಭವಾನಿ ರೇವಣ್ಣರಿಗೆ ಮಾಹಿತಿ ನೀಡಿದ್ದೆ ಎಂದಿದ್ದಾರೆ.

ಇದನ್ನೂ ಓದಿ
ಅತ್ಯಾಚಾರ ಕೇಸ್: ಕೋರ್ಟ್​ ಮುಂದೆ ಪರಿ ಪರಿಯಾಗಿ ಬೇಡಿಕೊಂಡ ಪ್ರಜ್ವಲ್-ಭವಾನಿ!
ಅತ್ಯಾಚಾರ ಪ್ರಕರಣ: ಕೇಸ್ ಬೇರೆ ಕೋರ್ಟ್​ಗೆ ವರ್ಗಾಯಿಸಲು ಕೋರಿದ್ದ ಅರ್ಜಿ ವಜಾ
ಅಶ್ಲೀಲಕ್ಕೂ ಒಂದು ಮಿತಿ ಇರಬೇಕ: ಪ್ರಜ್ವಲ್​ ರೇವಣ್ಣಗೆ ಹೈಕೋರ್ಟ್‌ ಚಾಟಿ
ಬಲವಂತವಾಗಿ ಸೀರೆ ಬಿಚ್ಚಿಸಿ ದೌರ್ಜನ್ಯ: ಬಯಲಾಯ್ತು ಪ್ರಜ್ವಲ್ ಕರ್ಮಕಾಂಡ

ಆಗ ಭವಾನಿ ರೇವಣ್ಣ ಅವರು ಫೋಟೋ, ವಿಡಿಯೋ ತಮಗೆ ಕಳುಹಿಸಲು ಕೋರಿದ್ದರು. ಅಲ್ಲದೇ ಬೇರೆಲ್ಲೂ ಈ ವಿಷಯ ಬಹಿರಂಗಪಡಿಸದಂತೆ ಮನವಿ ಮಾಡಿದ್ದರು. ಇದಾದ ಬಳಿಕ ಭವಾನಿ ರೇವಣ್ಣ ಪ್ರಜ್ವಲ್ ಜೊತೆ ಮಾತು ಬಿಟ್ಟಿದ್ದರು. ಹುಟ್ಟುಹಬ್ಬಕ್ಕೆ ಭವಾನಿ ಶುಭ ಕೋರಿದಾಗ ಪ್ರಜ್ವಲ್ ಪ್ರತಿಕ್ರಿಯಿಸಲಿಲ್ಲ. ವಿಡಿಯೋ ಬಗ್ಗೆ ತಿಳಿಸಿದ್ದು ಯಾರೆಂದು ಕೇಳಿದಾಗ ಭವಾನಿ ನನ್ನ ಹೆಸರು ಹೇಳಿದ್ದರು. ಆಗ ಫೋನ್ ಮಾಡಿ ಪ್ರಜ್ವಲ್ ತನಗೆ ಬೈದಿದ್ದಾರೆ ಎಂದು ಚಾಲಕ ಕಾರ್ತಿಕ್ ಕೋರ್ಟ್​​ ಮುಂದೆ ಹೇಳಿದ್ದಾರೆ.

ವಿಡಿಯೋ ಬಹಿರಂಗಗೊಂಡಿದ್ಹೇಗೆ?

ನಮ್ಮ ನಡುವೆ ಜಗಳವಾಗಿ 2022ರಲ್ಲಿ ನಾನು ಕೆಲಸ ಬಿಟ್ಟೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೇಸ್ ಕೂಡಾ ಹಾಕಿದ್ದೆ.ಆಸ್ತಿ ವಿವಾದ ಬಗೆಹರಿಸುತ್ತೇನೆ ಕೆಲಸಕ್ಕೆ ಬರುವಂತೆ ಕರೆದಿದ್ದರು. ಆದರೆ ವಿಡಿಯೋ ಬಹಿರಂಗಪಡಿಸದಂತೆ ತಡೆಯಾಜ್ಞೆ ತಂದರು. ನನ್ನನ್ನು ಪ್ರತಿವಾದಿ ಮಾಡಿದ್ದರಿಂದ ವಕೀಲ ದೇವರಾಜೇಗೌಡರನ್ನು ಸಂಪರ್ಕಿಸಿದೆ. ಸಾಕ್ಷಿಯಾಗಿ ಫೋಟೋಗಳನ್ನು ನೀಡುವಂತೆ ಸೂಚಿಸಿದ್ದರಿಂದ ಪೆನ್ ಡ್ರೈವ್ ನಲ್ಲಿ ನೀಡಿದೆ. ಆದ್ರೆ, ಚುನಾವಣೆ ವೇಳೆ ಫೋಟೋ, ವಿಡಿಯೋಗಳು ಬಹಿರಂಗಗೊಂಡವು ಎಂದು ಕಾರ್ತಿಕ್​, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಸಾಕ್ಷ್ಯ ನುಡಿದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