ರಾಯಚೂರು: ನರೇಗಾ ಅನುಷ್ಠಾನದಲ್ಲಿ ಭಾರಿ ಅವ್ಯವಹಾರ; ಸರ್ಕಾರದ ಬೊಕ್ಕಸಕ್ಕೆ ಕೋಟಿ ರೂ. ನಷ್ಟ

ರಾಯಚೂರು ಜಿಲ್ಲೆಯ ​ದೇವದುರ್ಗ ತಾಲ್ಲೂಕಿನ 33 ಗ್ರಾಮ ಪಂಚಾಯತಿಗಳಲ್ಲಿ ಅವ್ಯವಹಾರ ನಡೆದಿದೆ. ಈ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕು ಪಂಚಾಯತಿಯ ಹಿಂದಿನ ಇಓ ಪಂಪಾಪತಿ ಹಿರೇಮಠ ಹಾಗೂ ನರೇಗಾ ಯೋಜನೆಯ ಹಿಂದಿನ ಸಹಾಯ ನಿರ್ದೇಶಕ ಬಸಣ್ಣ ನಾಯಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ರಾಯಚೂರು: ನರೇಗಾ ಅನುಷ್ಠಾನದಲ್ಲಿ ಭಾರಿ ಅವ್ಯವಹಾರ; ಸರ್ಕಾರದ ಬೊಕ್ಕಸಕ್ಕೆ ಕೋಟಿ ರೂ. ನಷ್ಟ
ದೇವದುರ್ಗ ತಾಲೂಕು ಪಂಚಾಯತ್​
Updated By: ವಿವೇಕ ಬಿರಾದಾರ

Updated on: Nov 26, 2023 | 10:20 AM

ರಾಯಚೂರು ನ.26: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ನರೇಗಾ) ಅನುಷ್ಠಾನದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಇಬ್ಬರು ಗೆಜೆಟೆಡ್ ಅಧಿಕಾರಿಗಳ ವಿರುದ್ಧ ಎಫ್ಐಆರ್ (FIR)​ ದಾಖಲಾಗಿದೆ. ದೇವದುರ್ಗ (Devadurga) ತಾಲ್ಲೂಕಿನ 33 ಗ್ರಾಮ ಪಂಚಾಯತಿಗಳಲ್ಲಿ ಅವ್ಯವಹಾರ ನಡೆದಿದೆ. ಈ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕು ಪಂಚಾಯತಿಯ (Panchayat) ಹಿಂದಿನ ಇಓ ಪಂಪಾಪತಿ ಹಿರೇಮಠ ಹಾಗೂ ನರೇಗಾ ಯೋಜನೆಯ ಹಿಂದಿನ ಸಹಾಯ ನಿರ್ದೇಶಕ ಬಸಣ್ಣ ನಾಯಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಜಿಲ್ಲಾ ಪಂಚಾಯತ ಸಿಇಓ ಪಾಂಡ್ವೆ ರಾಹುಲ್ ತುಕಾರಾಮ್ ನಿರ್ದೇಶನದ ಮೆರೆಗೆ, ಈಗಿನ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಅಣ್ಣಾರಾವ್ ಅವರು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ದೇವದುರ್ಗ ತಾಲೂಕಿನಲ್ಲಿ ಬರುವ ಒಟ್ಟು 33 ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 2020-2021, 2021-2022, ಹಾಗೂ 2022-2023 ರವರೆಗಿನ ಯೋಜನೆಗಳ ಕುರಿತು ಸಾಮಾಜಿಕ ಪರಿಶೋಧನಾ ನಿರ್ದೇಶಕರು ತನಿಖೆ ನಡೆಸಿ ಮಧ್ಯಂತರ ವರದಿ ಸಲ್ಲಿಸಿದ್ದರು.

ಇದನ್ನೂ ಓದಿ: ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ

ವರದಿಯನ್ನು ಪರಿಶೀಲಿಸಿದಾಗ ಅದರಲ್ಲಿ ಯೋಜನೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿಯಾಗಿ 11,64,97,813 ರೂ. ಪಾವತಿಸಿಸಲಾಗಿದೆ. ಅನುಷ್ಠಾನಗೊಂಡ ಕಾಮಗಾರಿಗಳನ್ನು ನಿರ್ವಹಿಸದೇ 32,51,73,074 ಕೋಟಿ ರೂ. ಪಾವತಿಸಲಾಗಿದೆ. 6700 ಪ್ರಕರಣಗಳಲ್ಲಿ 10232.87 ಲಕ್ಷ ರೂ. ಅನ್ನು ಮಾರುತೇಶ್ವರ ಎಂಟರ್ ಪ್ರೈಸಸ್​ಗೆ ನಿಯಮ ಮೀರಿ ನೀಡಲಾಗಿದೆ. ನರೇಗಾ ಕಾಮಗಾರಿಗಳ ಅನುಷ್ಠಾನದಲ್ಲಿ ಸರ್ಕಾರಕ್ಕೆ ಪಾವತಿಸಬೇಕಾದ 5,10,33,801 ರೂ. ತೆರಿಗೆಯನ್ನು ಪಾವತಿಸದೇ ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ.

ಯೋಜನೆಯ ಅನುಷ್ಠಾನದಲ್ಲಿ, ವೈಯಕ್ತಿಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಪಾವತಿಸದೇ ಸಾಮಾಗ್ರಿ ಪೂರೈಕೆದಾರರಿಗೆ ನಿಯಮ ಬಾಹಿರವಾಗಿ ಹಣ ಪಾವತಿಸಲಾಗಿದೆ. ಕಾಮಗಾರಿಗಳ ಅನುಷ್ಠಾನಗೊಂಡ ಸ್ಥಳಗಳಲ್ಲಿ ನಾಮಫಲಕಗಳನ್ನು ಹಾಕದೇ ನಾಮಪಲಕ ಹಾಕಿರುವುದಾಗಿ ಸುಳ್ಳು ಬಿಲ್ಲು ಸೃಷ್ಟಿಸಿ ಹಣ ನೀಡಲಾಗಿದೆ. ಗ್ರಾಮ ಪಂಚಾಯತಗಳಲ್ಲಿ ವಾಸ್ತವಾಗಿರುವ ಕುಟುಂಬಗಳ ಸಂಖ್ಯೆಗಳಿಗಿಂತ ಹೆಚ್ಚುವರಿ ನಕಲಿ ಜಾಬ್ ಕಾರ್ಡಗಳನ್ನು ಸೃಷ್ಟಿಸಿ ಹಣ ಪಾವತಿಸಿದ್ದಾರೆ. ಹೀಗೆ ಒಟ್ಟು 49,27,04,688 ರೂ. ಅನ್ನು ನರೇಗಾ ಯೋಜನೆ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಲಾಗಿದೆ.

Published On - 10:18 am, Sun, 26 November 23