FDA Exam Scam: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಸಂಚುಕೋರನೇ ಎಫ್‌ಡಿಎ ಅಕ್ರಮಕ್ಕೂ ಕಿಂಗ್‌ಪಿನ್!
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಸಂಚುಕೋರನೇ ಎಫ್‌ಡಿಎ ಅಕ್ರಮಕ್ಕೂ ಕಿಂಗ್‌ಪಿನ್ ಆಗಿದ್ದಾನೆ. ಪಿಎಸ್ಥ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಆರ್.ಡಿ.ಪಾಟೀಲ್ ನಿಗಮ ಮಂಡಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಎ1 ಆರೋಪಿಯಾಗಿದ್ದಾನೆ. ಅಷ್ಟಕ್ಕೂ ಬ್ಲೂಟೂತ್ ಬಳಸಿ ಅಭ್ಯರ್ಥಿಗಳು ಅಕ್ರಮ ಎಸಗುತ್ತಿದ್ದುದು ಹೇಗೆ? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕಲಬುರಗಿ/ಯಾದಗಿರಿ, (ಅಕ್ಟೋಬರ್ 30): ನಿಗಮ-ಮಂಡಳಿಗಳ ವಿವಿಧ ಹುದ್ದೆ(ಎಫ್‌ಡಿಎ)ಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ ಪರೀಕ್ಷೆಯಲ್ಲಿ ಬೆಳಕಿಗೆ ಬಂದ ಬ್ಲೂಟೂತ್ ಅಕ್ರಮದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲನೇ ಎ1 ಆರೋಪಿ. ಕಲಬುರಗಿಯ ಮೂರು ಮತ್ತು ಯಾದಗಿರಿಯ ಐದು ಸೇರಿ ಒಟ್ಟು ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ನಡೆದ ಕನ್ನಡ ಪರೀಕ್ಷೆಯಲ್ಲಿ ಅಕ್ರಮ ಬೆಳಕಿಗೆ ಬಂದಿದ್ದು, ಈ ಸಂಬಂಧ ಒಟ್ಟು 18 ಮಂದಿಯನ್ನು ಬಂಧಿಸಲಾಗಿತ್ತು. ಆರ್.ಡಿ. ಪಾಟೀಲ್‌ನ ತವರೂರು ಕಲಬುರಗಿಯ ಅಫಜಲ್ಪುರದ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ ನಡೆದಿದ್ದು, ಈ ಕೇಂದ್ರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಎಂಟು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇನ್ನು ಈ ಪ್ರಕರಣದಲ್ಲಿ ಆರ್.ಡಿ.ಪಾಟೀಲನನ್ನು ಎ-1 ಆರೋಪಿ ಎಂದು ಪರಿಗಣಿಸಲಾಗಿದೆ. ಆರ್.ಡಿ. ಪಾಟೀಲ್ ಮತ್ತು ಆತನ ಕಡೆಯವರೇ ಬ್ಲೂಟೂತ್ ಡಿವೈಸ್ ಹಾಗೂ ಸರಿ ಉತ್ತರ ಪೂರೈಕೆ ಮಾಡಿದ್ದಾರೆಂದು ಬಂಧಿತರು ನೀಡಿದ ಹೇಳಿಕೆ ಆಧರಿಸಿ ಎ1 ಆರೋಪಿ ಎಂದು ಪರಿಗಣಿಸಲಾಗಿದೆ ಎಂದು ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ಸ್ಪಷ್ಟಪಡಿಸಿದ್ದಾರೆ.
ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ 2021ರಲ್ಲಿ ನಡೆದಿದ್ದ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲೂ ಬ್ಲೂಟೂತ್ ಬಳಸಲಾಗಿತ್ತು. ಈ ಅಕ್ರಮ ಬಯಲಾಗುತ್ತಿದ್ದಂತೆ ಆರ್.ಡಿ.ಪಾಟೀಲ್ ಸೇರಿ ರಾಜ್ಯಾದ್ಯಂತ 107 ಮಂದಿಯನ್ನು ಬಂಧಿಸಲಾಗಿತ್ತು. ಸದ್ಯ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಆರ್.ಡಿ.ಪಾಟೀಲ್ ಹೆಸರು ಮತ್ತೊಂದು ಪರೀಕ್ಷಾ ಅಕ್ರಮದಲ್ಲೂ ಕೇಳಿಬಂದಿದೆ.
