ರಾಯಚೂರು, ಜನವರಿ 23: ಮೈಕ್ರೋ ಫೈನಾನ್ಸ್ (Micro finance) ಕಂಪನಿಗಳು ನೀಡುತ್ತಿರುವ ಕಿರುಕುಳಕ್ಕೆ ಸಾಲ ಪಡೆದ ಕಡುಬಡವರು ದಿಕ್ಕೆಟ್ಟು ಓಡುವಂತೆ ಮಾಡಿದೆ. ಸದ್ಯ ಗಡಿ ಜಿಲ್ಲೆಯಲ್ಲಿ ಇವರ ಕಿರುಕುರಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಇದೀಗ ಆ ಮೃತನ ಪತ್ನಿ ತನ್ನ ಮಾಂಗಲ್ಯ ಸರವನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಕಳುಹಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.
ಮೈಕ್ರೋ ಫೈನಾನ್ಸ್ಗಳ ಕಿರುಕುಳ ಹೆಚ್ಚಾಗುತ್ತಲೇ ಇದೆ. ಈ ಕಾರಣದಿಂದ ಇದೇ ಜನವರಿ 17 ರಂದು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಶರಣಬಸವ ಎನ್ನುವ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಶರಣಬಸವನಿಗೆ ಸಾಲ ಕೊಟ್ಟಿರುವ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿತ್ಯ ಟಾರ್ಚರ್ ಕೊಡುತ್ತಿದ್ದರಂತೆ. ಈ ಬಗ್ಗೆ ಗೊತ್ತಾದ ಬಳಿಕ ಇದೇ ಗ್ರಾಮದ ಹಲವರು ಕೂಡ ಫೈನಾನ್ಸ್ ಕಂಪನಿ ಕಣ್ತಪ್ಪಿಸಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಿದ ಮೈಕ್ರೋ ಫೈನಾನ್ಸ್ ಕಿರುಕುಳ: ಜ 25ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ
ಇದರ ಬೆನ್ನಲ್ಲೇ ಈಗ ಮೃತ ಶರಣಬಸವನ ಕುಟುಂಬ ನ್ಯಾಯಕ್ಕಾಗಿ ಹೋರಾಟಕ್ಕೆ ಸಜ್ಜಾಗಿದೆ. ಶರಣಬಸವ ಡ್ರೈವಿಂಗ್ ಜೊತೆ ಕೂಲಿ ಕೆಲಸವನ್ನೂ ಮಾಡುತ್ತಿದ್ದರು. ಆದರೆ ಕೆಲ ಖಾಸಗಿ ಕಂಪನಿಗಳಿಂದ ಸುಮಾರು 6-8 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಇತ್ತೀಚೆಗೆ ಕೆಲ ಕಂತುಗಳು ಬಾಕಿ ಇದ್ದ ಹಿನ್ನೆಲೆ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗುತ್ತಂತೆ. ಇದೇ ಕಾರಣಕ್ಕೆ ಶರಣಬಸವ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಬಳಿಕ ಈಗ ಮೃತನ ಕುಟುಂಬ ಇಂದು ಸ್ಥಳೀಯ ಹೋರಾಟಗಾರರ ಜೊತೆಗೆ ಒಗ್ಗೂಡಿ ಹೋರಾಟಕ್ಕಿಳಿದಿದ್ದಾರೆ. ಘಟನೆ ನೆನೆದು ಮೃತನ ಪತ್ನಿ ಕಣ್ಣೀರಿಟ್ಟಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಶರಣಬಸವನ ಪತ್ನಿ ಪಾರ್ವತಿ, ಮಕ್ಕಳು ಹಾಗೂ ಆತನ ಪೋಷಕರು ಇಂದು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಪತಿ ಶರಣಬಸವ ಸಾವಿನ ಬಳಿಕ ಪತ್ನಿ ಪಾರ್ವತಿ ಎಲ್ಲಾ ಕಾರ್ಯಗಳನ್ನ ಮುಗಿಸಿಕೊಂಡಿದ್ದು, ಈಗ ಆಕೆಯ ಮಾಂಗಲ್ಯ ಸರವನ್ನ ಗೃಹ ಸಚಿವರಿಗೆ ರವಾನಿಸಿದ್ದಾರೆ. ನನ್ನ ಪತಿ ಸಾಲ ಮಾಡಿದ್ದಕ್ಕೆ ಸಿಬ್ಬಂದಿ ಕಿರುಕುಳ ನೀಡಿದ್ದಾರೆ. ಅದರ ವಿರುದ್ಧ ಕ್ರಮವಾಗಬೇಕು ಅಂತ ಪೋಸ್ಟ್ ಮೂಲಕ ಗೃಸಚಿವರಿಗೆ ಮಾಂಗಲ್ಯ ಸರವನ್ನ ರವಾನೆ ಮಾಡಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್: ಗ್ರಾಮ ತೊರೆದ ನೂರಾರು ಕುಟುಂಬಗಳು
ಇದಾದ ಬಳಿಕ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನ ಭೇಟಿ ಮಾಡಿ, ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಯಾರೊಬ್ಬರಿಗೂ ಕೇಡು ಬಯಸದ ಮಗ, ಹೀಗೆ ಯಾರದ್ದೋ ಕಿರಿಕಿರಿಗೆ ಸಾವನ್ನಪ್ಪಿದ್ದಾನೆ ಅಂತ ಅವರ ತಾಯಿ ಮುತ್ತಮ್ಮ ಕಣ್ಣೀರು ಹಾಕಿದ್ದಾರೆ. ಈಗಲಾದರೂ ಅಧಿಕಾರಿಗಳು, ಇಲ್ಲಾ ಸರ್ಕಾರ ಅಲರ್ಟ್ ಆಗಿ ಟಾರ್ಚರ್ ಕೊಡುತ್ತಿರುವ ಮೈಕ್ರೋ ಫೈನಾನ್ಸ್ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:18 pm, Thu, 23 January 25