- Kannada News Photo gallery Raichur: Police staff Build Shelter for Destitute Elderly in Sindhanur, taja suddi
ವೃದ್ಧಾಶ್ರಮಕ್ಕೆ ಕಟ್ಟಡ ನಿರ್ಮಿಸಿಕೊಟ್ಟ ಖಾಕಿ: ನಿರ್ಗತಿಕರ ಆಶ್ರಮಕ್ಕೆ ಹೆಗಲಾದ ರಾಯಚೂರು ಪೊಲೀಸ್ ಪಡೆ
ರಾಯಚೂರು ಜಿಲ್ಲೆಯ ಸಿಂಧನೂರಿನ ಕಾರುಣ್ಯ ವೃದ್ಧಾಶ್ರಮಕ್ಕೆ 2005ನೇ ಬ್ಯಾಚ್‌ನ ಪೊಲೀಸ್ ಸಿಬ್ಬಂದಿ ಹೊಸ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ವೃದ್ಧರು ಮತ್ತು ನಿರ್ಗತಿಕರಿಗೆ ಆಶ್ರಯ ನೀಡುವ ಈ ಆಶ್ರಮದಲ್ಲಿ ವಸತಿ ಸೌಕರ್ಯದ ಕೊರತೆಯನ್ನು ಪೊಲೀಸರು ಪರಿಹರಿಸಿದ್ದಾರೆ. ಪೊಲೀಸ್ ಪಡೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Updated on:Mar 24, 2025 | 6:00 PM

ಅವರಿಗೆಲ್ಲಾ ಕುಟುಂಬಗಳಿದ್ದರೂ ಅನಾಥರು. ವಯೋ ಸಹಜ ಖಾಯಲೆಗಳು, ಬುದ್ಧಿಮಾಂದ್ಯ ವಯಸ್ಕರರು. ಹೀಗೆ ನಾನಾ ರೀತಿಯ ನಿರ್ಗತಿಕರಿಗೆ ಆ ಆಶ್ರಮ ಆಶ್ರಯ ಕೊಡುತ್ತಿದೆ. ಆದರೆ ಇದೀಗ ಆ ಆಶ್ರಮಕ್ಕೆ ಖಾಕಿಧಾರಿಗಳ ತಂಡ ಹೆಗಲಾಗಿ ನಿಂತಿದ್ದು, ಆಶ್ರಮಕ್ಕೆ ಸೂರು ಕಲ್ಪಿಸಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ವೃದ್ಧಾಶ್ರಮವೊಂದರಲ್ಲಿ ಸಾಕಷ್ಟು ವೃದ್ಧ ನಿರ್ಗತಿಕರು ಬದುಕು ನಡೆಸ್ತಿದ್ದಾರೆ. ಸಿಂಧನೂರು ಪಟ್ಟಣದ ಹೊರ ಭಾಗದಲ್ಲಿರುವ ಕಾರುಣ್ಯ ಅನ್ನೋ ಆಶ್ರಮ ದಶಕಗಳಿಂದ ಆಶ್ರಯ ನೀಡುತ್ತಿದ್ದು, ಪುಣ್ಯದ ಕೆಲಸ ಮಾಡುತ್ತಿದೆ.

ಯಾರಾದರೂ ವೃದ್ಧರನ್ನ ಬಿಟ್ಟು ಹೋಗಬಹುದು, ಪೊಲೀಸ್ ಇಲಾಖೆ ಅವರು ಸೂಚಿಸುವ ಭಿಕ್ಷುಕರು, ಅನಾಥರನ್ನ ಈ ಆಶ್ರಮದವವರು ಜೋಪಾನ ಮಾಡ್ತಾರೆ. ಆದರೆ ಹಂತಹಂತವಾಗಿ ನಿರ್ಗತಿಕರ ಸಂಖ್ಯೆ ಹೆಚ್ಚಾಗ್ತಿರೊದ್ರಿಂದ ವಸತಿಗೆ ಸಮಸ್ಯೆ ಉಂಟಾಗಿತ್ತು. ಆದರೆ ಇದೀಗ ಆ ವಸತಿ ಸಮಸ್ಯೆಯನ್ನ ಪೊಲೀಸ್ ಪಡೆ ನಿಭಾಯಿಸಿದ್ದು, ಈ ಆಶ್ರಮಕ್ಕೆ ಕಟ್ಟಡ ಕಟ್ಟಿಸಿ ಕೊಟ್ಟಿದ್ದಾರೆ.