ಇದನ್ನೂ ಓದಿ: ಸರ್ಕಾರಿ ಹುದ್ದೆ ಆಸೆಗಾಗಿ 80 ಸಾವಿರ ರೂ. ಸಂಬಳದ ನೌಕರಿ ಬಿಟ್ಟು ಬಂದು ಈಗ ಜೈಲು ಸೇರಿದ
ಬ್ಲೂಟೂತ್ ಬಳಸಿ ಅಕ್ರಮ ಎಸಗುತ್ತಿದ್ದುದು ಹೇಗೆ?
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಮಾದರಿಯಲ್ಲೇ ಕೆಇಎ ಶನಿವಾರ ನಡೆಸಿದ ಪರೀಕ್ಷೆಯಲ್ಲೂ ಬ್ಲೂಟೂತ್ ಬಳಸಿಯೇ ಅಕ್ರಮ ನಡೆಸಲಾಗಿದೆ. ಈ ಹಗರಣದ ಕಿಂಗ್‌ಪಿನ್‌ಗಳು ಡೀಲ್ ಮಾಡಿಕೊಂಡ ಪರೀಕ್ಷಾರ್ಥಿಗಳಿಗೆ ಸಣ್ಣದಾದ ಬ್ಲೂಟೂತ್‌ವೊಂದನ್ನು ಹಣ ಪಡೆದು ಒದಗಿಸುತ್ತಿದ್ದರು. ಅದರ ಮೂಲಕ ಕೀ ಉತ್ತರಗಳನ್ನು ಪರೀಕ್ಷಾ ಕೇಂದ್ರದಲ್ಲಿರುವ ಅಭ್ಯರ್ಥಿಗಳಿಗೆ ಒದಗಿಸಲಾಗುತ್ತಿತ್ತು.
ಕಿವಿಯೊಳಗೆ ಅಡಗಿಸಿಡಬಹುದಾದ ಬರಿಗಣ್ಣಿಗೆ ಸುಲಭವಾಗಿ ಕಾಣಿಸದ ಅತ್ಯಾಧುನಿಕ ಕಿರು ಬ್ಲೂಟೂತ್ ಅನ್ನು ಪರೀಕ್ಷಾ ಅಕ್ರಮಕ್ಕಾಗಿ ಬಳಕೆ ಮಾಡಲಾಗಿದೆ. ಇದಕ್ಕೆ ಪೂರಕ ಸಂಪರ್ಕ ಕಲ್ಪಿಸುವ ಸಿಮ್‌ಕಾರ್ಡ್ ಹೊಂದಿದ ಬ್ಲೂಟೂತ್ ಡಿವೈಸ್ ಅನ್ನು ಶರ್ಟಿನ ಕಾಲರ್, ಅಂಡರ್‌ವೇರ್ ಅಥವಾ ಬನಿಯಾನ್‌ನಲ್ಲಿ ಅಡಗಿಸಿಡಲಾಗಿರುತ್ತದೆ. ಸಿಮ್ ಕಾರ್ಡ್ ಒಳಗೊಂಡ ಈ ಬ್ಲೂಟೂತ್ ಡಿವೈಸ್‌ಗೆ ಹೊರಗಿನ ವ್ಯಕ್ತಿಯೊಬ್ಬ ಕರೆ ಮಾಡುತ್ತಾನೆ. ಆಟೋಮ್ಯಾಟಿಕ್ ಕರೆ ಸಂಪರ್ಕಗೊಂಡು, ಇಯರ್‌ಪೀಸ್ (ಕಿವಿಯೊಳಗೆ ಅಡಗಿಸಿಟ್ಟಿದ್ದ ಸಾಧನ)ದಲ್ಲಿ ಹೊರಗಿನ ವ್ಯಕ್ತಿ ಉತ್ತರ ಹೇಳುವುದು ಸೂಕ್ಷ್ಮವಾಗಿ ಕೇಳಿಸುತ್ತದೆ. ಪರೀಕ್ಷೆ ಮುಗಿಸಿ ಹೊರ ಬಂದ ನಂತರ, ಅದನ್ನು ಅಯಸ್ಕಾಂತ ಬಳಸಿ ಹೊರತೆಗೆಯಲಾಗುತ್ತದೆ ಎನ್ನಲಾಗಿದೆ.
ಅಂಡರ್‌ವೇರ್, ಕಾಲರ್‌ನಲ್ಲೂ ಬ್ಲೂಟೂತ್ ಡಿವೈಸ್!
