‘ಬಿಲ್ಲಾ ರಂಗ ಭಾಷಾ’ ಸಿನಿಮಾ ಶುರು ಯಾವಾಗ, ದಿನಾಂಕ ತಿಳಿಸಿದ ಸುದೀಪ್
Kichcha Sudeep: ಸುದೀಪ್ ಪ್ರಸ್ತುತ ಸಿಸಿಎಲ್ ಕ್ರಿಕೆಟ್ ಟೂರ್ನಿಮೆಂಟ್ನಲ್ಲಿ ಬ್ಯುಸಿಯಾಗಿದ್ದಾರೆ. ಕರ್ನಾಟಕ ತಂಡ ಉತ್ತಮವಾಗಿ ಆಟವಾಡುತ್ತಿದೆ. ಈ ಬಾರಿ ಸಿಸಿಎಲ್ನ ಪ್ರಮುಖ ಪಂದ್ಯಗಳು ಮೈಸೂರಿನಲ್ಲಿ ನಡೆಯಲಿವೆ. ಈ ವಿಷಯವನ್ನು ಖುಷಿಯಿಂದ ಹಂಚಿಕೊಂಡಿರುವ ಸುದೀಪ್ ಅದರ ಜೊತೆಗೆ ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಶೂಟಿಂಗ್ ವಿಷಯವನ್ನೂ ಹಂಚಿಕೊಂಡಿದ್ದಾರೆ.

ಸುದೀಪ್ ಪ್ರಸ್ತುತ ‘ಸಿಸಿಎಲ್’ ಕ್ರಿಕೆಟ್ ಟೂರ್ನಿಮೆಂಟ್ನಲ್ಲಿ ಬ್ಯುಸಿಯಾಗಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಈ ವರೆಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಸುದೀಪ್ ಸೇರಿದಂತೆ ಡಾರ್ಲಿಂಗ್ ಕೃಷ್ಣ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಇನ್ನೂ ಕೆಲವು ಆಟಗಾರರು ಬಹಳ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಸಿಸಿಎಲ್ ಟೂರ್ನಿಯಲ್ಲಿ ಬ್ಯುಸಿಯಾಗಿರುವ ಹೊತ್ತಿನಲ್ಲಿಯೇ ಸುದೀಪ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಪ್ರಮುಖವಾದ ಅಪ್ಡೇಟ್ ಒಂದನ್ನು ನೀಡಿದ್ದಾರೆ.
ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. 2024ರ ಬ್ಲಾಕ್ ಬಸ್ಟರ್ ಕನ್ನಡ ಸಿನಿಮಾ ಎನಿಸಿಕೊಂಡಿದೆ ‘ಮ್ಯಾಕ್ಸ್’. ‘ಮ್ಯಾಕ್ಸ್’ ಜೊತೆಗೆ ಹೆಸರಿಡದ ಸಿನಿಮಾ ಒಂದರಲ್ಲಿ ಸುದೀಪ್ ನಟಿಸುತ್ತಿದ್ದು, ಸಿನಿಮಾಕ್ಕೆ ಕೆಆರ್ಜಿ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದಾರೆ. ಇದರ ಜೊತೆಗೆ ಸುದೀಪ್ ನಟಿಸಲಿರುವ ‘ಬಿಲ್ಲಾ ರಂಗ ಭಾಷಾ’ ಸಿನಿಮಾಕ್ಕಾಗಿ ಅಭಿಮಾನಿಗಳು ಬಹಳ ಸಮಯದಿಂದಲೇ ಕಾಯುತ್ತಿದ್ದರು. ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣಕ್ಕೆ ಮುಂಚೆಯೇ ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಘೋಷಣೆ ಆಗಿತ್ತು. ಆದರೆ ಆ ಸಿನಿಮಾದ ಯಾವುದೇ ಅಪ್ಡೇಟ್ ಹೊರಬಿದ್ದಿರಲಿಲ್ಲ. ಇದೀಗ ಸುದೀಪ್, ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ಯಾವಾಗ ಶುರುವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಸಿಸಿಎಲ್ನಲ್ಲಿ ಬ್ಯುಸಿಯಾಗಿರುವ ಸುದೀಪ್ ನಿನ್ನೆಯಷ್ಟೆ ಟ್ವೀಟ್ ಒಂದನ್ನು ಮಾಡಿ, ‘ಸಿಸಿಎಲ್ ಮೈಸೂರಿಗೆ ಬರುತ್ತಿದೆ. ಎರಡು ಸೆಮಫೈನಲ್ಸ್ ಮತ್ತು ಒಂದು ಫೈನಲ್ಸ್ ಮಾರ್ಚ್ 1 ಮತ್ತು 2 ರಂದು ಮೈಸೂರಿನಲ್ಲಿ ನಡೆಯಲಿದೆ. ಈ ವಿಷಯ ಘೋಷಿಸುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ’ ಎಂದು ಟ್ವೀಟ್ ಮಾಡಿದ್ದರು. ನಂತರ ಅದೇ ಟ್ವೀಟ್ ಅನ್ನು ರೀಟ್ವೀಟ್ ಮಾಡುತ್ತಾ, ‘ಅಂದಹಾಗೆ ಬಿಬಿಆರ್ (ಬಿಲ್ಲಾ ರಂಗ ಭಾಷಾ) ಸಿನಿಮಾ ಮಾರ್ಚ್ 2ನೇ ವಾರದಿಂದ ಚಿತ್ರೀಕರಣ ಆರಂಭ ಆಗಲಿದೆ’ ಎಂದು ಬರೆದಿದ್ದಾರೆ.
ಇದನ್ನೂ ಓದಿ:ಸಿಸಿಎಲ್ಗೂ ಮೊದಲು ಪುನೀತ್ ಸಮಾಧಿಗೆ ಟಾಲಿವುಡ್ ಸೆಲೆಬ್ರಿಟಿಗಳ ಭೇಟಿ
ಸುದೀಪ್ರ ಟ್ವೀಟ್ಗೆ ಅಭಿಮಾನಿಗಳು ಖುಷಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ‘ಬಿಲ್ಲಾ ರಂಗ ಭಾಷಾ’ ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾವನ್ನು ಇದೇ ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದರು. ಸುದೀಪ್ಗೆ ‘ಬಿಲ್ಲಾ ರಂಗ ಭಾಷಾ’ ಮತ್ತು ‘ಅಶ್ವತ್ಥಾಮ’ ಎರಡು ಕತೆಯನ್ನು ಅನುಪ್ ಭಂಡಾರಿ ಹೇಳಿದ್ದರು. ಮೊದಲಿಗೆ ‘ಬಿಲ್ಲಾ ರಂಗ ಭಾಷಾ’ ಪ್ರಾರಂಭವಾಗುತ್ತಿದ್ದು, ಈ ಸಿನಿಮಾ ಮುಗಿದ ಬಳಿಕ ಇದೇ ಜೋಡಿ ‘ಅಶ್ವತ್ಥಾಮ’ ಸಿನಿಮಾ ಪ್ರಾರಂಭ ಆಗಲಿದೆ.
ಸುದೀಪ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಆರ್ಜಿ ಪ್ರೊಡಕ್ಷನ್ಸ್ನ ಹೊಸ ಸಿನಿಮಾದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. ಅದಾದ ಬಳಿಕ ತಮಿಳಿನ ಚೇರನ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ತಮಿಳಿನ ಮತ್ತೊಬ್ಬ ನಿರ್ದೇಶಕರ ಸಿನಿಮಾದಲ್ಲಿಯೂ ಸುದೀಪ್ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