ಚಿರತೆ ಜೊತೆ ಸೆಣಸಾಡಿದ ಬಾಲಕ: ಕುತ್ತಿಗೆಗೆ ಚಿರತೆ ಬಾಯಿ ಹಾಕಿದ್ದರೂ ಛಲ ಬಿಡದ ಛಲದಂಕಮಲ್ಲ!
ಒಂದು ಕ್ಷಣ ಕಕ್ಕಾಬಿಕ್ಕಿಯಾದ ಬಾಲಕ ಏನು ತೋಚದಂತೆ ಆಗಿದ್ದು, ಈ ವೇಳೆ ಚಿರತೆ ಬಾಲಕನ ಕುತ್ತಿಗೆ ಭಾಗವನ್ನ ಹಿಡಿದುಕೊಂಡು ಹೊತ್ತೊಯ್ಯಲು ಮುಂದಾಗಿದೆ. ತಕ್ಷಣ ಚಿರತೆಯಿಂದ ತಪ್ಪಿಸಿಕೊಳ್ಳಲು ಬಾಲಕ ಚಿರತೆ ಕಣ್ಣಿಗೆ ಕೈ ಹಾಕಿ ಪಾರಾಗಿದ್ದಾನೆ.
ಮೈಸೂರು: ಗುಂಡಿಗೆ ಗಟ್ಟಿ ಇದ್ದರೆ ಎಂತಹ ಅಪಾಯವನ್ನಾದರೂ ಜಯಿಸಿಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇಲ್ಲಿದೆ. ಮೈಸೂರಿನ ಬಾಲಕನೊಬ್ಬ ಚಿರತೆ ಬಾಯಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಚಿರತೆ ದಾಳಿ ಮಾಡಿ, ಹೊತ್ತುಕೊಂಡು ಹೋಗಿದ್ದಾಗ, ಚಿರತೆ ಕಣ್ಣಿಗೆ ತಿವಿದು ಬಾಲಕ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾನೆ. ಇನ್ನು ಈತನಿಗೆ ಸಾಥ್ ನೀಡಿದ ತಂದೆ ಪ್ರಾಣದ ಹಂಗು ತೊರೆದು ಮಗನನ್ನು ಉಳಿಸಿದ್ದಾರೆ.
ಮೈಸೂರು ತಾಲೂಕಿನ ಕಡಕೊಳ ಗ್ರಾಮದ ರವಿಕುಮಾರ್ ಹಾಗೂ ಲಕ್ಷ್ಮಿ ಎಂಬುವವರ ಪುತ್ರ ನಂದನ್ ಸದ್ಯ 6ನೇ ತರಗತಿಯಲ್ಲಿ ಓದುತ್ತಿರುವ ಬಾಲಕ. ಪ್ರತಿ ದಿನ ಶಾಲೆ ಮುಗಿಸಿಕೊಂಡು ತಂದೆ ಜೊತೆ ಜಮೀನಿಗೆ ಹೋಗುತ್ತಿದ್ದ. ಅದೇ ರೀತಿ ಕಳೆದ ಶನಿವಾರ ಕೂಡ ಹೋಗಿದ್ದಾನೆ. ಈ ವೇಳೆ ಮನೆಯಲ್ಲಿರುವ ಹಸುಗಳಿಗೆ ಹುಲ್ಲನ್ನು ತೆಗೆದುಕೊಳ್ಳಲು ಪ್ರಾರಂಭ ಮಾಡಿದ್ದು, ಆಗ ಏಕಾಏಕಿ ಬಾಲಕನ ಮೇಲೆ ಹಿಂದಿನಿಂದ ಚಿರತೆ ದಾಳಿ ಮಾಡಿದೆ.