ಪರೀಕ್ಷಾ ಅಕ್ರಮಕ್ಕಾಗಿ ಅಭ್ಯರ್ಥಿಗಳು ಶರ್ಟ್‌ನ ಕಾಲರ್, ಅಂಡರ್‌ವೇರ್ ಸೇರಿ ಒಳಉಡುಪಿನಲ್ಲಿ ಬ್ಲೂಟೂತ್ ಕನೆಕ್ಟರ್ ಅಳವಡಿಸಿಕೊಂಡಿದ್ದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಯಾದಗಿರಿಯ ನ್ಯೂ ಕನ್ನಡ ಶಾಲೆ ಪರೀಕ್ಷಾ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿದಾಗ ಸುಮ್ಮನೆ ಕೂತಿದ್ದ ಪರೀಕ್ಷಾರ್ಥಿಯೊಬ್ಬನನ್ನು ಅನುಮಾನದ ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಶರ್ಟ್ ಕಾಲರ್‌ನ ತುದಿಯಲ್ಲಿ ಆತ ಬ್ಲೂಟೂತ್ ಕನೆಕ್ಟರ್ ಅಳವಡಿಸಿಕೊಂಡಿದ್ದು ಬೆಳಕಿಗೆ ಬಂದಿದೆ.
ಕಾರ್‌ನಲ್ಲಿ ಕುಳಿತು ತಮ್ಮನಿಗೆ ಉತ್ತರ ಹೇಳುತ್ತಿದ್ದ ಅಕ್ಕ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆ ವೇಳೆ ಪರೀಕ್ಷೆ ಬರೆಯುತ್ತಿದ್ದ ತಮ್ಮನಿಗೆ ಅಕ್ರಮವಾಗಿ ಬ್ಲೂಟೂತ್ ಮೂಲಕ ಉತ್ತರ ಹೇಳಿಕೊಡುತ್ತಿದ್ದ ಅಕ್ಕ ಪೊಲೀಸರ ಕೈಗಿ ಸಿಕ್ಕಿಬಿದ್ದಿದ್ದಾರೆ. ಕಲಬುರಗಿ ಪರೀಕ್ಷಾ ಕೇಂದ್ರದ ಹೊರಗೆ ಕಾರ್‌ನಲ್ಲಿ ಕುಳಿತು ಶೈಲಶ್ರೀ ತಳವಾರ ಎಂಬಾಕೆ ಪರೀಕ್ಷೆ ಬರೆಯುತ್ತಿದ್ದ ಲಕ್ಷ್ಮೀಕಾಂತನಿಗೆ ಫೋನ್‌ನಲ್ಲಿ ಉತ್ತರ ಹೇಳುತ್ತಿದ್ದಳು.
5 ರಿಂದ 8 ಲಕ್ಷ ರೂಪಾಯಿಗೆ ಡೀಲ್
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶನಿವಾರ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಪ್ರಶ್ನೆಪತ್ರಿಕೆಯಲ್ಲಿ ಬ್ಲೂಟೂತ್ ಅಕ್ರಮ ಪ್ರಕರಣದ ಬೆನ್ನತ್ತಿದ್ದಾಗ ಸಿಕ್ಕ ಮಾಹಿತಿ ಖಾಕಿಪಡೆಯನ್ನೇ ಬೆಚ್ಚಿ ಬೀಳಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೇ ಸುಮಾರು 300ಕ್ಕೂ ಹೆಚ್ಚು ಅಭ್ಯರ್ಥಿಗಳ ಜತೆಗೆ ಡೀಲ್ ಕುದುರಿಸಲಾಗಿದೆ, ಅಕ್ರಮಕ್ಕೆ ಬಳಸಾದ ಬ್ಲೂಟೂತ್ ಪೂರೈಸಲೆಂದೇ ಪ್ರತಿ ಅಭ್ಯರ್ಥಿಯಿಂದ ಸುಮಾರು ಎರಡು ಲಕ್ಷ ರೂ. ವರೆಗೆ ಮುಂಗಡ ಪಡೆಯಲಾಗಿದೆ ಎಂಬ ಮಾಹಿತಿ ಇದೆ.
