ರಾಯಚೂರು: ಕುಡಿಯುವ ನೀರು ಸರಬರಾಜು ಘಟಕದಲ್ಲಿ ಸತ್ತ ಇಲಿ ಪತ್ತೆ, ಸಿಬ್ಬಂದಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಕುಡಿಯುವ ನೀರು ಸರಬರಾಜು ಘಟಕದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ರಾಯಚೂರಿನ ಎಲೆಬಿಚ್ಚಾಲಿ ಬಳಿಯ ಬಹುಗ್ರಾಮ ಕುಡಿಯುವ ನೀರಿನ ಘಟಕದಲ್ಲಿ ಸತ್ತ ಇಲಿ ಪತ್ತೆಯಾಗಿದ್ದು ಜನ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
ರಾಯಚೂರು: ಕಲುಷಿತ ನೀರು ಕುಡಿದು ರಾಯಚೂರಿನಲ್ಲಿ ಏಳು ಜನ ಮೃತಪಟ್ಟ ಕಹಿ ಘಟನೆ ಇನ್ನೂ ಮಾಸಿಲ್ಲ.ಈ ದುರಂತದ ಮಧ್ಯೆಯೂ ರಾಯಚೂರಿನ ಏಳು ಹಳ್ಳಿಗಳಿಗೆ ಕಲುಷಿತ ನೀರನ್ನೆ ಸರಬರಾಜು ಮಾಡುತ್ತಿರೊ ಆರೋಪ ಕೇಳಿ ಬಂದಿದೆ. ರಾಯಚೂರು ತಾಲ್ಲೂಕಿನ ಎಲೆ ಬಿಚ್ಚಾಲಿ ಬಳಿಯ ಶುದ್ಧ ಕುಡಿಯುವ ನೀರಿನ ಘಟಕದಿಂದ ಕಲುಷಿತ ನೀರು ಪೂರೈಕೆಯಾಗುತ್ತಿರೊ ಆರೋಪ ಕೇಳಿ ಬಂದಿದೆ
ಶುದ್ದೀಕರಣ ಘಟಕದಲ್ಲಿ ಸತ್ತು ಬಿದ್ದ ಇಲಿ
ರಾಯಚೂರು ತಾಲ್ಲೂಕಿನ ಎಲೆ ಬಿಚ್ಚಾಲಿ ಬಳಿ ಬಹು ಗ್ರಾಮ ಕುಡಿಯೊ ನೀರಿನ ಯೋಜನೆಯಡಿ, ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಆದ್ರೆ ಈ ಬಗ್ಗೆ ನೀರು ಸರಬರಾಜು ಮಾಡೊ ಸಿಬ್ಬಂದಿ, ಅಧಿಕಾರಗಳ ದಿವ್ಯ ನಿರ್ಲಕ್ಷ ವಹಿಸಿದ್ದಾರೆ. ಶುದ್ಧೀಕರಣ ಘಟಕವನ್ನ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅಕ್ರಮಗಳ ತಾಣವಾಗಿರೊ ಈ ಘಟಕದಲ್ಲಿ ಹೇಳೊರು, ಕೇಳೊರು ಇಲ್ಲದಂತಾಗಿದೆ. ಅಷ್ಟೇ ಅಲ್ಲದೆ, ಈ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಇಲಿ, ಹೆಗ್ಗಣಗಳು ಸತ್ತು ಬಿದ್ದಿವೆ. ಇಡೀ ಶುದ್ಧೀಕರಣ ಬಹುತೇಕ ವಿಭಾಗಗಳಲ್ಲಿ ಪಾಚಿ ಕಟ್ಟಿಕೊಂಡಿದೆ. ಆದ್ರೆ ಈ ಬಗ್ಗೆ ಗಮನ ಹರಿಸಿ, ಹೆಗ್ಗಣಗಳ ಹೊರ ತೆಗೆದು ಹೊಸ ನೀರನ್ನ ಪೂರೈಸಿಲ್ಲ. ಹೆಗ್ಗಣ ಸತ್ತು ಬಿದ್ದ ಕಲುಷಿತ ನೀರನ್ನೇ ಏಳು ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ರಾಯಚೂರಿನಲ್ಲಿ ಕಲುಷಿತ ನೀರನ್ನ ಕುಡಿದು ಏಳು ಜನ ಮೃತಪಟ್ಟಿದ್ದಾರೆ. ಆದ್ರು ಬುದ್ದಿ ಕಲಿಯದ ಸಿಬ್ಬಂದಿ, ಅಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು ಮಾತ್ರ ಮತ್ತೆ ಇಂಥಹದ್ದೆ ಬೇಜವಾಬ್ದಾರಿತನದ ಕೆಲಸ ಮಾಡುತ್ತಿರೊ ಆರೋಪ ಕೇಳಿ ಬಂದಿದೆ.
