ಹಾಸನ, ಮಾರ್ಚ್ 3: ಕಾಂಗ್ರೆಸ್ ಗ್ಯಾರಂಟಿ ಸಮಾವೇಶಕ್ಕೆ ಖಾಸಗಿಯಾಗಿ ಕೋಟ್ಯಂತರ ರೂ. ವಸೂಲಿ ಮಾಡಿದೆ ಎಂದು ಹಾಸನ ಜಿಲ್ಲಾಡಳಿತದ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಗಂಭೀರ ಆರೋಪ ಮಾಡಿದ್ದಾರೆ. ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾರ್ಚ್ 1 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಹಾಸನ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಮೂರರಿಂದ ನಾಲ್ಕು ಕೋಟಿ ರೂ. ಖರ್ಚಾಗಿದೆ. ಇದನ್ನ ನಡೆಸಲು ಸರ್ಕಾರದಿಂದ ಹಣ ಕೊಟ್ಟಿಲ್ಲ. ಕ್ರಷರ್, ಕ್ವಾರಿಗಳಿಂದ, ಕೆಲ ಅಧಿಕಾರಿಗಳಿಂದ ವಸೂಲಿ ಮಾಡಿ ಕಾರ್ಯಕ್ರಮ ಮಾಡಿದಾರೆ. ಸುಮಾರು ನಾಲ್ಕು ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಸುರೇಶ್, ಸಹಕಾರ ಸಚಿವ ರಾಜಣ್ಣ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಜನರನ್ನು ಸೇರಿಸಲು ಕೋಟಿ ಕೋಟಿ ವಸೂಲಿ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ನಮ್ಮ ರಾಜ್ಯದಲ್ಲಿ ಕಾರ್ಖಾನೆ ನಿರ್ಮಿಸಿ, ನಮ್ಮವರಿಗೇ ಇಲ್ಲ ಕೆಲಸ; ಕ್ರಮಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಆಗ್ರಹ
ಡಿಸಿ ಅವರೇ ಪಾರದರ್ಶಕವಾಗಿ ಚುನಾವಣೆ ವೇಳೆಯಲ್ಲಿ ಪಕ್ಷಕ್ಕೆ ಸೀಮಿತವಾಗದೆ ಕೆಲಸ ಮಾಡಬೇಕು. ಆದರೆ ಅವರು ಜನರನ್ನು ಕರೆತರಲು ಅಧಿಕಾರಿಗಳಿಗೆ ಜವಾಬ್ದಾರಿ ಕೊಟ್ಟಿದಿನಿ ಅಂತಾರೆ. ಮಹಿಳೆಯರು ಬಂದರೆ ಅಲ್ಲೇ ನೋಂದಣಿ ಮಾಡಿ ಹಣ ಕೊಡುತ್ತಾರೆ ಎಂದು ಹೇಳಿ ಜನರನ್ನು ಕರೆಸಿದಾರೆ ಎಂದಿದ್ದಾರೆ.
MP ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡುತ್ತಾರೆ. ನಮಗೆ ಎಷ್ಟು ಸೀಟ್ ಅನ್ನೋ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೂರು ದಿನದಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್ಗೆ ರವಾನೆ: ಬಿವೈ ವಿಜಯೇಂದ್ರ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೂಡ ಚರ್ಚೆ ಮಾಡಿಕೊಂಡು ಬಂದಿದ್ದಾರೆ. ರಾಜ್ಯದ ಅಭ್ಯರ್ಥಿಗಳ ಪಟ್ಟಿ ಕೆಲವು ವಾರಗಳಲ್ಲಿ ರಿಲೀಸ್ ಮಾಡುತ್ತಾರೆ. ನಮಗೆ ಎಷ್ಟು ಸೀಟ್ ಆದರೂ ಕೊಡಲಿ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:53 pm, Sun, 3 March 24