ಪರೀಕ್ಷೆಯಲ್ಲಿ ಪಾಸಾಗಲು ಪ್ರತಿ ಅಭ್ಯರ್ಥಿಯಿಂದ 5ರಿಂದ 8 ಲಕ್ಷ ರೂ. ವರೆಗೆ ವ್ಯವಹಾರ ಕುದುರಿಸಲಾಗಿದೆ. ಪರೀಕ್ಷೆಗೆ ಮುನ್ನ ಬ್ಲೂಟೂತ್ ಡಿವೈಸ್ ಅಳವಡಿಕೆಗೆ ಮುಂಗಡ 1 ರಿಂದ 2 ಲಕ್ಷ ರು. ಹಣ ಪಡೆದಿದ್ದಾರೆನ್ನಲಾಗಿದೆ. ಎರಡು ದಿನಗಳ (ಅ.28 ಹಾಗೂ ಅ.29) ಪರೀಕ್ಷೆಗೆಂದು ಒಂದು ದಿನ ಲಾಡ್ಜ್‌ಗಳಲ್ಲಿ ಉಳಿದು, ಕೇಂದ್ರದ ಸುತ್ತಮುತ್ತಲ ಸ್ಥಳ ವೀಕ್ಷಿಸಿ, ಅಕ್ರಮದ ರೂಪುರೇಷೆ ಸಿದ್ಧಪಡಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಲಾಡ್ಜ್‌ಗಳ ಮೇಲೆ ದಾಳಿ ನಡೆಸಿದ ವೇಳೆ ವಾಕಿಟಾಕಿ, ಬ್ಲೂಟೂತ್ ಡಿವೈಎಸ್ ಸೇರಿ ಅತ್ಯಾಧುನಿಕ ಉಪಕರಣಗಳು ಪತ್ತೆಯಾಗಿದ್ದವು, ಬೆಳಗ್ಗಿನ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಬಾತ್‌ರೂಮಿನಲ್ಲೂ ಬ್ಲೂಟೂತ್ ಸಿಕ್ಕಿದ್ದವು.
ಪಿಎಸ್‌ಐ ನೇಮಕಾತಿ ಅಕ್ರಮ ಆರೋಪಿಗಳೇ ಈ ಕೆಇಎ ಪರೀಕ್ಷೆಯಲ್ಲೂ ಡೀಲ್
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಆರೋಪಿಗಳೇ ಈ ಕೆಇಎ ಪರೀಕ್ಷೆ ಅಕ್ರಮದ ಹಿಂದಿರುವ ಶಂಕೆ ಇದೆ. ಕಲಬುರಗಿಯಲ್ಲಿ ಪಿಎಸ್‌ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಮೇಲೆ ಕೇಸ್ ದಾಖಲಾಗಿರುವುದು ಮತ್ತು ಆರ್.ಡಿ.ಪಾಟೀಲನ ಊರಾದ ಅಫಜಲ್ಪುರದ ಸೊನ್ನ ಗ್ರಾಮದವರ ಹಲವರು ಇರುವುದು ಈ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಏನಿಲ್ಲವೆಂದರೂ ಸುಮಾರು 300ಕ್ಕೂ ಹೆಚ್ಚು ಅಭ್ಯರ್ಥಿಗಳ ಜೊತೆ ಡೀಲ್ ನಡೆಸಲಾಗಿತ್ತು ಎನ್ನುವ ಅಂಶ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಕಂಡು ಬಂದಿದೆ.
ಆರ್.ಡಿ.ಪಾಟೀಲ್‌ಗಾಗಿ ಶೋಧ
ಕೆಇಎ ಪರೀಕ್ಷೆ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಆರ್.ಡಿ.ಪಾಟೀಲ ನಾಪತ್ತೆಯಾಗಿದ್ದು, ಶನಿವಾರ ರಾತ್ರಿಯಿಂದಲೇ ಈತನ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮಹಾರಾಷ್ಟ್ರ ಅಥವಾ ಉತ್ತರಪ್ರದೇಶದಲ್ಲಿ ಈತ ತಲೆಮರೆಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಈತನ ಪತ್ತೆಗೆ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಯಾದಗಿರಿಯಲ್ಲಿ ಬಂಧಿತ ಆರೋಪಿಗಳೆಲ್ಲ ಕಲಬುರಗಿ ಜಿಲ್ಲೆಯ ಅಫಜಲ್ಪುರ ಹಾಗೂ ವಿಜಯಪುರ ಜಿಲ್ಲೆಯವರು. ಬಂಧಿತರಿಂದ 8 ಮೊಬೈಲ್, 4 ಬ್ಲೂಟೂತ್ ಡಿವೈಸ್‌ಗಳು, 2 ವಾಕಿಟಾಕಿ ಹಾಗೂ ನಕಲು ಮಾಡಲು ಅನುಕೂಲವಾಗಲೆಂದೇ ವಿಶೇಷವಾಗಿ ಹೊಲಿಸಲಾಗಿದ್ದ ಅಂಗಿ, ಬನಿಯನ್ ಹಾಗೂ ಒಳ ಉಡುಪುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