ಬಾಣಂತಿಯರು, ಮಕ್ಕಳು, ವಯಸ್ಸಾದವರು, ರೋಗಿಗಳು ಮಾಸ್ಕ್ ಧರಿಸಬೇಕು: ದಿನೇಶ್
ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಕೊರೊನಾ ಪರೀಕ್ಷೆಗೆ ಹಳೆಯ ಮಾರ್ಗಸೂಚಿಗಳನ್ನು ಅನುಸರಿಸಲು ನಿರ್ಧರಿಸಿದೆ. ಲಕ್ಷಣಗಳಿರುವವರಿಗೆ ಮಾತ್ರ ಪರೀಕ್ಷೆ, ಮಕ್ಕಳು, ಗರ್ಭಿಣಿಯರು ಮತ್ತು ಹಿರಿಯರಿಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯ ನಂತರ ಲಸಿಕೆ ನೀಡಲು ಆರಂಭಿಸುವುದಾಗಿ ಸಚಿವರು ಹೇಳಿದ್ದಾರೆ. ಸದ್ಯಕ್ಕೆ ಯಾವುದೇ ತೀವ್ರ ಆತಂಕವಿಲ್ಲ ಎಂದು ಸರ್ಕಾರ ತಿಳಿಸಿದೆ.

ಬೆಂಗಳೂರು, ಮೇ 26: ಕೊರೊನಾ (Covid) ತಪಾಸಣೆ ವಿಚಾರದಲ್ಲಿ ಹಳೆಯ ಪದ್ಧತಿಯನ್ನು ಅನುಸರಿಸುತ್ತೇವೆ. ಅಗತ್ಯವಿರುವ ಎಲ್ಲ ಕ್ರಮಗಳನ್ನ ನಾವು ತೆಗೆದುಕೊಳ್ಳುತ್ತೇವೆ. ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡುವುದಿಲ್ಲ. ಸೋಂಕಿನ ಲಕ್ಷಣ ಇರುವವರಿಗೆ ಮಾತ್ರ ಟೆಸ್ಟ್ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu rao) ಹೇಳಿದರು. ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದರು.
ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಕೇಂದ್ರದಿಂದ ಮಾರ್ಗಸೂಚಿ ಬಂದ ಬಳಿಕ ಲಸಿಕೆ ನೀಡಿಲು ಆರಂಭಿಸುತ್ತೇವೆ. ಕೊರೊನಾ ಸೋಂಕು ಲಕ್ಷಣ ಇರುವ ಮಕ್ಕಳಿಗೆ ಆಯಾ ಶಾಲೆಯ ಆಡಳಿತ ಮಂಡಳಿ ರಜೆ ನೀಡಬೇಕು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ರಜೆ ತೆಗೆದುಕೊಳ್ಳದಂತೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ವಿದೇಶದಿಂದ ಬಂದವರಿಗೆ ಯಾವುದೇ ಟೆಸ್ಟಿಂಗ್ ಮಾಡಲ್ಲ. ಕೋವಿಡ್ ನಿಯಂತ್ರಣಕ್ಕೆ ನಾವು ತಯಾರಾಗಿದ್ದೇವೆ. ಬಾಣಂತಿಯರು, ಮಕ್ಕಳು, 50 ವರ್ಷ ಮೇಲ್ಪಟ್ಟವರು ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡಿದರು.
ಸದ್ಯಕ್ಕೆ ಯಾವುದೇ ಸೀರಿಯಸ್ ಇಲ್ಲ: ಶರಣಪ್ರಕಾಶ್ ಪಾಟೀಲ್
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಗರ್ಭಿಣಿಯರು ಮಾಸ್ಕ್ ಧರಿಸಬೇಕು. ವಯಸ್ಸಾದವರು ಜನಸಂದಣಿ ಇರುವ ಸ್ಥಳಗಳಿಗೆ ತೆರಳಬಾರದು. ರೋಗಲಕ್ಷಣ ಕಂಡುಬಂದರೆ ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಕೋವಿಡ್ ಬಗ್ಗೆ ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಕೋವಿಡ್ ಪ್ರಕರಣಗಳು ಹೆಚ್ಚಾದರೆ ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಯಾವುದೇ ಸೀರಿಯಸ್ ಇಲ್ಲ ಎಂದು ಸಚಿವ ಶರಣಪ್ರಕಾಶ್ ಹೇಳಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ಸೂಚನೆ ಕೊಟ್ಟಿಲ್ಲ. ಹಿರಿಯರು, ಗರ್ಭಿಣಿಯರು, ಮಕ್ಕಳು ಮಾಸ್ಕ್ ಹಾಕಿಕೊಳ್ಳಿ. ಮಕ್ಕಳಿಗೆ ಅನಾರೋಗ್ಯ ಇದ್ದರೇ ಶಿಕ್ಷಕರು ರಜೆ ಕೊಡಬೇಕು. ಟೆಸ್ಟಿಂಗ್ ನಡೆಯುತ್ತಿದೆ. ಪರೀಕ್ಷಾ ಕಿಟ್ಗಳನ್ನು ಕೂಡ ಆರ್ಡರ್ ಮಾಡಲಾಗಿದೆ. ವಿದೇಶದಿಂದ ಬರುವವರು ಸಹ ಕೊವಿಡ್ ಟೆಸ್ಟ್ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಜ್ವರ, ನೆಗಡಿ ಇರುವ ವಿದ್ಯಾರ್ಥಿಗಳಿಗೆ ರಜೆ: ಕೋವಿಡ್ ಬಗ್ಗೆ ಸಭೆಯಲ್ಲಿ ಏನೆಲ್ಲಾ ಆಯ್ತು? ಇಲ್ಲಿದೆ ವಿವರ
ಕೊರೊನಾ ಬಗ್ಗೆ ಬೇಡ ಆತಂಕ: ವೈದ್ಯ
ಕೊರೊನಾ ಕೇಸ್‌ಗಳು ಪತ್ತೆಯಾಗ್ತಿದ್ದರೂ, ಸಾಂಕ್ರಾಮಿಕ ಎಂಬ ಮಟ್ಟದಲ್ಲಿ ಹರಡುತ್ತಿಲ್ಲ. ಹೀಗಾಗಿ ಆತಂಕ ಬೇಡ. ಜನಜಂಗುಳಿ ಪ್ರದೇಶಗಳಲ್ಲಿ ಓಡಾಡುವಾಗ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಿ, ಹ್ಯಾಂಡ್ ಸ್ಯಾನಿಟೈಸ್ ಮಾಡಿಕೊಳ್ಳುವುದು ಉತ್ತಮ ಎಂದು ಕೆ.ಸಿ.ಜನರಲ್ ಆಸ್ಪತ್ರೆಯ ಡಾ.ಮೋಹನ್ ಸಲಹೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:28 pm, Mon, 26 May 25







