ಖಾಸಗಿ ಶಾಲಾ ಮಂಡಳಿ ಹೋರಾಟ: ಸರ್ಕಾರದ ನಿರ್ಧಾರದಿಂದ ಬೇಸತ್ತು ಕಲಬುರಗಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ

ಖಾಸಗಿ ಶಾಲಾ ಮಂಡಳಿ ಹೋರಾಟ: ಸರ್ಕಾರದ ನಿರ್ಧಾರದಿಂದ ಬೇಸತ್ತು ಕಲಬುರಗಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ
ಆತ್ಮಹತ್ಯೆಗೆ ಯತ್ನಿಸಿದ ಪ್ರಕಾಶ್

ಜಿಲ್ಲೆಯ ಜೇವರ್ಗಿ ಪಟ್ಟಣ ಮತ್ತು ಜೇವರ್ಗಿ ತಾಲೂಕಿನ ಸುಂಬಡ ಎನ್ನುವ ಗ್ರಾಮದಲ್ಲಿ ಸಿದ್ದಗಂಗಾ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಪ್ರಕಾಶ್, ಸರ್ಕಾರದ ನಿರ್ಧಾರದಿಂದ ಬೇಸತ್ತು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

preethi shettigar

| Edited By: sadhu srinath

Feb 26, 2021 | 5:49 PM


ಕಲಬುರಗಿ: ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಯ ಮಾಲೀಕ, ಸಾಲಗಾರರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಆತನ ಆತ್ಮಹತ್ಯೆಗೆ ಸರ್ಕಾರ ಮತ್ತು ಸಾಲಗಾರರ ಕಿರುಕುಳವೇ ಕಾರಣ ಎಂದು ಇಂದು ನೂರಾರು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಕ್ಷಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ತಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದೆ ನಾವು ಕೂಡ ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಂದು ಕಡೆ ವ್ಯಕ್ತಿಯೊಬ್ಬರು ಕಣ್ಣೀರು ಹಾಕುತ್ತಿದ್ದರೆ ಮತ್ತೊಂದು ಕಡೆ ಸರ್ಕಾರದ ವಿರುದ್ಧ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಶಾಲೆಗಳನ್ನು ಬಂದ್ ಮಾಡಿ ನೂರಾರು ಸಿಬ್ಬಂದಿ  ಹೋರಾಟದಲ್ಲಿ ಭಾಗಿಯಾಗಿದ್ದು, ಪ್ರತಿಭಟನೆ ನಡೆಸುತ್ತಿರುವಾಗಲೇ ವಿಷ ಸೇವಿಸಿ ಖಾಸಗಿ ಶಾಲೆಯ ಸಿಬ್ಬಂದಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಕಲಬುರಗಿ ಜಿಲ್ಲೆಯ ವಿವೇಕಾನಂದ ನಗರದ ನಿವಾಸಿಯಾಗಿದ್ದ, ಶಂಕರ್ ಬಿರಾದಾರ್ (48) ಇದೇ ತಿಂಗಳ 24ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಕರ್ ಬಿರಾದಾರ್ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜೊತೆಗೆ ಸೇಡಂ‌ ಪಟ್ಟಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯನ್ನು ಕೂಡ ಅನೇಕ ವರ್ಷಗಳಿಂದ ನಡೆಸುತ್ತಿದ್ದರು. ಪರಿಸರ ಎನ್ನುವ ಕವನ ಸಂಕಲನ ಕೂಡ ಬಿಡುಗಡೆ ಮಾಡಿದ್ದರು.

suicide kalburgi

ಆತ್ಮಹತ್ಯೆಗೆ ಯತ್ನಿಸಿದ ಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ದೃಶ್ಯ

ಸೇಡಂ ಪಟ್ಟದಣಲ್ಲಿ ವಿಶ್ವಗಂಗಾ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಶಾಲೆಯನ್ನು ನಡೆಸುತ್ತಿದ್ದ ಶಂಕರ್ ಬಿರಾದಾರ್, ಸಾಲಗಾರರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲಗಾರರ ಕಿರುಕುಳದಿಂದ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದೇನೆ ಎಂದು ಡೆತ್ ನೋಟ್​ನಲ್ಲಿ ಬರೆದಿದ್ದಾರೆ. ಇನ್ನು ಶಂಕರ್ ಬಿರಾದಾರ್ ಅವರ ಸಾವಿಗೆ ಸರ್ಕಾರ ಮತ್ತು ಸಾಲಗರಾರ ಕಿರುಕುಳವೇ ಕಾರಣ. ಹೀಗಾಗಿ ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಇಂದು ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಪ್ರತಿಭಟನೆ ನಡೆಸಿದ್ದಾರೆ.

