ರಾಯಚೂರು, ಮಾರ್ಚ್ 25: ಹಕ್ಕಿ ಜ್ವರದ ಆತಂಕದಿಂದ ಇನ್ನೇನು ಕರ್ನಾಟಕ (Karnataka) ಜನತೆ ನಿಟ್ಟುಸಿರುಬಿಟ್ಟರು ಎನ್ನುವಾಗಲೇ ಮತ್ತೊಂದು ಮಾರಕ ಸೋಂಕು ಹರಡುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯದೆಲ್ಲೆಡೆ ಈಗ ಬೆಕ್ಕುಗಳಿಗೆ (Cats) ವಕ್ಕರಿಸಿದ ಮಾರಣಾಂತಿಕ ಎಫ್ಪಿವಿ ವೈರಸ್ (Feline panleukopenia virus) ಸೋಂಕು ಹರಡುತ್ತಿರುವುದು ತಿಳಿದುಬಂದಿದೆ. ಹೀಗಾಗಿ ಮನೆಗಳಲ್ಲಿ ಬೆಕ್ಕು ಸಾಕುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ವೈರಸ್ ಸೋಂಕಿನಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿವೆ ಬೆಕ್ಕುಗಳು. ಜಿಲ್ಲೆಯಲ್ಲಷ್ಟೇ ಅಲ್ಲದೆ, ರಾಜ್ಯದ ವಿವಿದೆಡೆ ವೈರಸ್ ಸೋಂಕು ಹರಡುತ್ತಿದೆ. ರಾಯಚೂರಿನಲ್ಲಿ ಕಳೆದ ಒಂದು ತಿಂಗಳಲ್ಲಿ ನೂರಕ್ಕೂ ಹೆಚ್ಚು ಬೆಕ್ಕುಗಳಲ್ಲಿ ವೈರಾಣು ಪತ್ತೆಯಾಗಿದೆ.
ವೈರಸ್ ಸೋಂಕು ತಗುಲಿದಲ್ಲಿ ಬೆಕ್ಕುಗಳು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಸೋಂಕು ತಗುಲಿದೆ 100 ಬೆಕ್ಕುಗಳಲ್ಲಿ 99 ಸಾವನ್ನಪ್ಪುವ ಸಾಧ್ಯತೆ ಇದೆ.
ಒಂದು ಕಡೆ 10 ಬೆಕ್ಕುಗಳಿದ್ದರೆ, ಆ ಪೈಕಿ ಒಂದು ಬೆಕ್ಕಿಗೆ ವೈರಸ್ ಸೋಂಕು ತಗಲಿದರೆ ಕೆಲವೇ ಸೆಕೆಂಡುಗಳಲ್ಲಿ ಸಮೀಪದ ಎಲ್ಲಾ ಬೆಕ್ಕುಗಳಿಗೂ ವೈರಸ್ ಹರಡುತ್ತದೆ. ಇದರಿಂದಾಗಿ ಬೆಕ್ಕು ಸಾಕಾಣಿಕೆ ಮಾಡುವವರಿಗೆಬೆ, ಕ್ಕುಗಳನ್ನು ಹೊಂದಿರುವವರಿಗೆ ಆತಂಕ ಉಂಟಾಗಿದೆ.
ಕೊರೊನಾ ವೈರಸ್ ರೀತಿ ಎಫ್ಪಿವಿ ವೈರಾಣು ಸೋಂಕಿಗೂ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ.
ರಾಯಚೂರಿನಲ್ಲಿ ಸದ್ಯ 150 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 100 ಕ್ಕೂ ಹೆಚ್ಚು ಬೆಕ್ಕುಗಳು ಚಿಕಿತ್ಸೆ ಫಲಕಾರಿಯಾಗದೇ ಈಗಾಗಲೇ ಮೃತಪಟ್ಟಿವೆ. ಬೀದಿ ಬೆಕ್ಕುಗಳು, ಸಾಕು ಬೆಕ್ಕುಗಳಲ್ಲಿ ವೈರಸ್ ಪತ್ತೆಯಾಗಿದೆ.
ಎಫ್ಪಿವಿ ವೈರಸ್ ತಗುಲಿದರೆ ಮೂರು ಹಂತದಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೊದಲ ಹಂತದಲ್ಲಿ ವಾಂತಿ, ಬೇಧಿ, ನಿರ್ಜಲೀಕರಣ ಉಂಟಾಗುತ್ತದೆ. ಎರಡನೆ ಹಂತದಲ್ಲಿ ಹೆಚ್ಚಿನ ತಾಪದೊಂದಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಮೂರನೇ ಹಂತದಲ್ಲಿ ನಿಶ್ಯಕ್ತಿ, ಖಿನ್ನತೆ ಉಂಟಾಗುತ್ತದೆ.
ಇದನ್ನೂ ಓದಿ: ನಿರ್ಗತಿಕರ ಆಶ್ರಮಕ್ಕೆ ಹೆಗಲಾದ ರಾಯಚೂರಿನ ಪೊಲೀಸ್ ಪಡೆ: ಫೋಟೋಸ್ ನೋಡಿ
ಎಫ್ಪಿವಿ ವೈರಸ್ ಮಾನವರಿಗೆ ಮತ್ತು ನಾಯಿಗಳಿಗೆ ಅಷ್ಟಾಗಿ ಅಪಾಯ ಉಂಟು ಮಾಡುವುದಿಲ್ಲ ಎಂದು ಎಡಿನ್ಬರ್ಗ್ ಅನಿಮಲ್ ಹಾಸ್ಪಿಟಲ್ ತಜ್ಞರು ತಿಳಿಸಿದ್ದಾರೆ. ಆದಾಗ್ಯೂ, ಮಾನವರು ಧರಿಸಿದ ಬಟ್ಟೆ, ಬೂಟುಗಳು ಅಥವಾ ಕೈಗಳ ಸಂಪರ್ಕಕ್ಕೆ ಬಂದ ವೈರಸ್ ಆ ಮೂಲಕ ಬೆಕ್ಕುಗಳಿಗೆ ಹರಡುವ ಸಾಧ್ಯತೆಯಿದೆ.