ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆ
ಕೇಂದ್ರ ಸರ್ಕಾರ ಬ್ಯಾಂಕ್ ಖಾಸಗೀಕರಣದ ತೀರ್ಮಾನ ನಿಲ್ಲಿಸಬೇಕೆಂದು ಆಗ್ರಹಿಸಿ ಎರಡು ದಿನದ ಮುಷ್ಕರಕ್ಕೆ ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆ ಕರೆಕೊಟ್ಟಿದ್ದು, ಬೆಂಗಳೂರು, ಧಾರವಾಡ, ಹಾಸನ ಮತ್ತು ಮೈಸೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಬೆಂಗಳೂರು: ಕೇಂದ್ರ ಸರ್ಕಾರ ಈ ಬಾರಿ ಬಜೆಟ್ನಲ್ಲಿ 2 ಬ್ಯಾಂಕ್ ಖಾಸಗೀಕರಣ ಮಾಡುವುದಾಗಿ ಹೇಳಿತ್ತು. ಬಳಿಕ 4 ಬ್ಯಾಂಕ್ಗಳನ್ನು ಖಾಸಗೀಕರಣಕ್ಕೆ ಒಳಪಡಿಸಲು ಕೇಂದ್ರ ಯತ್ನಿಸಿದೆ. ಇದರಿಂದ ಸಾರ್ವಜನಿಕರ ಹಣ ಖಾಸಗಿಯವರ ಕೈ ಸೇರಲಿದೆ. ಜನರ ಹಣಕ್ಕೆ (ಠೇವಣಿಗೆ) ಯಾವುದೇ ಭದ್ರತೆ ಇರುವುದಿಲ್ಲ. ಈಗಾಗಲೇ ಹಲವು ಖಾಸಗಿ ಬ್ಯಾಂಕ್ಗಳು ಅಕ್ರಮ ಎಸಗಿವೆ ಎಂದು ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆ ಆರೋಪಿಸಿದೆ.
ಈ ನಿಟ್ಟಿನಲ್ಲಿ ಬ್ಯಾಂಕ್ ಖಾಸಗೀಕರಣದಿಂದ ವಿದೇಶಿ ಬಂಡವಾಳದಾರರು ಹಾಗೂ ಉದ್ಯಮಪತಿಗಳ ಕೈಗೆ ಬ್ಯಾಂಕ್ ಹೋಗಲಿದೆ. ಇದು ದೇಶದ ಭವಿಷ್ಯದ ಆರ್ಥಿಕತೆಗೆ ಮುಳುವಾಗಲಿದೆ. ದೇಶದ ಆರ್ಥಿಕತೆ ಖಾಸಗಿ ಕ್ಷೇತ್ರದ ಹಿಡಿತಕ್ಕೆ ಸಿಲುಕಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬ್ಯಾಂಕ್ ಖಾಸಗೀಕರಣದ ತೀರ್ಮಾನ ನಿಲ್ಲಿಸಬೇಕೆಂದು ಆಗ್ರಹಿಸಿ ಎರಡು ದಿನದ ಮುಷ್ಕರಕ್ಕೆ ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆ ಕರೆಕೊಟ್ಟಿದೆ.
ಮೈಸೂರಿನಲ್ಲಿ ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ: ಮೈಸೂರಿನಲ್ಲೂ ಇಂದು ಮತ್ತು ನಾಳೆ ಬ್ಯಾಂಕ್ ನೌಕರರಿಂದ ಪ್ರತಿಭಟನೆ ನಡೆಯಲಿದ್ದು, ಬ್ಯಾಂಕ್‌ಗಳ ಖಾಸಗೀಕರಣಗೊಳಿಸುವ ತೀರ್ಮಾನ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದೇಶವ್ಯಾಪಿ 2 ದಿನಗಳ ಕಾಲ ಮುಷ್ಕರ ನಡೆಯಲಿದೆ. ಮೈಸೂರಿನ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಎಸ್‌ಬಿಐ ನೇತೃತ್ವದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್‌ನಿಂದ ಮೈಸೂರಿನ ಭಾರತೀಯ ಸ್ಟೇಟ್ ಬ್ಯಾಂಕ್ ವಲಯ ಕಛೇರಿ, ಟಿ ಕೆ ಬಡಾವಣೆಯ ಕೆನರಾ ಬ್ಯಾಂಕ್ ವಲಯ ಕಚೇರಿಯಲ್ಲಿ ಹಾಗೂ ನಜರ್ಬಾದ್ನ ವಲಯ ಕಚೇರಿಯ ಬಳಿ ಮುಷ್ಕರ ನಡೆಯುತ್ತಿದೆ.
ಹಾಸನದಲ್ಲಿ ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ: ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣ ವಿರೋದಿಸಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಹಾಸನದಲ್ಲೂ ಬ್ಯಾಂಕ್ ಬಂದ್ ಮಾಡಿ ನೌಕರರು ಹೋರಾಟಕ್ಕಿಳಿದಿದ್ದಾರೆ.ಹಾಸನದ ಎಸ್‌ಬಿಐ ಮುಖ್ಯಶಾಖೆ ಎದುರು ಬ್ಯಾಂಕ್‌ಗಳ ಖಾಸಗೀಕರಣದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು,ಕೇಂದ್ರ ಸರ್ಕಾರ ಖಾಸಗೀಕರಣ ನೀತಿ ಕೈ ಬಿಡಲು ಒತ್ತಾಯ ಮಾಡಿದ್ದಾರೆ.
ಧಾರವಾಡದಲ್ಲಿ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಪ್ರತಿಭಟನೆ: ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ 2 ದಿನ ಮುಷ್ಕರ ನಡೆಯುತ್ತಿದ್ದು, ಧಾರವಾಡದ ಕಾಲೇಜು ರಸ್ತೆಯ ಎಸ್‌ಬಿಐ ಕಚೇರಿ ಬಳಿ ಧರಣಿ ನಡೆಯುತ್ತಿದೆ. ಕೆಲಸ ಬಹಿಷ್ಕರಿಸಿ ನೂರಾರು ಬ್ಯಾಂಕ್ ಸಿಬ್ಬಂದಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಇದನ್ನೂ ಓದಿ: Bank Strike: ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಇಂದಿನಿಂದ 2 ದಿನ ಮುಷ್ಕರ