AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಮುನ್ನೆಲೆಗೆ ಸಿಎಂ ಬದಲಾವಣೆ ಚರ್ಚೆ: ಯತೀಂದ್ರ ಹೇಳಿಕೆ ಬೆನ್ನಲ್ಲೇ ಬೆಳಗಾವಿಯಲ್ಲಿ ಮೊಳಗಿತು ‘ಡಿಕೆಶಿ ಸಿಎಂ’ ಕೂಗು!

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ನೀಡಿದ ಹೇಳಿಕೆ ಈಗ ಕರ್ನಾಟಕ ಕಾಂಗ್ರೆಸ್​ನಲ್ಲಿ ಅಧಿಕಾರ ಹಂಚಿಕೆ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ. ಸಿದ್ದರಾಮಯ್ಯ ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯಲಿದ್ದಾರೆ, ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಒಪ್ಪಿಲ್ಲ ಎಂಬ ಯತೀಂದ್ರ ಹೇಳಿಕೆಗೆ ಡಿಕೆಶಿ ಬೆಂಬಲಿಗರಿಂದ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮತ್ತೆ ಮುನ್ನೆಲೆಗೆ ಸಿಎಂ ಬದಲಾವಣೆ ಚರ್ಚೆ: ಯತೀಂದ್ರ ಹೇಳಿಕೆ ಬೆನ್ನಲ್ಲೇ ಬೆಳಗಾವಿಯಲ್ಲಿ ಮೊಳಗಿತು ‘ಡಿಕೆಶಿ ಸಿಎಂ’ ಕೂಗು!
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್
Ganapathi Sharma
|

Updated on: Dec 09, 2025 | 11:22 AM

Share

ಬೆಂಗಳೂರು, ಡಿಸೆಂಬರ್ 9: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಎರಡೆರಡು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ತಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ನಾಯಕತ್ವ ಬದಲಾವಣೆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದ ನಂತರ ಕೆಲವು ದಿನಗಳ ಮಟ್ಟಿಗೆ ಕರ್ನಾಟಕ ಕಾಂಗ್ರೆಸ್ ಬಿಕ್ಕಟ್ಟು ತಿಳಿಗೊಂಡಂತೆ ಭಾಸವಾಗಿತ್ತು. ಆದರೆ, ಇದೀಗ ಬೆಳಗಾವಿಯಲ್ಲಿ ವಿಧಾನಸಭೆ ಚಳಿಗಾಲದ ಅಧಿವೇಶನ ಶುರುವಾಗುತ್ತಿದ್ದಂತೆಯೇ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ಎಂಎಲ್ಸಿ ಯತೀಂದ್ರ ನೀಡಿರುವ ಹೇಳಿಕೆ.

ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?

ಬೆಳಗಾವಿಯಲ್ಲಿ ಸೋಮವಾರ ಮಾತನಾಡಿದ್ದೆ ಯತೀಂದ್ರ, ಐದು ವರ್ಷ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಇರಲಿದ್ದಾರೆ. ಡಿಕೆ ಶಿವಕುಮಾರ್ ಅವರು ಅವಕಾಶ ಕೊಡಿ ಎಂದು ಕೇಳಿದ್ದರು. ಆದರೆ ಸದ್ಯಕ್ಕೆ ನಾಯಕತ್ವ ಬದಲಾವಣೆ ಪರಿಸ್ಥಿತಿ ಇಲ್ಲ ಎಂದು ಹೈಕಮಾಂಡ್ ಹೇಳಿದೆ ಎಂದು ಹೇಳಿದ್ದರು.

ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಏನು?

ಯತೀಂದ್ರ ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್, ಬಹಳ ಸಂತೋಷ. ಒಳ್ಳೆಯದಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

ಇವೆಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಡಿಕೆ ಶಿವಕುಮಾರ್ ಅವರು ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ‘‘ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ಗೆ ಸ್ವಾಗತ’’ ಎಂಬ ಘೋಷಣೆಗಳು ಮೊಳಗಿವೆ.

ಸಂಚಲನ ಮೂಡಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್!

Channaraj Post

ಡಿಸಿಎಂ ಡಿಕೆ ಶಿವಕುಮಾರ್​ ಅವರಿಗೆ ಬೆಳಗಾವಿಗೆ ಸ್ವಾಗತ ಕೋರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಎಂಎಲ್​ಸಿ ಚನ್ನರಾಜ್, ‘ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್’ ಎಂದು ಉಲ್ಲೇಖಿಸಿರುವುದು ಗಮನ ಸೆಳೆದಿತ್ತು. ಸಾಮಾಜಿಕ ಮಾಧ್ಯಮ ಪೋಸ್ಟ್ ಬಗ್ಗೆ ವ್ಯಾಪಕ ಚರ್ಚೆ ಶುರುವಾಗುತ್ತಿದ್ದಂತೆಯೇ ಚನ್ನರಾಜ್ ಅದನ್ನು ತಿದ್ದುಪಡಿ ಮಾಡಿದ್ದಾರೆ.

ನನ್ನ, ಸಿಎಂ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ: ಡಿಕೆ ಶಿವಕುಮಾರ್

ಏತನ್ಮಧ್ಯೆ ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ‘ನನ್ನ ಹಾಗೂ ಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯತೀಂದ್ರ ಸಿದ್ದರಾಮಯ್ಯ ಏನು ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ನಾನು ಯತೀಂದ್ರ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ. ಅಲ್ಲದೆ, ಹೈಕಮಾಂಡ್ ಯಾವಾಗ ಬರಲು ಹೇಳಿದೆ ಎಂಬುದನ್ನು ಬಹಿರಂಗಪಡಿಸಲ್ಲ ಎಂದರು.

ಹೇಳಿಕೆ ಸಮರ್ಥಿಸಿಕೊಂಡ ಯತೀಂದ್ರ

ಸಿದ್ದರಾಮಯ್ಯ 5 ವರ್ಷ ಸಿಎಂ ಎಂಬ ತಮ್ಮ ಹೇಳಿಕೆಯನ್ನು ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ನಾನು ಏನು ಹೇಳಬೇಕೋ ಎಲ್ಲವನ್ನೂ ಹೇಳಿದ್ದೇನೆ. ಮತ್ತೆ ಆ ವಿಷಯಕ್ಕೆ ಮಾತನಾಡುವಂತಹದ್ದು ಏನೂ ಇಲ್ಲ. ಯಾರು ಏನಾದರೂ ಹೇಳಲಿ, ನಾನು ಹೇಳಬೇಕಾಗಿದ್ದನ್ನು ಹೇಳಿದ್ದೇನೆ. ನಾನು ಮತ್ತೆ ಪ್ರತಿಕ್ರಿಯೆ ಕೊಡಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಡಿಕೆಶಿ ಅವಕಾಶ ಕೇಳಿದ್ರು, ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಸಮ್ಮತಿಸಿಲ್ಲ: ಯತೀಂದ್ರ ಸಿದ್ದರಾಮಯ್ಯ

ಶಾಸಕರು ಸಿಎಲ್​​ಪಿ ಸಭೆಯಲ್ಲಿ ಹೇಳಿಕೆ ಬಗ್ಗೆ ಪ್ರಸ್ತಾಪ ಮಾಡುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಯತೀಂದ್ರ, ಯಾರು ಬೇಕಾದರೂ ಪ್ರಸ್ತಾಪ ಮಾಡಲಿ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