ಮನೆ, ಅಂಗಡಿ-ಮುಂಗಟ್ಟು ಆಯ್ತು: ಈಗ ರಾಯಚೂರಿನಲ್ಲಿ ಕಳ್ಳರಿಗೆ ಬಿಳಿ ಬಂಗಾರ ಟಾರ್ಗೆಟ್
ಮನೆ-ಮಠ,ಅಂಗಡಿ-ಮುಂಗಟ್ಟುಗಳನ್ನ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ಸಾಲದಕ್ಕೆ ಖದೀಮರು ಈರುಳ್ಳಿ, ಟೊಮೆಟೊ ಸೇರಿದಂತೆ ಡಿಮ್ಯಾಂಡ್ ಇರುವ ರೈತರ ತರಕಾರಿಗಳನ್ನು ಸಹ ಕದ್ದೊಯ್ದಿರುವ ಪ್ರಕರಣಗಳು ನಡೆದಿವೆ. ಅದರಂತೆ ಇದೀಗ ಬಿಳಿ ಬಂಗಾರ ಎಂದೇ ಖ್ಯಾತಿ ಪಡೆದುಕೊಂಡಿರುವ ಹತ್ತಿಯನ್ನು ಟಾರ್ಗೆಟ್ ಮಾಡಿದ್ದಾರೆ.ಇದರಿಂದ ರಾಯಚೂರಿನ ರೈತರಲ್ಲಿ ಆತಂಕ ಮನೆ ಮಾಡಿದೆ.

ರಾಯಚೂರು, (ಡಿಸೆಂಬರ್ 09): ಕಳ್ಳರಿಗೆ ಬೆಲೆ ಬಾಳುವ ವಸ್ತುಗಳೇ ಟಾರ್ಗೆಟ್. ಅದರಂತೆ ರಾಯಚೂರಿನಲ್ಲಿ (Raichur) ಬಿಳಿ ಬಂಗಾರ ಎಂದೇ ಕರೆಯಲ್ಪಡುವ ಹತ್ತಿಯನ್ನು (cotton) ಟಾರ್ಗೆಟ್ ಮಾಡಿದ್ದು, ರೈತರು ಮನೆಯಲ್ಲಿ ಕೂಡಿಟ್ಟಿರುವ ಹತ್ತಿಯನ್ನು ಕದಿಯುತ್ತಿದ್ದಾರೆ. ಹೌದು… ರಾಯಚೂರು ತಾಲ್ಲೂಕಿನ ಕಡಗಂದೊಡ್ಡಿ ಎನ್ನುವ ಹಳ್ಳಿಯಲ್ಲಿ ರೈತ ಬೆಳೆದಿದ್ದ ಹತ್ತಿಯನ್ನು ಕಳ್ಳತನ ಮಾಡಿದ್ದಾರೆ. ಸಾಲಸೋಲ ಮಾಡಿ ಕಷ್ಟಪಟ್ಟು ಬೆಳೆದ ಹತ್ತಿಯನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.
ಕಡಗಂದೊಡ್ಡಿ ಗ್ರಾಮದ ರೈತ ಖಾಜಾ ಹುಸೇನ್ ತನ್ನ ಮೂರು ಎಕರೆ ಜಮೀನಿನಲ್ಲಿ ಹತ್ತಿ ಬೆಳೆದಿದ್ದ. ತಾಯಿ ಸಹಾಯದೊಂದಿಗೆ ಸಾಲಸೋಲ ಮಾಡಿ ಹತ್ತಿ ಬೆಳೆದಿದ್ದ.ಒಂದು ಕಡೆ ನಿರಂತರ ಮಳೆ ಹೊಡೆತದಿಂದ ತತ್ತರಿಸಿದ್ದ ಹತ್ತಿ ಬೆಳೆಯನ್ನ ಈ ರೈತ ಖಾಜಾ ಹುಸೇನ್ ರಕ್ಷಿಸಿ ಅಳಿದುಳಿದಿದ್ದನ್ನ ಬಿಡಿಸಿ ಮನೆಯಲ್ಲಿರಿಸಿಕೊಂಡಿದ್ದ. ಇನ್ನಷ್ಟು ಒಳ್ಳೆ ರೇಟ್ ಬರ್ಲಿ ಎಂದು ಸ್ಟಾಕ್ ಮಾಡಿದ್ದ. ಆದ್ರೆ ದುರಂತ ಅಂದ್ರೆ ರಾತ್ರೋ ರಾತ್ರಿ ಕಳ್ಳರು, ಮನೆಗೆ ನುಗ್ಗಿ ಹತ್ತಿ ಚೀಲಗಳನ್ನು ಕದ್ದೊಯ್ದಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಭಾರಿ ಚಿನ್ನದ ನಿಕ್ಷೇಪ ಪತ್ತೆ! ಉತ್ಖನನಕ್ಕೊಪ್ಪದ ಅರಣ್ಯ ಇಲಾಖೆ
ರೈತ ಖಾಜಾ ಹುಸೇನ್ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹತ್ತಿ ಬೆಳೆದಿದ್ದ. ಈ ಬಾರಿ ಹತ್ತಿ ಮಾರಾಟವಾಗಿದ್ರೆ ಮಾಡಿದ ಸಾಲ ತೀರತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ. ಆದ್ರೆ ಕಳ್ಳರು 50-55 ಕೆಜಿ ತೂಕದ ಸುಮಾರು 9 ಬ್ಯಾಗ್ ಹತ್ತಿಯನ್ನ ಕಳ್ಳತನ ಮಾಡಿದ್ದಾರೆ. ಘಟನೆ ಸಂಬಂಧ ರಾಯಚೂರು ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಗಡಿ ಭಾಗದ ಕಳ್ಳರೇ ಈ ರಿತಿ ಕೃತ್ಯ ಎಸಗುತ್ತಿರೋ ಶಂಕೆ ಇದೆ.
ಬೆಳಿಗ್ಗೆ ಹೊಲ ಗದ್ದೆಗಳಲ್ಲಿ,ರಸ್ತೆ ಪಕ್ಕದ ಮನೆಗಳಲ್ಲಿ ಇಡಲಾಗಿರುವ ಹತ್ತಿಯನ್ನ ಕಳ್ಳರು ವಾಚ್ ಮಾಡುತ್ತಾರೆ. ರಾತ್ರಿ ಗೂಡ್ಸ್ ವಾಹನಗಳಲ್ಲಿ ಬಂದು ಹತ್ತಿ ಕಳ್ಳತನ ಮಾಡ್ತಿದ್ದಾರೆ. ಹತ್ತಿ ಸೀಸನ್ ಬಂದಾಗ ಪ್ರತಿ ವರ್ಷ ಇದೇ ರೀತಿ ಹತ್ತಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬರ್ತವೆ. ಸದ್ಯ ಈ ಘಟನೆಯಿಂದ ರೈತರು ಆತಂಕಕ್ಕೊಳಗಾಗಿದ್ದು, ಕಳ್ಳರನ್ನ ಪತ್ತೆ ಹಚ್ಚುವಂತೆ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.



