AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಭಾರಿ ಚಿನ್ನದ ನಿಕ್ಷೇಪ ಪತ್ತೆ! ಉತ್ಖನನಕ್ಕೊಪ್ಪದ ಅರಣ್ಯ ಇಲಾಖೆ

ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಅತಿದೊಡ್ಡ ಚಿನ್ನ ಮತ್ತು ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ. ಆದರೆ ಈ ಪ್ರದೇಶಗಳು ಸಂರಕ್ಷಿತ ಅರಣ್ಯಗಳ ಅಡಿಯಲ್ಲಿ ಬರುವುದರಿಂದ ಗಣಿಗಾರಿಕೆ ಮತ್ತು ಶೋಧನೆ ಸ್ಥಗಿತಗೊಂಡಿದೆ. ರಾಜ್ಯದ 65 ಸ್ಥಳಗಳಲ್ಲಿ ಪ್ಲಾಟಿನಂ, ತಾಮ್ರ ಸೇರಿದಂತೆ ಹಲವು ಅಪರೂಪದ ಖನಿಜಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅನುಮತಿಗಾಗಿ ಭೂವಿಜ್ಞಾನ ಇಲಾಖೆ ಕಾಯುತ್ತಿದೆ.

ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಭಾರಿ ಚಿನ್ನದ ನಿಕ್ಷೇಪ ಪತ್ತೆ! ಉತ್ಖನನಕ್ಕೊಪ್ಪದ ಅರಣ್ಯ ಇಲಾಖೆ
ಕರ್ನಾಟಕದ ಸುರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪಗಳು ಪತ್ತೆ
ಭಾವನಾ ಹೆಗಡೆ
|

Updated on:Dec 09, 2025 | 10:13 AM

Share

ಬೆಂಗಳೂರು, ಡಿಸೆಂಬರ್ 09: ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಚಿನ್ನ ಮತ್ತು ಇತರ ಅಪರೂಪದ ಖನಿಜಗಳ ಅಧ್ಯಯನ ಮತ್ತು ಶೋಧನೆ ನಡೆಯುತ್ತಿರುವ 65 ಸ್ಥಳಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕೊಪ್ಪಳ (Koppal) ಮತ್ತು ರಾಯಚೂರಿನಲ್ಲಿ (Raichur) ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಮತ್ತು ಲಿಥಿಯಂ ಕಂಡುಬಂದಿದೆ ಎಂದು ಹೇಳಲಾಗಿದೆ. ಆದರೆ ಈ ಪ್ರದೇಶಗಳು ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಖನಿಜಗಳ ಉತ್ಖನನ ಮತ್ತು ವಿವರವಾದ ಸಂಶೋಧನೆ ಸ್ಥಗಿತಗೊಂಡಿದೆ.

ರಾಜ್ಯದ 65 ಸ್ಥಳಗಳಲ್ಲಿ ಸಿಕ್ಕ ಖನಿಜ ಸಂಪತ್ತು

ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯು 57 ಸ್ಥಳಗಳಲ್ಲಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಎಂಟು ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ. ಗಣಿಗಾರಿಕೆಗಾಗಿ ಅನ್ವೇಷಿಸಲಾಗುತ್ತಿರುವ ಖನಿಜಗಳಲ್ಲಿ ಪ್ಲಾಟಿನಂ ಗುಂಪಿನ ಲೋಹಗಳು, ಬಾಕ್ಸೈಟ್, ತಾಮ್ರ, ಕೋಬಾಲ್ಟ್, ನಿಕಲ್, ಸಿಲ್ಲಿಮನೈಟ್, ಟಂಗ್ಸ್ಟನ್, ವೆನಡಿಯಮ್, ಯುರೇನಿಯಂ, ವಜ್ರ, ಕೊಲಂಬೈಟ್-ಟ್ಯಾಂಟಲೈಟ್, ಮ್ಯಾಂಗನೀಸ್, ಕ್ರೋಮೈಟ್ ಮತ್ತು ಕಯಾನೈಟ್ ಮತ್ತು ಕ್ಸೆನೋಟೈಮ್ ಸೇರಿದಂತೆ ಅಪರೂಪದ ಖನಿಜ ಸಂಪತ್ತು ಸೇರಿದೆ.

