ಬೆಂಗಳೂರು, ಆಗಸ್ಟ್ 5: ಯಾದಗಿರಿ ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವು ಪ್ರಕರಣ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅದರಲ್ಲೂ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಮತ್ತು ಆವರ ಪುತ್ರ ಪಿಎಸ್ಐ ಬಳಿ ಲಕ್ಷ ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಎಫ್ಐಆರ್ ಆದ ಬಳಿಕ ಅವರಿಬ್ಬರು ದೆಹಲಿಗೆ ಹೇಗೆ ಹೋದರು? ಸರ್ಕಾರವೇ ಶಾಸಕ ಹಾಗೂ ಅವರ ಪುತ್ರನನ್ನು ರಕ್ಷಣೆ ಮಾಡುತ್ತಿದೆ ಎಂದು ಮೃತ ಪಿಎಸ್ಐ ಪತ್ನಿ ಶ್ವೇತಾ ಕಿಡಿಕಾರಿದ್ದಾರೆ.
ಶಾಸಕ ಚೆನ್ನಾರೆಡ್ಡಿ ಮತ್ತು ಅವರ ಪುತ್ರನಿಗೆ ಹಣ ನೀಡಲು ಪಿಎಸ್ಐ ಪರಶುರಾಮ ಪತ್ನಿಯ ಚಿನ್ನಾಭರಣ ಅಡವಿಟ್ಟಿದ್ದು ಬ್ಯಾಂಕ್ನಿಂದ ಪರ್ಸನಲ್ ಲೋನ್ ತಗೊಂಡಿದ್ದರಂತೆ. ಆದರೆ, ಶಾಸಕರು ಕೇಳಿದಷ್ಟು ಹಣ ಕೊಡಲು ಆಗಲ್ಲವೆಂದು ಹೇಳಿಕೊಂಡಿದ್ದ ಎಂದು ಸ್ನೇಹಿತ ಯರಿಸ್ವಾಮಿ ಆರೋಪಿಸಿದ್ದಾರೆ.
ಮತ್ತೊಂದೆಡೆ ಯಾದಗಿರಿ ಪಿಎಸ್ಐ ಪರಶುರಾಮ್ ಸಾವಿಗೂ ಮುನ್ನ ಮಾತನಾಡಿದ್ದರು ಎನ್ನಲಾದ ವಿಡಿಯೋ ವೈರಲ್ ಆಗುತ್ತಿದೆ. ‘ನಾನು 2050 ರ ಮೇ 31 ರಂದು ನಿವೃತ್ತಿ ಆಗುತ್ತೇನೆ’ ಎಂದು ನಗರ ಠಾಣೆ ಎಸ್ಎಸ್ಐ ಹಸನ್ ಪಟೇಲ್ ನಿವೃತ್ತಿ ವೇಳೆ ಮಾತನಾಡಿದ್ದರು. ಇದಾದ 1 ತಿಂಗಳ ಬಳಿಕ ಪರಶುರಾಮ್ ಮೃತಪಟ್ಟಿದ್ದಾರೆ.
ಮೃತ ಪಿಎಸ್ಐ ಪರಶುರಾಮ್ ಸಾವಿನ ಪ್ರಕರವನ್ನೇ ವಿಪಕ್ಷಗಳು ಅಸ್ತ್ರವಾಗಿಸಿಕೊಂಡಿವೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ನಾಯಕರು ಅಬ್ಬರಿಸುತ್ತಿದ್ದಾರೆ. ಇದರ ನಡುವೆ ಪರಶುರಾಮ್ ಪತ್ನಿ ಶ್ವೇತಾ ಜತೆ ಫೋನ್ನಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ.
ಶಾಸಕ ಚೆನ್ನಾರೆಡ್ಡಿ ಮತ್ತು ಆತನ ಪುತ್ರನನ್ನ ಇನ್ನೂ ಬಂಧಿಸಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು. ತನಿಖೆ ಮುಚ್ಚಿಹಾಕುವುದಕ್ಕೆಂದೇ ಸಿಒಡಿ ತನಿಖೆಗೆ ಕೊಟ್ಟಿದ್ದಾರೆ ಎಂದು ಅಶೋಕ್ ಗುಡುಗಿದರು.
ಇದನ್ನೂ ಓದಿ: PSI ಪರಶುರಾಮ್ ಸಾವು: ಸರ್ಕಾರ ಆದೇಶಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ಎಂಟ್ರಿ, ಮೊದಲ ದಿನ ಏನೇನಾಯ್ತು?
ಈ ಮಧ್ಯೆ, ಮೃತ ಪಿಎಸ್ಐ ಪರಶುರಾಮ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುತ್ತೇವೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಪರಮೇಶ್ವರ್ ಹೇಳಿದ್ದಾರೆ. ಆಗಸ್ಟ್ 7ರಂದು ಭೇಟಿ ನೀಡಿ ಸಾಂತ್ವನ ಹೇಳುತ್ತೇನೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