ಪ್ರಾಸಿಕ್ಯೂಷನ್ ಸಂಕಷ್ಟ: ಹೆಚ್​ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಪ್ರಕರಣಗಳ ವ್ಯತ್ಯಾಸವೇನು? ಇಲ್ಲಿದೆ ವಿವರ

ಒಂದೆಡೆ ಮುಡಾ ಹಗರಣ ಸಂಬಂಧ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಮತ್ತೊಂದೆಡೆ, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್​ಗೆ ಎಸ್​​ಐಟಿ ಅನುಮತಿ ಕೇಳಿದೆ. ಇವೆರಡು ಪ್ರಕರಣಗಳಲ್ಲಿ ಬಹಳ ವ್ಯತ್ಯಾಸವಿದೆ. ಅದೇನು ಎಂಬ ಮಾಹಿತಿ ಇಲ್ಲಿದೆ.

ಪ್ರಾಸಿಕ್ಯೂಷನ್ ಸಂಕಷ್ಟ: ಹೆಚ್​ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಪ್ರಕರಣಗಳ ವ್ಯತ್ಯಾಸವೇನು? ಇಲ್ಲಿದೆ ವಿವರ
ಹೆಚ್​ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
Follow us
|

Updated on:Aug 21, 2024 | 2:18 PM

ಬೆಂಗಳೂರು, ಆಗಸ್ಟ್ 21: ಕೇಂದ್ರ ಹೆಚ್​​ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದ ಪ್ರಕರಣ ಈಗ ಮುನ್ನೆಲೆಗೆ ಬಂದಿದೆ. ಹಳೇ ಕೇಸ್​ಗೆ ಪ್ರಾಸಿಕ್ಯೂಷನ್ ಅನುಮತಿ ಕೊಡಬೇಕು ಎಂದು ಲೋಕಾಯುಕ್ತ ಎಸ್​ಐಟಿ ರಾಜಭವನದ ಮೊರೆ ಹೋಗಿದೆ. ಒಂದು ವೇಳೆ ರಾಜ್ಯಪಾಲರು ಕುಮಾರಸ್ವಾಮಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಲು ಅನುಮತಿ ಕೊಟ್ಟರೆ ಕುಮಾರಸ್ವಾಮಿಗೂ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಏನಿದು ಕುಮಾರಸ್ವಾಮಿ ವಿರುದ್ಧದ ಪ್ರಕರಣ?

2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬಳ್ಳಾರಿಯ ಸಂಡೂರಿನಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್​ಗೆ ಭೂಮಿ ಮಂಜೂರು ಮಾಡಿದ್ದರು. ನಿಯಮ ಉಲ್ಲಂಘಿಸಿ 550 ಹೆಕ್ಟೇರ್​ ಭೂಮಿ ಮಂಜೂರು ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನು 2011ರ ಲೋಕಾಯುಕ್ತರ ವರದಿಯಲ್ಲಿ ಕೂಡ ಉಲ್ಲೇಖ ಮಾಡಲಾಗಿತ್ತು. ಅದಾದ ಬಳಿಕ ಲೋಕಾಯುಕ್ತರು ತನಿಖೆ ಮಾಡಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. 2023ರ ನವೆಂಬರ್ 21ರಂದು ಪ್ರಾಸಿಕ್ಯೂಷನ್​ಗೆ ಅನುಮತಿ ಕೊಡುವಂತೆ ಕೇಳಿದ್ದರು. ಇದೀಗ ಬರೋಬ್ಬರಿ 8 ತಿಂಗಳ ಬಳಿಕ ಲೋಕಾಯುಕ್ತರು ಎಸ್​ಐಟಿಗೆ ಸ್ಪಷ್ಟನೆ ಕೇಳಿದ್ದಾರೆ. ಇದೇ ವರ್ಷ ಜುಲೈ 29ರಂದು ಎಸ್​ಐಟಿಗೆ ಪತ್ರ ಬರೆದಿದ್ದಾರೆ. ಪತ್ರಕ್ಕೆ ಪ್ರತಿಕ್ರಿಯೆ ಕೊಟ್ಟ ಎಸ್​ಐಟಿ ಮುಖ್ಯಸ್ಥರು, ರಾಜ್ಯಪಾಲರಿಗೆ ಆಗಸ್ಟ್ 21ರಂದು ಸ್ಪಷ್ಟನೆ ನೀಡಿದ್ದಾರೆ. ಈ ಸ್ಪಷ್ಟನೆಯಲ್ಲೇ ಚಾರ್ಜ್​ಶೀಟ್​​ ಸಲ್ಲಿಸಲು ಅನುಮತಿ ಕೊಡಿ ಎಂದು ಲೋಕಾಯುಕ್ತರು ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಪ್ರಕರಣಕ್ಕೂ ಇದಕ್ಕೂ ಏನು ವ್ಯತ್ಯಾಸ?

ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣಕ್ಕೂ ಕುಮಾರಸ್ವಾಮಿ ವಿರುದ್ಧದ ಪ್ರಕರಣಕ್ಕೂ ವ್ಯತ್ಯಾಸ ಇದೆ. ಸಿಎಂ ಸಿದ್ದರಾಮಯ್ಯ ಪತ್ನಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ 50:50ರ ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡಿರುವುದಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ನಿಯಮ ಉಲ್ಲಂಘಿಸಿ ಸೈಟ್ ಪಡೆದುಕೊಂಡ ಆರೋಪ ಸಿದ್ದರಾಮಯ್ಯ ಮೇಲಿದೆ. ಈ ವಿಚಾರದಲ್ಲಿ ತನಿಖೆಯೇ ನಡೆದಿಲ್ಲ.

ಆದರೆ, ಕುಮಾರಸ್ವಾಮಿ ಪ್ರಕರಣ ತುಸು ಭಿನ್ನವಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ತನಿಖೆ ಮುಗಿದು ವರದಿ ಸಿದ್ಧವಾಗಿದೆ. ಆದರೆ, ವರದಿ ಸಿದ್ಧವಾಗಿ ಹಲವಾರು ತಿಂಗಳುಗಳ ಬಳಿಕ ಈಗ ಚಾರ್ಜ್​ಶೀಟ್ ಸಲ್ಲಿಕೆಗೆ ಅನುಮತಿ ಕೋರಲಾಗಿದೆ.

ಇಷ್ಟು ದಿನ ಸುಮ್ಮನಿದ್ದಿದ್ದೇಕೆ ಎಸ್​ಐಟಿ: ಬಿಜೆಪಿ ಪ್ರಶ್ನೆ

ಈ ಮಧ್ಯೆ, ಕುಮಾರಸ್ವಾಮಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆಗೆ ಎಸ್​ಐಟಿ ಈಗ ಅನುಮತಿ ಕೇಳಿರುವುದನ್ನು ಜೆಡಿಎಸ್ ಮಿತ್ರ ಪಕ್ಷ ಬಿಜೆಪಿ ಪ್ರಶ್ನಿಸಿದೆ. ದ್ವೇಷದ ರಾಜಕಾರಣ ಎಂದು ಟೀಕಿಸಿರುವ ಬಿಜೆಪಿ, ಇಷ್ಟು ದಿನ ಯಾಕೆ ಸುಮ್ಮನಿದ್ದಿರಿ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಇದಕ್ಕೆಲ್ಲಾ ನಾನು ಹೆದರುವುದಿಲ್ಲ: ಕಾಂಗ್ರೆಸ್ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

ಒಟ್ಟಿನಲ್ಲಿ ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟಿದ್ದಾಗಿದೆ. ಆದರೆ ಇದು ರಾಜಕೀಯ ಸಂಘರ್ಷಕ್ಕೆ ಮತ್ತೊಮ್ಮೆ ನಾಂದಿ ಹಾಡುವುದು ಖಚಿತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Wed, 21 August 24