ತಮ್ಮದೇ ದಾಖಲೆ ಮುರಿದ ಸಾಯಿ ಪಲ್ಲವಿ-ನಾಗ ಚೈತನ್ಯ
Sai Pallavi-Naga Chaithanya: ಸತತವಾಗಿ ನಾಲ್ಕು ಸಿನಿಮಾ ಫ್ಲಾಪ್ ನೀಡಿದ್ದ ನಾಗ ಚೈತನ್ಯಗೆ ‘ತಂಡೇಲ್’ ಸಿನಿಮಾ ಗೆಲುವಿನ ಮೂಲಕ ಮತ್ತೆ ನಗು ಮೂಡಿದೆ. ಅಂದಹಾಗೆ ಈ ಹಿಂದೆ ನಟಿ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಸೃಷ್ಟಿಸಿದ್ದ ದಾಖಲೆಯನ್ನು ಇದೀಗ ಇದೇ ಜೋಡಿ ‘ತಂಡೇಲ್’ ಸಿನಿಮಾದ ಮೂಲಕ ಮುರಿದು ಹಾಕಿದೆ.

ನಟ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಒಟ್ಟಿಗೆ ನಟಿಸಿರುವ ‘ತಂಡೇಲ್’ ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆ ಆಗಿದ್ದು ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಸತತ ನಾಲ್ಕು ಸಿನಿಮಾ ಫ್ಲಾಪ್ ಕೊಟ್ಟ ನಾಗ ಚೈತನ್ಯ, ‘ತಂಡೇಲ್’ ಸಿನಿಮಾದ ಮೂಲಕ ಕೊನೆಗೂ ಒಂದು ಹಿಟ್ ಸಿನಿಮಾ ನೀಡಿದ್ದಾರೆ. ‘ತಂಡೇಲ್’ ಸಿನಿಮಾ ಸ್ವತಃ ನಾಗ ಚೈತನ್ಯ ನಿರೀಕ್ಷೆಗೂ ಮೀರಿ ಹಿಟ್ ಆಗಿದೆ. ನಾಗ ಚೈತನ್ಯರ ಈ ವರೆಗಿನ ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎನಿಸಿಕೊಂಡಿದೆ. ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಜೋಡಿ ತಮ್ಮದೇ ಹಳೆ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ.
ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಒಟ್ಟಿಗೆ ನಟಿಸಿದ್ದ ‘ಲವ್ ಸ್ಟೋರಿ’ ಸಿನಿಮಾ, ನಾಗ ಚೈತನ್ಯ ನಟನೆಯ ಈವರೆಗಿನ ಅತಿ ಹೆಚ್ಚು ಗಳಿಸಿದ ಸಿನಿಮಾ ಎನಿಸಿಕೊಂಡಿತ್ತು. ಶೇಖರ್ ಕಮ್ಮುಲ ನಿರ್ದೇಶಿಸಿದ್ದ ಈ ಸಿನಿಮಾ 2021 ರಲ್ಲಿ ಬಿಡುಗಡೆ ಆಗಿ ಕೋವಿಡ್ ಮಧ್ಯದಲ್ಲೂ ಸುಮಾರು 60 ಕೋಟಿ ಹಣ ಗಳಿಸಿತ್ತು. ಇದೀಗ ‘ತಂಡೇಲ್’ ಸಿನಿಮಾ ಆ ದಾಖಲೆಯನ್ನು ಮುರಿದಿದ್ದು ನೂರು ಕೋಟಿ ಕಲೆಕ್ಷನ್ ಅನ್ನು ದಾಟಿ ಮುಂದೆ ಹೋಗಿದೆ.