ಒಂದು ಕ್ಷಣ ಕಕ್ಕಾಬಿಕ್ಕಿಯಾದ ಬಾಲಕನಿಗೆ ಏನೂ ತೋಚದಂತೆ ಆಗಿದ್ದು, ಈ ವೇಳೆ ಚಿರತೆ ಬಾಲಕನ ಕುತ್ತಿಗೆಯ ಭಾಗವನ್ನ ಹಿಡಿದು ಹೊತ್ತೊಯ್ಯಲು ಮುಂದಾಗಿದೆ. ತಕ್ಷಣ ಚಿರತೆಯಿಂದ ತಪ್ಪಿಸಿಕೊಳ್ಳಲು ಬಾಲಕ ಪ್ರಯತ್ನ ಪಟ್ಟಿದ್ದಾನೆ. ಆದರೆ ಚಿರತೆ ಬಲವಾಗಿ ಹಿಡಿದುಕೊಂಡಿದ್ದರಿಂದ ಯುವಕನಿಗೆ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ವೇಳೆ ಚಿರತೆ ಕಣ್ಣಿಗೆ ಬೆರಳಿನಿಂದ ತಿವಿದು ಪಾರಾಗಲು ಪ್ರಯತ್ನ ಪಟ್ಟಿದ್ದು, ನಂತರ ಅಲ್ಲೆ ಇದ್ದ ನಂದನ್ ತಂದೆ ಸ್ಥಳಕ್ಕೆ ಬಂದು ಚಿರತೆಯನ್ನು ಎಳೆದು ಮಗನನ್ನ ಚಿರತೆ ಬಾಯಿಂದ ಬಿಡಿಸಿದ್ದಾರೆ.
ಸದ್ಯ ಕಡಕೊಳದ ಬೀರೇಗೌಡನಹುಂಡಿ ಸುತ್ತಮುತ್ತ ಚಿರತೆ ಕಾಟ ಇದೆ ಎಂದು ಈ ಹಿಂದಿನಿಂದಲೂ ದೂರುಗಳು ಕೇಳಿ ಬಂದಿದ್ದವು. ಆದರೆ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಸದ್ಯ ಇನ್ನಾದರೂ ಅರಣ್ಯ ಇಲಾಖೆ ಆದಷ್ಟು ಬೇಗ ಚಿರತೆ ಸೆರೆ ಹಿಡಿಯಬೇಕು ಎಂಬುದು ಸ್ಥಳೀಯರ ಮನವಿ, ಆಗ್ರವಾಗಿದೆ. ಇನ್ನು ನಂದನ್ ತಾಯಿ ಕೂಡ ಇದೇ ವಿಚಾರ ಹೇಳುತ್ತಿದ್ದು, ನನ್ನ ಮಗನಿಗೆ ಆದಂತಹ ಆಘಾತ ಬೇರೆ ಮಕ್ಕಳಿಗೆ ಆಗಬಾರದು. ಆದಷ್ಟು ಬೇಗ ಚಿರತೆಯನ್ನ ಸೆರೆ ಹಿಡಿಯಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಒಟ್ಟಾರೆ, ಚಿರತೆ ಬಾಯಿಗೆ ಆಹಾರವಾಗಬೇಕಿದ್ದ ಬಾಲಕ ದಿಟ್ಟ ಧೈರ್ಯ ಪ್ರದರ್ಶನ ತೋರಿ ಪ್ರಾಣ ಉಳಿಸಿಕೊಂಡಿದ್ದು, ಬಾಲಕನ ಶೌರ್ಯಕ್ಕೆ ನಿಜಕ್ಕೂ ಮೆಚ್ಚಲೆಬೇಕು.
ಇದನ್ನೂ ಓದಿ: ಹೆಂಡತಿ – ಮಗಳ ರಕ್ಷಣೆಗಾಗಿ ಚಿರತೆಯ ಹತ್ಯೆಗೈದ ಅಪ್ಪ, 15 ನಿಮಿಷ ಕಾದಾಡಿ ಆಸ್ಪತ್ರೆ ಸೇರಿದರು!