ಬೆಂಗಳೂರು, (ಮಾರ್ಚ್ 12): ಲೋಕಸಭಾ ಚುನಾವಣೆಗೆ ( Loksabha Elections 2024) ಈಗಾಗಲೇ ಬಿಜೆಪಿ(BJP) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದ್ರೆ, ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವ ಕ್ಷೇತ್ರವನ್ನು ಬಿಜೆಪಿ ಹೈಕಮಾಂಡ್ ಪರಿಗಣಿಸಿರಲಿಲ್ಲ. ಇದೀಗ ರಾಜ್ಯದ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಇಂದು (ಮಾರ್ಚ್ 12) ರಾತ್ರಿ ಅಥವಾ ನಾಳೆ(ಮಾ.13) ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ ಆಗುತ್ತಿದೆ. ಆದ್ರೆ, ಯಾರಿಗೆಲ್ಲಾ ಟಿಕೆಟ್ ಸಿಗುತ್ತೆ? ಯಾರಿಗೆ ಸಿಗಲ್ಲ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ಮತ್ತು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಭೆ ಮುಗಿಸಿ ದೆಹಲಿಯಿಂದ ವಾಪಸ್ ಬೆಂಗಳೂರಿಗೆ ಆಗಮಿಸಿದ್ದು, ಸಭೆಯಲ್ಲಿ ಏನೆಲ್ಲಾ ಆಯ್ತು? ಯಾರಿಗೆ ಟಿಕೆಟ್? ಯಾವಾಗ ಪಟ್ಟಿ ಬಿಡುಗಡೆಯಾಗುತ್ತೆ ಎನ್ನುವುದರ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಕೆಲ ಕ್ಷೇತ್ರದ ಟಿಕೆಟ್ ಪೆಂಡಿಂಗ್ ಆಗಿವೆ. ಇನ್ನೂ ಕೆಲವು ಮಾತುಕತೆ ಹಂತದಲ್ಲಿದ್ದು, ಇಂದು ಅಥವಾ ನಾಳೆಯೊಳಗೆ ಬಿಜೆಪಿ ಪಟ್ಟಿ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಮಾಹಿತಿ ನೀಡಿದರು.
ಗೆಲ್ಲುವ ಮಾನದಂಡದ ಮೇಲೆ ಅಭ್ಯರ್ಥಿಗಳಿಗೆ ಟಿಕೆಟ್ ತೀರ್ಮಾನ ಮಾಡುತ್ತಿದ್ದಾರೆ. ಹೊಸ ಮುಖಗಳಿಗೂ ಅವಕಾಶ ಕೊಟ್ಟಿದ್ದಾರೆ, ಹಳಬರಿಗೂ ಅವಕಾಶವಿದೆ. ಹಾಲಿ ಸಂಸದರ ಕಾರ್ಯವೈಖರಿ ಬಗ್ಗೆಯೂ ಚರ್ಚೆ ಆಗಿದೆ. ಟಿಕೆಟ್ ವಿಚಾರವಾಗಿ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಇನ್ನು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸಹ ಮಾತನಾಡಿ, ಲೋಕಸಭಾ ಚುನಾವಣೆಗೆ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧವಿದೆ. ನಾಳೆ ಅಥವಾ ನಾಡಿದ್ದು ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಮೊದಲ ಸಭೆಯಲ್ಲಿ ಚರ್ಚೆಯಾಗಿ ಹೆಸರುಗಳು ಶಾರ್ಟ್ಲಿಸ್ಟ್ ಆಗಿತ್ತು. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ನಡ್ಡಾ ಮತ್ತೊಮ್ಮೆ ಪರಾಮರ್ಶಿಸಿದ್ದಾರೆ. 4 ರಿಂದ 5 ಕ್ಷೇತ್ರ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳ ಟಿಕೆಟ್ ಫೈನಲ್ ಆಗಿದೆ. ಮೈತ್ರಿ ಪಕ್ಷಕ್ಕೆ ಕ್ಷೇತ್ರ ಹಂಚಿಕೆ ಬಗ್ಗೆ ವರಿಷ್ಠರೇ ತೀರ್ಮಾನ ಮಾಡುತ್ತಾರೆ. ರಾಜಕಾರಣದಲ್ಲಿ ಯಾವುದೂ ಕಷ್ಟವಿಲ್ಲ, ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ. ವಿರೋಧಿಗಳ ರಣನೀತಿ ಮೇಲೆ ನಾವು ಕೆಲವು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮೂಲಗಳ ಪ್ರಕಾರ ನಿನ್ನೆ(ಮಾರ್ಚ್ 11) ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ 18 ಕ್ಷೇತ್ರಕ್ಕೆ ಹೆಸರು ಫೈನಲ್ ಆಗಿದೆ ಎನ್ನಲಾಗಿದೆ. ಆದ್ರೆ 10 ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬೇಕೆಂಬ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ಬಗ್ಗೆ ಅಮಿತ್ ಶಾ ಮತ್ತೊಂದು ಸುತ್ತಿನ ಸಭೆ ಮಾಡಿ ಅಂತಿಮಗೊಳಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯವಾಗಿ ಹಾಲಿ ಸಂಸದರಾದ ನಳಿನ್ ಕುಮಾರ್ ಕಟೀಲ್(ದಕ್ಷಿಣ ಕನ್ನಡ), ಪ್ರತಾಪ್ ಸಿಂಹ(ಮೈಸೂರು), ಜಿಎಂ ಸಿದ್ದೇಶ್ವರ್(ದಾವಣಗೆರೆ), ರಮೇಶ್ ಜಿಗಜಿಣಗಿ(ವಿಜಯಪುರ), ಅನಂತಕುಮಾರ್ ಹೆಗಡೆ(ಉತ್ತರ ಕನ್ನಡ) ಅವರಿಗೆ ಟಿಕೆಟ್ ಸಿಗುವುದಿಲ್ಲ ಎನ್ನುವುದು ಪಕ್ಕಾ ಆಗಿದೆ. ಹೀಗಾಗಿ ಈ ಎಲ್ಲಾ ಕ್ಷೇತ್ರಗಳಿಗೆ ಹೊಸ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ಮುಂದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