‘ಲವ್ ಸ್ಟೋರಿ’ ಸಿನಿಮಾ ಅಂತರ್ಜಾತಿಯ ಪ್ರೇಮ ವಿವಾಹದ ಬಗ್ಗೆ ಕತೆ ಒಳಗೊಂಡಿತ್ತು. ಸಿನಿಮಾದ ಹಾಡುಗಳು, ಕತೆ, ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ನಡುವಿನ ಕೆಮಿಸ್ಟ್ರಿ ಸಖತ್ ಆಗಿ ವರ್ಕ್ ಆಗಿತ್ತು. ಇದೀಗ ಮತ್ತೊಮ್ಮೆ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಒಟ್ಟಿಗೆ ನಟಿಸಿ ಮತ್ತೊಂದು ಬ್ಲಾಕ್ ಬಸ್ಟರ್ ನೀಡಿದ್ದಾರೆ. ಆ ಮೂಲಕ ನಾಗ ಚೈತನ್ಯಗೆ ಸಾಯಿ ಪಲ್ಲವಿ ಅದೃಷ್ಟದ ನಾಯಕಿ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ:100 ಕೋಟಿ ರೂಪಾಯಿ ಸನಿಹದಲ್ಲಿ ‘ತಂಡೇಲ್’ ಕಲೆಕ್ಷನ್; ಸಾಯಿ ಪಲ್ಲವಿ, ನಾಗ ಚೈತನ್ಯ ಫುಲ್ ಖುಷ್
‘ತಂಡೇಲ್’ ಸಿನಿಮಾ ಬಿಡುಗಡೆ ಆದ ಎರಡು ವಾರಕ್ಕೆ 80 ಕೋಟಿಗೂ ಹೆಚ್ಚು ಮೊತ್ತ ಕಲೆ ಹಾಕಿದೆ. ಸೀಮಿತ ಬಜೆಟ್ನಲ್ಲಿ ನಿರ್ಮಾಣ ಮಾಡಿದ ಈ ಸಿನಿಮಾ ಚಿತ್ರಮಂದಿರದಲ್ಲಿಯೇ 100 ಕೋಟಿ ಕಲೆಕ್ಷನ್ ದಾಟಲಿದೆ ಎಂದು ನಿರ್ಮಾಪಕ ಅಲ್ಲು ಅರವಿಂದ್ ಹೇಳಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ಹಿಟ್ ಆಗಿರುವ ಕಾರಣಕ್ಕೆ ಒಟಿಟಿಯಲ್ಲಿಯೂ ಸಿನಿಮಾಕ್ಕೆ ಡಿಮ್ಯಾಂಡ್ ಸೃಷ್ಟಿಯಾಗಿದ್ದು ಅಲ್ಲಿಯೂ ಸಹ ಉತ್ತಮ ಲಾಭವನ್ನೇ ಈ ಸಿನಿಮಾ ಪಡೆದುಕೊಳ್ಳುವುದು ಪಕ್ಕಾ.
2021 ರಲ್ಲಿ ಬಿಡುಗಡೆ ಆದ ‘ಲವ್ ಸ್ಟೋರಿ’ ಸಿನಿಮಾದ ಬಳಿಕ ನಾಗ ಚೈತನ್ಯ ನಟನೆಯ ನಾಲ್ಕು ಸಿನಿಮಾಗಳು ಒಂದರ ಹಿಂದೊಂದರಂತೆ ಪ್ಲಾಪ್ ಆಗಿದ್ದವು. ‘ಬಂಗಾರ್ರಾಜ’, ‘ಥ್ಯಾಂಕ್ ಯು’, ‘ಲಾಲ್ ಸಿಂಗ್ ಛಡ್ಡ’ ಮತ್ತು ‘ಕಸ್ಟಡಿ’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದ್ದವು. ‘ತಂಡೇಲ್’ ಸಿನಿಮಾ ಸಹ ಸೋತಿದ್ದರೆ ನಾಗ ಚೈತನ್ಯ ಭವಿಷ್ಯದ ಬಗ್ಗೆ ಪ್ರಶ್ನೆಗಳು ಏಳುತ್ತಿದ್ದವು. ಅಂಥಹಾ ಸಮಯದಲ್ಲಿ ಈ ಹಿಟ್ ಸಿಕ್ಕಿರುವುದು ನಾಗ ಚೈತನ್ಯಗೆ ದೊಡ್ಡ ಹುರುಪು ತುಂಬಿದೆ. ಇದೀಗ ತಂಡೇಲ್ ನಿರ್ದೇಶನ ಮಾಡಿರುವ ಚಂದೂ ಮೊಂಡೇಟಿ ಜೊತೆಗೆ ತೆನಾಲಿ ರಾಮಕೃಷ್ಣನ ಜೀವನ ಆಧರಿಸಿದ ಕತೆಯಲ್ಲಿ ನಟಿಸಲಿದ್ದಾರೆ ನಾಗ ಚೈತನ್ಯ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