ಡಿಜಿ-ಐಜಿಪಿ ಎಂ ಎ ಸಲೀಂ ಆಯ್ಕೆ ಪ್ರಶ್ನಿಸಿ ಪತ್ರ: ಕೋರ್ಟ್ಗೆ ಹೋಗುವ ಎಚ್ಚರಿಕೆ ನೀಡಿದ ವಕೀಲೆ
ಕರ್ನಾಟಕ ಸರ್ಕಾರವು ಡಾ. ಎಂ.ಎ. ಸಲೀಂ ಅವರನ್ನು ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ ನೇಮಿಸಿದ್ದು, ಈ ನೇಮಕಾತಿಯನ್ನು ವಕೀಲೆ ಸುಧಾ ಕಟ್ವಾ ಅವರು ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿ, ನೇಮಕಾತಿಯನ್ನು ರದ್ದುಗೊಳಿಸುವಂತೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಏಳು ದಿನಗಳಲ್ಲಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಅವರು ಪಿಐಎಲ್ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ.

ಬೆಂಗಳೂರು, ಮೇ 26: ಕರ್ನಾಟಕದ ಪ್ರಭಾರಿ ಡಿಜಿ-ಐಜಿಪಿಯಾಗಿ ನೇಮಕವಾಗಿರುವ ಎಂ.ಎ.ಸಲೀಂ (MA Salim) ಅವರಿಗೆ ಸಂಕಷ್ಟ ಎದುರಾಗಿದೆ. ಕನ್ನಡಿಗ, ಹಿರಿಯ ಐಪಿಎಸ್ ಅಧಿಕಾರಿ ಡಾ. ಎಂ.ಎ ಸಲೀಂ ಅವರನ್ನು ರಾಜ್ಯದ ಪೊಲೀಸ್ ಮಹಾನಿರ್ದೇಶಕರನ್ನಾಗಿ (ಪ್ರಭಾರ) ನೇಮಕ ಮಾಡಿ ರಾಜ್ಯ ಸರ್ಕಾರ (Karnataka Government) ಕಳೆದ ಬುಧವಾರ (ಮೇ.21) ಆದೇಶ ಹೊರಡಿಸಿತ್ತು. ಈ ಆದೇಶ ಹಿಂಪಡೆಯುವಂತೆ ವಕೀಲೆ ಸುಧಾ ಕಟ್ವಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಸುಪ್ರೀಂ ಕೋರ್ಟ್‌ನ ಆದೇಶದಂತೆ ಪ್ರಭಾರ ಡಿಜಿ-ಐಜಿಪಿ ನೇಮಿಸುವಂತಿಲ್ಲ. ಯಾವುದೇ ವಿಶೇಷ ಕಾರಣ ನೀಡದೆ, ಅವಧಿ ಉಲ್ಲೇಖಿಸದೆ ಡಿಜಿ-ಐಜಿಪಿ ನೇಮಕ ಮಾಡಲಾಗಿದೆ. ಈ ಮೂಲಕ ಸಂವಿಧಾನ ಮತ್ತು ಕಾನೂನು ಉಲ್ಲಂಘಿಸಲಾಗಿದೆ. ಹೀಗಾಗಿ. ಡಾ. ಎಂ.ಎ.ಸಲೀಂ ಅವರ ನೇಮಕಾತಿ ಹಿಂಪಡೆಯಬೇಕು. ಸುಪ್ರೀಂಕೋರ್ಟ್ ಮಾರ್ಗಸೂಚಿಯಂತೆ ನೇಮಕ ಮಾಡಲಿ. ಏಳು ದಿನಗಳಲ್ಲಿ ನಿಯಮ ಪಾಲಿಸದಿದ್ದರೆ ಪಿಐಎಲ್ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎಂ.ಎ ಸಲೀಂ ನೇಮಕ
ಬುಧವಾರ (ಮೇ.21) ಹಿರಿಯ ಐಪಿಎಸ್ ಅಧಿಕಾರಿ ಡಾ. ಎಂ. ಎ ಸಲೀಂ ಅವರನ್ನು ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಡಿಜಿ-ಐಜಿಪಿ ಡಾ. ಅಲೋಕ್ ಮೋಹನ್ ಅವರ ಸೇವಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಡಾ. ಎಂ. ಎ ಸಲೀಂ ಅವರನ್ನು ಪ್ರಭಾರ ಡಿಜಿ-ಐಜಿಪಿಯಾಗಿ ನೇಮಕ ಮಾಡಿದೆ. ಈ ನೇಮಕವನ್ನು ಪ್ರಶ್ನಿಸಿ ವಕೀಲೆಯೊಬ್ಬರು ಸರ್ಕಾರದ ಸಿಎಸ್ಗೆ ಪತ್ರ ಬರೆದಿದ್ದಾರೆ.
ಡಾ. ಎಂ. ಎ ಸಲೀಂ ಅವರು 1966ರ ಜೂನ್ 25 ರಂದು ಬೆಂಗಳೂರಿನ ಚಿಕ್ಕಬಾಣವರದಲ್ಲಿ ಜನಿಸಿದರು. 1998ರಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1993ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪೊಲೀಸ್ ನಿರ್ವಹಣೆ ಕುರಿತು ಸ್ನಾತಕೋತ್ತರ ಪದವಿ ಪಡೆದ ಅವರು 2010ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಟ್ರಾಫಿಕ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಕನ್ನಡಿಗ ಡಾ. ಎಂ ಎ ಸಲೀಂ ನೇಮಕ
ಡಾ. ಎಂ ಎ ಸಲೀಂ ಅವರು 1993ನೇ ಸಾಲಿನ ಕರ್ನಾಟಕ ಕೇಡರ್ನ ಅಧಿಕಾರಿಯಾಗಿದ್ದಾರೆ. ಡಾ. ಎಂ ಎ. ಸಲೀಂ ಅವರು ಈ ಹಿಂದೆ ಕಲಬುರಗಿಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಕುಶಾಲನಗರ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಡಾ. ಎಂ. ಎ ಸಲೀಂ ಅವರು ಸಿಐಡಿ ಡಿಜಿಪಿಯಾಗಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Mon, 26 May 25



