
ಬೆಂಗಳೂರು, ಫೆಬ್ರವರಿ 28: ರಾಜ್ಯಸಭೆ ಚುನಾವಣೆ ಗೆಲುವಿನ ಬಳಿಕ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ (Pro Pakistan Slogan) ಕೂಗಲಾಗಿದೆ ಎಂಬ ಆರೋಪ ಬುಧವಾರ ವಿಧಾನಸಭೆ ಕಲಾಪದಲ್ಲಿ (Assembly Session) ಕೋಲಾಹಲಕ್ಕೆ ಕಾರಣವಾಯಿತು. ಕಲಾಪ ಆರಂಭವಾಗುವುದಕ್ಕೂ ಮುನ್ನ ಪ್ರತಿಪಕ್ಷ ಬಿಜೆಪಿ ನಾಯಕರು ರಾಷ್ಟ್ರಧ್ವಜ ಹಿಡಿದುಕೊಂಡು ವಿಧಾನಸಭೆಗೆ ಪ್ರವೇಶಿಸಿದರು. ಇದಕ್ಕೆ ಸ್ಪೀಕರ್ ಯುಟಿ ಖಾದರ್ ಆಕ್ಷೇಪ ವ್ಯಕ್ತಪಡಿಸಿ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು. ಇದಕ್ಕೆ ಬಿಜೆಪಿ ಶಾಸಕರಿಂದ ಆಕ್ರೋಶ ವ್ಯಕ್ತವಾಯಿತು. ನಂತರ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka), ಪಾಕ್ ಪರ ಘೋಷಣೆ ವಿಚಾರವನ್ನು ಪ್ರಸ್ತಾಪಿಸಿದರು.
ರಾಜ್ಯದ ಏಳು ಕೋಟಿ ಜನರ ಆತ್ಮ ವಿಧಾನಸೌಧದಲ್ಲಿದೆ. ಇಂಥ ಸ್ಥಳದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ. ಅಂಥವರಿಗೆಲ್ಲ ಇಲ್ಲಿಗೆ ಬರಲು ಅವಕಾಶ ಮಾಡಿಕೊಟ್ಟವರು ಯಾರು? ಇದರಿಂದ ರಾಜ್ಯದ ಜನತೆ ಆತಂಕ್ಕೊಳಗಾಗುವಂತಾಗಿದೆ. ಅವರಿಗೆ ರೆಡ್ ಕಾರ್ಪೆಟ್ ಹಾಸಿ ಇಲ್ಲಿಗೆ ಕರೆಸಿಕೊಂಡಿದ್ದಲ್ಲದೆ ಅವರನ್ನು ಕಳುಹಿಸಿಕೊಟ್ಟವರು ಯಾರು? ಅವರಿಗೆ ಬಿರಿಯಾನಿ ತಿನ್ನಿಸಿ ರಕ್ಷಿಸುತ್ತಿರುವವರು ಯಾರು ಎಂದು ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಆಡಳಿತ ಪಕ್ಷದ ಸದಸ್ಯರು ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ತೆಗೆದುಕೊಂಡು ಪ್ರವೇಶಿಸಿದ್ದ ಹಳೆ ಘಟನೆಯನ್ನು ನೆನಪಿಸಿದರು. ಇದು ಉಭಯ ಪಕ್ಷಗಳ ನಾಯಕರ ನಡುವಣ ವಾಕ್ ಸಮರಕ್ಕೆ ಕಾರಣವಾಯಿತು.
ಲೋಕಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ. ಅಲ್ಲಿ ಒಳಗೆ ನುಗ್ಗಿದ್ದವರನ್ನು ಸರಿಯಾಗಿ ರುಬ್ಬಿದ್ದಾರೆ. ಈಗ ಪಾಕಿಸ್ತಾನ ಪರ ಕೂಗಿದವರನ್ನು ನೀವು ರುಬ್ಬಿದ್ದೀರಾ ಎಂದು ಅಶೋಕ್ ಪ್ರಶ್ನಿಸಿದರು. ಈ ವೇಳೆ ಬಿಜೆಪಿ ಸದಸ್ಯರು ‘ಶೇಮ್ ಶೇಮ್’ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ? ವಿಧಾನಸೌಧದಲ್ಲೇ ಏನಿದೆ ನಮಗೆ ಸುರಕ್ಷತೆ ಎಂದು ಸರ್ಕಾರವನ್ನು ಅಶೋಕ್ ಪ್ರಶ್ನಿಸಿದರು. ರಾಜ್ಯದ ಜನರ ಕಿವಿ ಮೇಲೆ ಹೂವು ಇಡಲು ಹೋಗಬೇಡಿ. ಇಲ್ಲ, ಸುಳ್ಳು, ನಾನು ನೋಡೇ ಇಲ್ಲ ಅಂತೀರಲ್ಲಾ, ಇದನ್ನು ಇಡೀ ರಾಜ್ಯದ ಜನರು ನೋಡಿದ್ದಾರೆ. ಇಲ್ಲಿ ಪಾಕಿಸ್ತಾನದವರೇ ಈ ರೀತಿ ಕೂಗುವುದು. ಭಾರತ ಮಾತೆ ಅನ್ನ, ನೀರು ಕುಡಿಯುವವರು ಪಾಕಿಸ್ತಾನ ಪರ ಘೋಷಣೆ ಕೂಗಲ್ಲ. ನಮಗೆಲ್ಲಾ ಭಯ ಆಗುತ್ತಿದೆ, ಭಯೋತ್ಪಾದಕರು ಬಂದಿದ್ದಾರೋ ಎಂಬುದಾಗಿ. ದೇಶದಲ್ಲಿ ಗಡಿ ಕಾಯುವ ಸೈನಿಕರಿಗೆ ನಾವು ಏನು ಉತ್ತರ ಕೊಡಬೇಕು? ನಾವು ಮಾತಾಡಿದ್ರೆ ನಮ್ಮ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿ ಎಂದು ಅಶೋಕ್ ರೋಷದಿಂದ ಹೇಳಿದರು.
ರಾಷ್ಟ್ರಧ್ವಜದ ಜೊತೆ ಬಂದ ಬಿಜೆಪಿ ನಾಯಕರು
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಧ್ಯಪ್ರವೇಶಿಸಿ, ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆಯನ್ನು ಬಿಜೆಪಿ ಅವರೇ ಮಾಡಿಸಿರಬಹುದು ಎಂದು ಶಂಕಿಸಿದರು. ಇದರಿಂದ ಕೋಲಾಲದ ವಾತಾವರಣ ಸೃಷ್ಟಿಯಾಯಿತು. ನಂತರ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.
ಇದನ್ನೂ ಓದಿ: ಪಾಕ್ ಪರ ಘೋಷಣೆ ಸಾಬೀತಾದ್ರೆ ಕ್ರಮ, ದೇಶ ದ್ರೋಹಿಗಳ ಮಟ್ಟ ಹಾಕಬೇಕಿದೆ: ಸಿಎಂ ಸಿದ್ದರಾಮಯ್ಯ
ಕಲಾಪದ ವೇಳೆ ಕೋಲಾರದ ನಂತರ ಸ್ಪೀಕರ್ ಯುಟಿ ಖಾದರ್ ಆಡಳಿತ ಪಕ್ಷದ ಹಾಗೂ ಪ್ರತಿಪಕ್ಷದ ನಾಯಕರನ್ನು ತಮ್ಮ ಕೊಠಡಿಗೆ ಕರೆಸಿ ಸಂಧಾನ ಸಭೆ ನಡೆಸಿದರು. ಇದು ದೇಶದ ಹಿತಕ್ಕೆ ಸಂಬಂಧಿಸಿದ ವಿಚಾರ. ಆರೋಗ್ಯಯುತ ಚರ್ಚೆ ನಡೆಯಬೇಕಿದೆ. ಆರೋಗ್ಯಕರ ಚರ್ಚೆಯ ಮಧ್ಯೆ ರಾಜಕೀಯವನ್ನು ತರಬೇಡಿ. ಸುಗಮ ಚರ್ಚೆಗೆ ಅನುವು ಮಾಡಿಕೊಡಿ. ಘಟನೆ ಬಗ್ಗೆ ತನಿಖೆ ನಡೆಸಿ ಸರ್ಕಾರ ಉತ್ತರಿಸಲಿ ಎಂದು ತಿಳಿ ಹೇಳಿದರು. ನಂತರ ಕಲಾಪ ಆರಂಭಿಸಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:34 am, Wed, 28 February 24