“ಅಪರೂಪಕ್ಕೆ ಮತ್ತು ಮೊಟ್ಟ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯ ಅಮ್ರಾಪುರ ಬ್ಲಾಕ್‌ನಲ್ಲಿ ನಾವು ಪ್ರತಿ ಟನ್‌ಗೆ 12-14 ಗ್ರಾಂ ಚಿನ್ನವನ್ನು ಶೋಧಿಸಿದ್ದೇವೆ. ಸಾಮಾನ್ಯವಾಗಿ ಅಧ್ಯಯನ ಮತ್ತು ಗಣಿಗಾರಿಕೆಯ ಸಮಯದಲ್ಲಿ ಪ್ರತಿ ಟನ್‌ಗೆ ಸುಮಾರು 2-3 ಗ್ರಾಂ ಚಿನ್ನ ಸಿಗುತ್ತದೆ. ಹಟ್ಟಿ ಚಿನ್ನದ ಗಣಿಗಳಲ್ಲಿ ಸುಮಾರು 2-2.5 ಗ್ರಾಂ ಚಿನ್ನ ಸಿಗಬಹುದು. ಆದರೆ ಕೊಪ್ಪಳದಲ್ಲಿರುವ ಈ ಸ್ಥಳವು ಸಂರಕ್ಷಿತ ಅರಣ್ಯದ ನಡುವೆ ಇರುವುದರಿಂದ ನಾವು ಅರಣ್ಯ ತೆರವಿಗೆ ಅರ್ಜಿ ಸಲ್ಲಿಸಿದ್ದೇವೆ ”ಎಂದು ಇಲಾಖೆಯ ಮೂಲಗಳು ತಿಳಿಸಿದ್ದನ್ನು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ ಚಿಕ್ಕಮಗಳೂರಿನಲ್ಲಿ ಚಿನ್ನದ ನಿಕ್ಷೇಪ? ಶೋಧ ಕಾರ್ಯಕ್ಕೆ ಅನುಮತಿ ನೀಡಲು ಪರಿಸರ ಇಲಾಖೆ ಚಿಂತನೆ

ಜಮ್ಮು ಮತ್ತು ಕಾಶ್ಮೀರ ಕಣಿವೆಯ ನಂತರ ದೇಶದಲ್ಲಿ ಲಿಥಿಯಂ ಪತ್ತೆಯಾಗುತ್ತಿರುವುದು ಇದು ಕೇವಲ ಎರಡನೇ ಬಾರಿ. ರಾಯಚೂರಿನ ಅಮರೇಶ್ವರದಲ್ಲಿ ಈ ಲೋಹ ಪತ್ತೆಯಾಗಿದ್ದು, ಇಲ್ಲಿಯೂ ಸಹ ಅರಣ್ಯ ಇಲಾಖೆ ಉತ್ಖನನಕ್ಕೆ ಅನುಮತಿಸಿದರೆ ಕರ್ನಾಟಕವು ದೇಶದಲ್ಲಿ ಲಿಥಿಯಂ ಸಿಕ್ಕ ಮೊದಲ ರಾಜ್ಯವಾಗಲಿದೆ ಎಂದು ಇಲಾಖೆ ತಿಳಿಸಿದೆ.

