ರಾಯಚೂರು, (ಮಾರ್ಚ್.27): ರಾಯಚೂರು ಲೋಕಸಭಾ (Raichur Loksabha Election) ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲಿಯೇ ಕಾರ್ಯಕರ್ತರಲ್ಲಿ ಅಸಮಧಾನ ಸ್ಫೋಟಗೊಂಡಿದ್ದು, ಇದರಿಂದಾಗಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ ಮತ್ತು ನಾಯಕರುಗಳಿಗೆ ಹೊಸ ಸಂಕಟ ಶುರುವಾಗಿದೆ. ಬಿಜೆಪಿಯಿಂದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಟಿಕೆಟ್ ನೀಡಿದ್ದರಿಂದ ಬಿ.ವಿ ನಾಯಕ್ ಆಕ್ರೋಶಗೊಂಡಿದ್ದು, ಮತ್ತೊಮ್ಮೆ ಸಮೀಕ್ಷೆ ಮಾಡಿ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇಲ್ಲದಿದ್ದರೆ ಮುಂದಿನ ನಡೆ ಬೇರೆಯಾಗಿರುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮರು ಸಮೀಕ್ಷೆ ಮಾಡಿ ಅಂತಿಮ ನಿರ್ಧಾರ ಮಾಡಬೇಕು. ಎರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಿ. ಇಲ್ಲದಿದ್ದರೆ ಮುಂದಿನ ಕೆಲವೇ ದಿನಗಳಲ್ಲಿ ಕಾರ್ಯಕರ್ತರ ಆಶಯದಂತೆ ಅಂತಿಮ ತೀರ್ಮಾನ ನಾನೇ ತೆಗೆದುಕೊಳ್ಳುತ್ತೇನೆ. ನಾನು ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ವಿರೋಧಿ ಅಲ್ಲ. ಇನ್ನೂ ಅವರು ಹತ್ತು ಬಾರಿ ಸಂಸದರಾಗಲಿ. ಆದ್ರೆ ಜನರ ಅಭಿಪ್ರಾಯ, ಕಾರ್ಯಕರ್ತರ ಅಭಿಪ್ರಾಯದ ಅನ್ವಯ ಟಿಕೆಟ್ ನೀಡಬೇಕಿತ್ತು. ಐದು ವರ್ಷದ ಅವರು ಏನು ಕೆಲಸ ಮಾಡಿದ್ದಾರೆ. ಏನೆಲ್ಲಾ ಅಭಿವೃದ್ಧಿ ಆಗಿದೆ ಅನ್ನೋದನ್ನ ಕಾರ್ಯಕರ್ತರಿಂದ ತಿಳಿದುಕೊಳ್ಳಬೇಕು ಎಂದು ಎಂದು ಡೆಡ್ಲೈನ್ ಜೊತೆಗೆ ಎಚ್ಚರಿಕೆ ನೀಡಿದರು.
ಟಿಕೆಟ್ ಆಕಾಂಕ್ಷಿಯಾಗಿದ್ದ ಬಿವಿ ನಾಯಕ್ ಅವರು ಇಂದು (ಮಾರ್ಚ್ 27) ರಾಯಚೂರಿನಲ್ಲಿ ಇಂದು ಅಭಿಮಾನಿ, ಬೆಂಬಲಿಗರ ಸಭೆ ನಡೆಸಿದರು. ಈ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕಗೆ ಗೋಬ್ಯಾಕ್ ಘೋಷಣೆಯನ್ನು ಕೂಗಲಾಗಿದೆ. ಬಳಿಕ ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿ.ವಿ. ನಾಯಕ ಅವರಿಗೆ ಬಿಜೆಪಿ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈ ವೇಳೆ ಬಿವಿ ನಾಯಕ್ ಬೆಂಬಲಿಗರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೂ ಸಹ ನಡೆದಿದೆ. ಗಾಂಧಿ ಚೌಕ್ನಲ್ಲಿ ಟೈರ್‌ಗೆ ಬೆಂಕಿ ಹಚ್ಚಿದ ಬೆನ್ನಲ್ಲೇ ಶಿವಕುಮಾರ್ ಮತ್ತು ಶಿವಮೂರ್ತಿ ಎನ್ನುವರು ತಮ್ಮ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸಹ ಕಾರ್ಯಕರ್ತರು ಪೆಟ್ರೋಲ್ ಕ್ಯಾನ್ ಕಸಿದುಕೊಂಡು ತಡೆದಿದ್ದಾರೆ.
ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಬಿವಿ ನಾಯಕ್, ಬಸವರಾಜ್ ಬೊಮ್ಮಾಯಿ ಅವರ ಆದಿಯಾಗಿ ರಾಜ್ಯ ನಾಯಕರು ಬಹಿರಂಗವಾಗಿ ಪ್ರಚಾರ ಮಾಡಿ ಎಂದು ನನಗೆ ಹೇಳಿದ್ದರು. ಬಿ ಫಾರ್ಮ್ ಕೊಡಿಡುತ್ತೇವೆ ಎಂದು ಹೇಳಿದ್ದರು. ಜನರು, ಕಾರ್ಯಕರ್ತರು, ಮುಖಂಡರ ವಿರೋಧದ ಮಧ್ಯೆ ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದೆ. ಯಾಕೆ ರಾಜ್ಯ ನಾಯಕರು ನನಗೆ ಮೋಸ ಮಾಡಬೇಕಿತ್ತು. ಯಾಕೆ ಆತ್ಮಗೌರವಕ್ಕೆ ಧಕ್ಕೆ ತಂದ್ರಿ ಎಂದು ಪ್ರಶ್ನಿಸಿದರು.
ಪಕ್ಷದ ಟಿಕೆಟ್ ಮರು ವಿಮರ್ಶೆ ಮಾಡಲಿ. ಒಂದು ವೇಳೆ ಅದನ್ನ ಪುರಸ್ಕರಿಸದೇ ಇದ್ರೆ ಮುಂದಿನ ನಡೆ ಏನು ಎನ್ನುವುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆಂದು ಪರೋಕ್ಷವಾಗಿ ಬಿಜೆಪಿ ತೊರುವ ಎಚ್ಚರಿಕೆ ಸಂದೇಶ ರವಾನಿಸಿದರು. ಇನ್ನು ಪಕ್ಷೇತರರಾಗಿ ಸ್ಪರ್ಧಿಸುವಂತೆ ಕಾರ್ಯಕರ್ತರ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆ ಅಂದ್ರೆ ಹುಡುಗಾಟಿಕೆ ಅಲ್ಲ. ಮಂಡ್ಯದಲ್ಲಿ ಹೇಗೆ ಜನರ ಮನಸ್ಥಿತಿ ಇತ್ತೋ, ಹಾಗಿರಬೇಕು. ಅದಕ್ಕೆ ಇನ್ನೂ ಕಾಲ ಪಕ್ವವಾಗಿಲ್ಲ ಎಂದು ಹೇಳಿದರು. ಅಲ್ಲದೇ ಪರೋಕ್ಷವಾಗಿ ಪಕ್ಷೇತರವಾಗಿ ನಿಲ್ಲುವುದು ಅಷ್ಟು ಸುಲಭವಲ್ಲ, ನಿಲ್ಲುವುದಿಲ್ಲ ಎನ್ನುವ ಅರ್ಥದಲ್ಲಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.