AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚ ಪಡೆಯದೇ ಗುತ್ತಿಗೆದಾರರ ಬಾಕಿ ಬಿಲ್​ 600 ಕೋಟಿ ರೂ. ಬಿಡುಗಡೆ: ಕೆಂಪಣ್ಣ

ಗುತ್ತಿಗೆದಾರರ ಬಾಕಿ ಬಿಲ್​ ಅನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರದ ಅಧಿಕಾರಿಗಳು 40% ಕಮಿಷನ್​​ ಪಡೆಯುತ್ತಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದರು. ಈ ಆರೋಪ ಬೆನ್ನಲ್ಲೇ ಲೋಕೋಪಯೋಗ ಇಲಾಖೆ 600 ಕೋಟಿ ರೂ. ಬಿಡುಗಡೆ ಮಾಡಿದೆ.

ಲಂಚ ಪಡೆಯದೇ ಗುತ್ತಿಗೆದಾರರ ಬಾಕಿ ಬಿಲ್​ 600 ಕೋಟಿ ರೂ. ಬಿಡುಗಡೆ: ಕೆಂಪಣ್ಣ
ಗುತ್ತಿಗೆದಾರ ಕೆಂಪಣ್ಣ
Shivaraj
| Updated By: ವಿವೇಕ ಬಿರಾದಾರ|

Updated on:Feb 13, 2024 | 2:37 PM

Share

ಬೆಂಗಳೂರು, ಫೆಬ್ರವರಿ 13: ರಾಜ್ಯದ 1054 ಸಣ್ಣ ಗುತ್ತಿಗೆದಾರರ (Contractors) ಒಂದು ಕೋಟಿ ರೂಪಾಯಿಗಿಂತ ಕಡಿಮೆ ಬಿಲ್​​ ಇರುವ 600 ಕೋಟಿ ರೂ. ಹಣವನ್ನು ಲೋಕೋಪಯೋಗಿ ಇಲಾಖೆ (PWD) ಯಾವುದೆ ಲಂಚ ಪಡೆಯದೆ ಬಿಡುಗಡೆ ಮಾಡಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಹೇಳಿದರು. ಬೆಂಗಳೂರಿನ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೆ ರೀತಿ ಉಳಿದ ಇಲಾಖೆಯಲ್ಲಿಯೂ ಬಿಡುಗಡೆ ಆಗಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ಕೂಡ ಸಹಕಾರ ನೀಡುತ್ತಿದ್ದಾರೆ. ಬಿಬಿಎಂಪಿಯಲ್ಲಿನ ಬಾಕಿ ಬಿಲ್​​ಗಳ ಬಿಡುಗಡೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಇನ್ನೂ ಒಂದು ವರ್ಷದಲ್ಲಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಹೈಕೋರ್ಟ್ ಸಹ ಇವತ್ತು ಬಿಲ್ ಬಿಡುಗಡೆ ಬಗ್ಗೆ ಹೇಳಿದೆ. ಪ್ಯಾಕೇಜ್ ಸಿಸ್ಟಂ ಆರೋಪಕ್ಕೆ ಗುತ್ತಿಗೆದಾರರ ಸಂಘ ಬದ್ಧವಿದೆ. ಪ್ಯಾಕೇಜ್ ಸಿಸ್ಟಂನಿಂದ ಭ್ರಷ್ಟಾಚಾರ ನಡೆಯುತ್ತಿದೆ. ಪ್ಯಾಕೇಜ್ ಸಿಸ್ಟಂ ರದ್ದು ಮಾಡುವ ಒತ್ತಾಯಕ್ಕೆ ನಮ್ಮ ಸಂಘ ಬದ್ಧವಾಗಿದೆ ಎಂದರು.

40% ಆರೋಪ ಮಾಡಿದ್ದ ಕೆಂಪಣ್ಣ

ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್​ ಕಮಿಷನ್ ಆರೋಪ ಮಾಡಿದ್ದ ರಾಜ್ಯ ಗುತ್ತೆಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು  ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಸಹ ಕಮಿಷನ್ ಆರೋಪ ಮಾಡಿದ್ದರು.  ಯಾವುದೇ ಶಾಸಕರು ಹಾಗೂ ಸಚಿವರ ವಿರುದ್ಧ ಕಮಿಷನ್ ಆರೋಪ ಮಾಡದೆ, ಬದಲಾಗಿ ಅಧಿಕಾರಗಳ ವಿರುದ್ಧ ಆರೋಪಿಸಿದ್ದರು. ಮೊದಲು (ಬಿಜೆಪಿ ಸರ್ಕಾರದ ಅವಧಿ) ಶಾಸಕರು ನೇರವಾಗಿ ಹಣ ಕೇಳುತ್ತಿದ್ದರು. ಈಗ ಅಧಿಕಾರಿಗಳು ಹಣ ಕೇಳ್ಳುತ್ತಿದ್ದಾರೆ. 40% ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲಿ ಮುಂದುವರೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: 40% ಕಮಿಷನ್​ ಆರೋಪ: ಆದೇಶವಿದ್ದರೂ ವಿಚಾರಣೆ ವಿಳಂಬಕ್ಕೆ ಕಾರಣವೇನು?: ಸರ್ಕಾರಕ್ಕೆ ಹೈಕೋರ್ಟ್​​​​ ಪ್ರಶ್ನೆ

