ಬೆಂಗಳೂರು, ಮಾರ್ಚ್ 25: ಯುಗಾದಿ, ಗೌರಿ ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ ಹೀಗೆ ಹಬ್ಬಗಳ ಸೀಸನ್ (Festival Season) ಬಂತು ಅಂದರೆ ಖಾಸಗಿ ಬಸ್ (Private Bus) ಮಾಲೀಕರಿಗೆ ಭರ್ಜರಿ ಲಾಟರಿ. ಸಿಕ್ಕಿದ್ದೇ ಚಾನ್ಸ್ ಎಂದು ಜನರಿಂದ ದುಪ್ಪಟ್ಟು ವಸೂಲಿಗೆ ಇಳಿದು ಬಿಡುತ್ತಾರೆ. ರಜೆ ಎಂದು ಮನೆ ಕಡೆ ಹೊರಟವರ ಜೇಬಿಗೆ ಗುನ್ನಾ ಇಡುತ್ತಾರೆ. ಇದೀಗ ಯುಗಾದಿ (Ugadi) ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಮೂರು ದಿನಗಳ ರಜೆ ಇದೆ ಎಂದು ಊರಿನ ಕಡೆ ಹೋಗಲು ಸಜ್ಜಾದವರಿಗೆ ಖಾಸಗಿ ಬಸ್ ದರ ಏರಿಕೆ (Private Bus Fare Hike) ಶಾಕ್ ಎದುರಾಗಿದೆ. ಮಾರ್ಚ್- 29 ಯುಗಾದಿ ಹಬ್ಬದ ಅಮಾವಾಸ್ಯೆ ಭಾನುವಾರ ಚಾಂದ್ರಮಾನ ಯುಗಾದಿ, ಸೋಮವಾರ ರಂಜಾನ್, ಹೀಗೆ ಒಟ್ಟು ಮೂರು ದಿನಗಳ ಕಾಲ ರಜೆ ಸಿಗುತ್ತದೆ. ಹೀಗಾಗಿ ಮಾರ್ಚ್ 28 ರ ಶುಕ್ರವಾರ ರಾತ್ರಿ ಊರಿಗೆ ತೆರಳಲು ಜನರು ಪ್ಲಾನ್ ಮಾಡುತ್ತಿದ್ದಾರೆ. ಆದರೆ ಖಾಸಗಿ ಬಸ್ಗಳಲ್ಲಿ ದುಪ್ಪಟ್ಟು ದರ ಏರಿಕೆ ಮಾಡಲಾಗಿದೆ. ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ಎಸಿ ಮತ್ತು ನಾರ್ಮಲ್ ಬಸ್ ದರ ವಿವರ ರೂಪಾಯಿಗಳಲ್ಲಿ)
ಖಾಸಗಿ ಬಸ್ಗಳ ದರ ಏರಿಕೆಯ ಬಗ್ಗೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ ನಟರಾಜ್ ಶರ್ಮ ಅವರನ್ನು ಪ್ರಶ್ನಿಸಿದಾಗ, ದುಪ್ಪಟ್ಟು ದರ ಏರಿಕೆ ಮಾಡಿಲ್ಲ. ಶೇ 50 ರಿಂದ 60 ರಷ್ಟು ಮಾತ್ರ ದರ ಏರಿಕೆ ಮಾಡಿದ್ದೇವೆ. ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಖಾಸಗಿ ಬಸ್ನವರಿಗೆ ಒಂದು ರೂಪಾಯಿ ಕೂಡ ಮೀಸಲಿಡಲಿಲ್ಲ. ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿದೆ. ಬಸ್ ಮಾಲೀಕರು ಹಬ್ಬ ಮಾಡಬೇಕಲ್ಲವೇ? ರೋಡ್ ಟ್ಯಾಕ್ಸ್, ಇನ್ಸುರೆನ್ಸ್, ಹೊಸ ಬಸ್ ಗಳ ಬೆಲೆ, ಸ್ಪೇರ್ ಪಾರ್ಟ್ಸ್ ಸೇರಿದಂತೆ ಪ್ರತಿಯೊಂದರ ದರ ಹೆಚ್ಚಾಗಿದೆ. ಹಾಗಾಗಿ ಹಬ್ಬಗಳ ವೇಳೆ ದರ ಏರಿಕೆ ಮಾಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಯುಗಾದಿ, ರಂಜಾನ್ ಹಬ್ಬದ ಪ್ರಯುಕ್ತ ರಾಜ್ಯದ ಈ ಜಿಲ್ಲೆಗಳಿಗೆ ಬೆಂಗಳೂರು, ಮೈಸೂರಿನಿಂದ ವಿಶೇಷ ರೈಲು
ಒಟ್ಟಿನಲ್ಲಿ ಈ ಬಾರಿಯ ಯುಗಾದಿ-ರಂಜಾನ್ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಖಾಸಗಿ ಬಸ್ಸುಗಳು ದುಪ್ಪಟ್ಟು ದರ ಏರಿಕೆ ಮಾಡಿ ಶಾಕ್ ಕೊಟ್ಟಿರುವುದಂತೂ ಸುಳ್ಳಲ್ಲ.
Published On - 7:30 am, Tue, 25 March 25