2023 ರಲ್ಲಿಯೂ ಲಿಥಿಯಂ ನಿಕ್ಷೇಪ ಪತ್ತೆ

2025 ರ ನವೆಂಬರ್‌ನಲ್ಲಿ ನಡೆದ ವಿವರವಾದ ಮಂಡಳಿಯ ಸಭೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳು ಸಂಶೋಧನೆಗಳು ಮತ್ತು ಪಡೆಯಬೇಕಾದ ಅನುಮತಿಗಳ ವಿವರಗಳನ್ನು ಚರ್ಚಿಸಿದ್ದಾರೆ. ಅಪರೂಪದ ಮತ್ತು ಅಮೂಲ್ಯ ಲೋಹಗಳ ಅಧ್ಯಯನ ಮತ್ತು ಪರಿಶೋಧನೆಯನ್ನು ನಾಲ್ಕು ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲ ಎರಡು ಹಂತಗಳಲ್ಲಿ ಸ್ಥಳ ಪರಿಶೀಲನೆ, ಪಿಟ್ಟಿಂಗ್ ಮತ್ತು ಬೇಲಿ ಹಾಕಿದರೆ, ಕೊನೆಯ ಎರಡು ಹಂತಗಳಲ್ಲಿ 500 ಮೀಟರ್‌ಗಳವರೆಗೆ ಪ್ರಾಥಮಿಕ ಗಣಿಗಾರಿಕೆಯನ್ನು ಮಾಡಲಾಗುತ್ತದೆ. ಕೊಪ್ಪಳ ಮತ್ತು ರಾಯಚೂರಿನಲ್ಲಿ ಮೊದಲ ಎರಡು ಹಂತಗಳು ಪೂರ್ಣಗೊಂಡಿವೆ.

2020 ರಲ್ಲಿ ಅಮ್ರಾಪುರದಲ್ಲಿ ದೊಡ್ಡ ಪ್ರಮಾಣದ ಚಿನ್ನದ ನಿಕ್ಷೇಪಗಳು ಕಂಡುಬಂದಿದ್ದರೆ 2023 ರಲ್ಲಿ ಲಿಥಿಯಂ ನಿಕ್ಷೇಪ ಕಂಡು ಬಂದಿತ್ತು. 2024-25 ರಿಂದ ಕೆಲಸ ಮುಂದುವರೆಯಿತಾದರೂ ಎರಡೂ ಸ್ಥಳಗಳಲ್ಲಿ ಇಲ್ಲಿಯವರೆಗೆ ಯಾವುದೇ ಉತ್ಖನನ ಕೆಲಸ ನಡೆದಿಲ್ಲ. ಸಂಪನ್ಮೂಲವನ್ನು ಅಕ್ರಮವಾಗಿ ಬಳಸಿಕೊಳ್ಳಲು ಬಯಸುವವರು ಮತ್ತು ಅಧ್ಯಯನವನ್ನು ನಿಲ್ಲಿಸುವವರಿಂದ ನಮ್ಮ ಸಿಬ್ಬಂದಿಗೆ ನಿರಂತರವಾಗಿ ಬೆದರಿಕೆಗಳು ಬರುತ್ತಿವೆ. ಹೀಗಾಗಿ ನಮ್ಮ ಸಿಬ್ಬಂದಿಯ ಸುರಕ್ಷತೆಯ ಬಗ್ಗೆಯೂ ನಾವು ಚಿಂತಿತರಾಗಿದ್ದೇವೆ ಇಲಾಖೆಯವರು ತಿಳಿಸಿದ್ದಾರೆ.

ಇದನ್ನೂ ಓದಿ ಭಾರತದ 3 ರಾಜ್ಯಗಳಲ್ಲಿ ಹೊಸ ಚಿನ್ನದ ಗಣಿಗಳು ಪತ್ತೆ; ದೇಶದ ಸ್ವರ್ಣ ದಾಹಕ್ಕೆ ಇದು ಸಾಕಾಗುತ್ತಾ?

ಅನುಮತಿಗಾಗಿ ಇಲಾಖೆ ಮೇಲೆ ಒತ್ತಡ

ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡುವಂತೆ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಹೇಳಿದ್ದು, ಲಿಂಗ್ಸುಗೂರ್ ಮೀಸಲು ಅರಣ್ಯ ಪ್ರದೇಶದಲ್ಲಿ ಲಿಥಿಯಂ ಹೊರತೆಗೆಯುವ ಪ್ರಸ್ತಾವನೆ ಬಂದರೆ, ಕುಷ್ಟಗಿಯ ಅಮ್ರಾಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆಗಾಗಿ ಅನುಮತಿ ಬೇಡಿದ್ದಾರೆ. ಗಣಿಗಾರಿಕೆಗಾಗಿ ನಾವು ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಅನುಮತಿ ನೀಡಲು ಸಾಧ್ಯವಿಲ್ಲ. ಅರಣ್ಯಗಳು ಸಹ ಪರಿಸರ ಸಂಪತ್ತೇ ಆಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:12 am, Tue, 9 December 25