ರಾಯಚೂರಿನ 2005 ನೇ ಬ್ಯಾಚ್‌ನ ಸಿವಿಲ್ ಸರ್ವಿಸ್ನ ಪೊಲೀಸ್ ಸಿಬ್ಬಂದಿ ಇಲಾಖೆಗೆ ಸೇರಿ 20 ವರ್ಷಗಳಾಗಿವೆ. ನಿತ್ಯ ಬರೀ ಕ್ರೈಂ, ಬಂದೋಬಸ್ತ್, ಕಾನೂನು-ಸುವ್ಯಸ್ಥೆ, ವಿವಾದ ಬಗೆಹರಿಸೋದು, ಟ್ರಾಫಿಕ್ ಕಿರಿಕಿರಿ ಸರಿಪಡಿಸುವ ಕೆಲಸ ಮಾಡ್ತಿದ್ದ ಈ 2005 ನೇ ಬ್ಯಾಚ್‌ನ ಸಿಬ್ಬಂದಿ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ.

ತಮ್ಮ ವೃತ್ತಿ ಜೀವನ ಆರಂಭವಾಗಿ 20 ವರ್ಷಗಳಾದ ಹಿನ್ನೆಲೆ ಸಮಾಜಕ್ಕ ಒಂದೊಳ್ಳೆ ಸಂದೇಶ ಕೊಡುವ ನಿಟ್ಟಿನಲ್ಲಿ, ಈ ಸಿಬ್ಬಂದಿ ನಿರ್ಗತಿಕರ ಲಾಲನೆ, ಪಾಲನೆ ಮಾಡುತ್ತಿರುವ ಕಾರುಣ್ಯ ಆಶ್ರಮಕ್ಕೆ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ. ಸುಮಾರು 80ಕ್ಕೂ ಹೆಚ್ಚು ಸಂಖ್ಯೆಯನ್ನ ಹೊಂದಿರುವ ಈ ಬ್ಯಾಚ್‌ನ ಪೊಲೀಸ್ ಸಿಬ್ಬಂದಿ ಪ್ರತಿ ವರ್ಷ ಒಂದಲ್ಲಾ ಒಂದು ರೀತಿ ಕಾರ್ಯಕ್ರಮಗಳನ್ನ ಮಾಡುತ್ತಾ ವಿನೂತನ ಸೇವೆ ಸಲ್ಲಿಸುತ್ತಿದ್ದಾರೆ. ಅದರ ಭಾಗವಾಗಿ ಮುಗ್ಧ ಜೀವಿಗಳು ಬದಕು ನಡೆಸ್ತಿರುವ ಆಶ್ರಮಕ್ಕೆ ಆಶ್ರಮ ಧಾಮ ಹೆಸರಿನಲ್ಲಿ ಕಟ್ಟಡ ಕಟ್ಟಿಸಿ ಕೊಟ್ಟಿದ್ದು, ರಾಯಚೂರು ಎಸ್ಪಿ ಪುಟ್ಟಮಾದಯ್ಯ ಉದ್ಘಾಟಿಸಿದರು.

ವಿವಿಧ ಕಾರ್ಯಕ್ರಮಗಳನ್ನ ಮಾಡ್ತಾ ಆಚರಣೆ ಹೆಸರಲ್ಲಿ ಮೋಜು ಮಸ್ತಿ ಮಾಡುವ ಈ ಕಾಲದಲ್ಲಿ ಪೊಲೀಸ್ ಪಡೆ, ಬಡತನದಲ್ಲಿ ಬಡವರ ಸೇವೆ ಮಾಡುತ್ತಿರುವ ಈ ಆಶ್ರಮಕ್ಕೆ ಹೆಗಲು ಕೊಟ್ಟಿದ್ದು, ಸಾರ್ವಜನಿಕರ ಮೆಚ್ಚುಗೆ ಕಾರಣವಾಗಿದೆ.
Published On - 5:33 pm, Mon, 24 March 25



