ಶಂಕರ್ ಬಿರಾದಾರ್ ಸಾವಿಗೆ‌ ಸಾಲಗಾರರ ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದ್ದು, ಅವರು ನಡೆಸುತ್ತಿದ್ದ ಶಾಲೆಯ ಅಭಿವೃದ್ಧಿಗೆ ಅನೇಕರ ಬಳಿ ಸಾಲ ಪಡೆದುಕೊಂಡಿದ್ದಾರೆ. ಈ ಹಿಂದೆ ಸಾಲ ಪಡೆಯುವುದು ಮತ್ತು ಅದನ್ನು ತೀರಿಸುವುದನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಕಳೆದ ವರ್ಷ ಕೊರೊನಾದಿಂದ ಶಾಲೆಗಳು ಮುಚ್ಚಿದ್ದರಿಂದ ಆದಾಯ ನಿಂತು ಹೋಗಿತ್ತು. ಮತ್ತೊಂದಡೆ‌ ಸಾಲ ಕೊಟ್ಟವರ ಕಿರುಕುಳ ಹೆಚ್ಚಾಗುತ್ತಿತ್ತು.

ಇದು ಇವರೊಬ್ಬರದೇ ಸಮಸ್ಯೆ ಅಲ್ಲ. ಕೊರೊನಾದಿಂದ ಖಾಸಗಿ ಶಾಲೆಗಳನ್ನು ನಡೆಸುವ ಪ್ರತಿಯೊಬ್ಬ ಮಾಲೀಕರ ಸ್ಥಿತಿಯಾಗಿದೆ. ಆದರೂ ಕೂಡ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲಾ ಎಂದು ಇಂದು ಖಾಸಗಿ ಶಿಕ್ಷಣ ಸಂಸ್ಥೆಯವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಪ್ರತಿನಿತ್ಯ ಹತ್ತಾರು ಕಾನೂನುಗಳನ್ನು ತರುತ್ತಿದೆ. ಇದರಿಂದ ಶಾಲೆಗಳನ್ನು ನಡೆಸುವುದೇ ಕಷ್ಟವಾಗಿದೆ. ಅಧಿಕಾರಿಗಳು ವಿನಾಕಾರಾಣ ತೊಂದರೆ ಕೊಡುತ್ತಾ ಇದ್ದಾರೆ. ಹೀಗಾದರೆ ನಾವು ಖಾಸಗಿ ಶಾಲೆಗಳನ್ನು ನಡೆಸುವುದು ಹೇಗೆ ಎಂದು ಅನೇಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೊಂದಡೆ ಕೊರೊನಾದಿಂದಾಗಿ ಮಾಡಿದ ಸಾಲವನ್ನು ತೀರಿಸಲಾಗುತ್ತಿಲ್ಲ. ಹೀಗಾಗಿ ಸರ್ಕಾರ ಸಾಲಗಾರರ ಕಾಟದಿಂದ ತಮ್ಮನ್ನು ರಕ್ಷಿಸಬೇಕು ಎಂದು ಇಂದು ಅನೇಕ ಖಾಸಗಿ ಶಾಲೆಗಳ ಮುಖಸ್ಥರು ಪ್ರತಿಭಟನೆ ನಡೆಸಿದರು. ಸರ್ಕಾರ ಮಧ್ಯಪ್ರವೇಶಿಸಿ, ತಮಗಾಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ಸಂದರ್ಭದಲ್ಲಿ ಮೊದಲು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಪ್ರಕಾಶ್ ಎಂಬುವವರು ಪ್ರತಿಭಟನೆಯ ಸಂದರ್ಭದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಜಿಲ್ಲೆಯ ಜೇವರ್ಗಿ ಪಟ್ಟಣ ಮತ್ತು ಜೇವರ್ಗಿ ತಾಲೂಕಿನ ಸುಂಬಡ ಎನ್ನುವ ಗ್ರಾಮದಲ್ಲಿ ಸಿದ್ದಗಂಗಾ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಪ್ರಕಾಶ್, ಸರ್ಕಾರದ ನಿರ್ಧಾರದಿಂದ ಬೇಸತ್ತು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾದ ಹೊಡೆತದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಇದೀಗ, ಸಾಕಷ್ಟು ತೊಂದರೆ ಪಡುತ್ತಿದ್ದಾರೆ. ಇದೀಗ ಅವರ ನೆರವಿಗೆ ರಾಜ್ಯ ಸರ್ಕಾರ ಬರಬೇಕಿದೆ. ಸಾಲ ವಸೂಲಾತಿಯನ್ನು ಕೆಲ ತಿಂಗಳ ಕಾಲ ಮುಂದೂಡುವಂತೆ ಬ್ಯಾಂಕ್​ಗಳಿಗೆ ಸೂಚನೆ ನೀಡಬೇಕಿದೆ. ಇಲ್ಲದಿದ್ದರೆ ರಾಜ್ಯದಲ್ಲಿ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಯ ಮಾಲೀಕರು ಆತ್ಮಹತ್ಯೆಯ ದಾರಿ ಹಿಡಿದರೂ ಅಚ್ಚರಿಯಿಲ್ಲ ಎಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಪ್ರಕಾಶ್ ಹೇಳಿದ್ದಾರೆ.

ಇದನ್ನೂ ಓದಿ: Private School Fees: ಶುಲ್ಕ ಕಡಿತ ಆದೇಶ ಖಂಡಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬೃಹತ್ ಸಮಾವೇಶ


Follow us on

Related Stories

Most Read Stories

Click on your DTH Provider to Add TV9 Kannada