ನಿಮಗೆ ಕೆಲಸ ಬೇಕು ಅಂದರೆ ಅಧಿಕಾರಿಗಳು ಹಣ ಕೇಳುತ್ತಿದ್ದಾರೆ. ಹಣ ಕೊಡಿ ಅಂತ ಶಾಸಕರು ಸಚಿವರು ಯಾರು ಕೇಳಿಲ್ಲ. ಆದ್ರೆ ಈ ಸರ್ಕಾರದಲ್ಲಿ ಹಣ ಕೊಡುವಂತೆ ಅಧಿಕಾರಿಗಳು ನೇರವಾಗಿ ಕೇಳುತ್ತಿದ್ದಾರೆ. ಸದ್ಯದರಲ್ಲೆ ಅಧಿಕಾರಿಗಳ ಹೆಸರುಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು.

ಪ್ಯಾಕೇಜ್ ಟೆಂಡರ್ ವಿರುದ್ಧ ಗುಡುಗಿದ ಕೆಂಪಣ್ಣ

ಬಿಬಿಎಂಪಿಯಿಂದ ‌300 ಕೋಟಿ ಪ್ಯಾಕೇಜ್ ಟೆಂಡರ್​​ನ್ನು ಆಹ್ವಾನಿಸಲಾಗಿದೆ. ಈ ಪ್ಯಾಕೇಜ್ ಟೆಂಡರ್ ಮೇಲೆ ಹಲವು ಅನುಮಾನ ಮೂಡಿದೆ. ವಿವಿಧ ಇಲಾಖೆಯಲ್ಲಿ ಅನವಶ್ಯಕ ಪ್ಯಾಕೇಜ್ ಟೆಂಡರ್ ನಡೆದಿವೆ. ಕೂಡಲೆ ಪ್ಯಾಕೇಜ್ ಟೆಂಡರ್ ರದ್ದುಗೊಳಿಸಬೇಕು. ಹಲವು ಬಾರಿ ಸಿಎಂ ಅವರನ್ನು ಭೇಟಿ ಮಾಡಿದ್ದು, ಟೆಂಡರ್ ರದ್ದುಗೊಳಿಸಲು ಮನವಿ ಮಾಡಿದ್ದೇವೆ. ಅಲ್ಲದೆ ಹತ್ತಾರು ಪತ್ರ ಬರೆದು ಸಿಎಂಗೆ ಮನವಿ ಮಾಡಿದ್ದೇವೆ. ಮುಖ್ಯ ಇಂಜಿನಿಯರ್​ಗೆ ಕೇಳಿದರೆ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಾರೆ. ಅವರನ್ನ ಪ್ರಶ್ನಿಸಿದರೆ ಮೇಲಾಧಿಕಾರಿಗಳ ಕಡೆ ತೋರಿಸ್ತಾರೆ. ಅಧಿಕಾರಿಗಳನ್ನ ಕೇಳಿದರೆ ಸಚಿವರು, ಶಾಸಕರ ಕಡೆ ಬೊಟ್ಟು ಮಾಡುತ್ತಾರೆ ಎಂದು ಪ್ಯಾಕೇಜ್ ಟೆಂಡರ್​​ಗಳ ವಿರುದ್ಧ ಗುಡುಗಿದ್ದರು.

ಗುತ್ತಿಗೆದಾರರ ಬಿಲ್​ ಪಾವತಿಸಲು ಸರ್ಕಾರಕ್ಕೆ ಹಣ ಕೇಳಿದ ಬಿಬಿಎಂಪಿ

ರಾಜ್ಯ ಬಜೆಟ್‌ನಲ್ಲಿ ಮೂಲಸೌಕರ್ಯ ಯೋಜನೆಗಳು ಮತ್ತು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು 8,050 ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ. ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಮತ್ತು ನಡೆಯುತ್ತಿರುವ ಕಾಮಗಾರಿಗಳಿಗೆ ಸುಮಾರು 3,000 ಕೋಟಿ ರೂ. ಬೇಕಾಗಿದೆ. ಇನ್ನು ಗುತ್ತಿಗೆದಾರರಿಗೆ ಬಿಬಿಎಂಪಿ ನೀಡಬೇಕಿರುವ ಒಟ್ಟು ಬಾಕಿ ಮೊತ್ತ 2,700 ಕೋಟಿ ರೂಪಾಯಿ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:21 pm, Tue, 13 February 24