ಪ್ರತಿ ವರ್ಷಕ್ಕೆ 30 ಲಕ್ಷ ನಿರ್ವಹಣಾ ಅನುದಾನ?
2015 ರಲ್ಲಿ ರಾಯಚೂರು ತಾಲ್ಲೂಕಿನ ಎಲೆ ಬಿಚ್ಚಾಲಿ ಬಳಿ ಬಹುಗ್ರಾಮ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ತುಂಗಭದ್ರಾ ನದಿಯಿಂದ ಜಾಕ್ ವೆಲ್ ಮೂಲಕ ಇಲ್ಲಿಗೆ ನೀರು ಹರಿಸಲಾಗಿತ್ತೆ.ನಂತರ ಈ ಘಟಕದಿಂದ ಶುದ್ಧೀಕರಿಸಲಾದ ನೀರನ್ನ, ಬಿಚ್ಚಾಲಿ, ಮಟಮಾರಿ, ಹೀರಾಪುತ, ಪೂರಿತಿಪ್ಲಿ ಸೇರಿ ಏಳು ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಪ್ರತಿವರ್ಷ ಸುಮಾರು ಸುಮಾರು 30 ಲಕ್ಷ ನಿರ್ವಹಣಾ ಅನುದಾನ ಕೊಡಲಾಗುತ್ತಂತೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರ ಇಷ್ಟಿದ್ದರೂ, ಬೇಜವಾಬ್ದಾರಿತನ ಮುಂದುವರೆಸಿದ್ದಾರೆ.ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಕಲುಷಿತಗೊಂಡಿರೊ ನೀರನ್ನ ಶುದ್ಧೀಕರಿಸಿ ಸರಬರಾಜು ಮಾಡಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಘಟಕದಲ್ಲಿ ಪಾಚಿ ಕಟ್ಟುಕೊಂಡಿದ್ದು, ಹೆಗ್ಗಣಗಳು ಸತ್ತು ಬಿದ್ದಿವೆ. ಅದು ಗೊತ್ತಿದ್ದರೂ ಯಾರೂ ಸಮಸ್ಯೆ ಪರಿಹರಿಸುತ್ತಿಲ್ಲ. ಗ್ರಾಮ ಪಂಚಾಯತಿ ಸದಸ್ಯರು ಏನೂ ಮಾಡ್ತಿಲ್ಲ. ಬರ್ತಿನಿ ಮಾಡ್ತಿನಿ ಅಂತಾರೆ, ಆದ್ರೆ ಯಾರೂ ಸಹಾಯ ಮಾಡ್ತಿಲ್ಲ. ಕೂಡಲೇ ನೀರಿನ ಸಮಸ್ಯೆ ಪರಿಹರಿಸಿ ಕೊಡಿ ಎಂದು ಸ್ಥಳೀಯ ಮಹಿಳೆ ರಾಧಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.
ವರದಿ: ಭೀಮೇಶ್ ಪೂಜಾರ್, ಟಿವಿ9 ರಾಯಚೂರು