AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಗಿ ಸಾವು, ರೊಚ್ಚಿಗೆದ್ದ ಕುಟುಂಬಸ್ಥರಿಂದ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ! ಆರು ಜನರ ವಿರುದ್ಧ ಎಫ್​ಐಆರ್ ದಾಖಲು

ಅದು ಥೇಟ್ ಸಿನೆಮಾ ಸ್ಟೈಲ್ ರೀತಿಯ ಘಟನೆ..ಅಲ್ಲಿ ಹೃದಯಾಘಾತಕ್ಕೊಳಗಾಗಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಇದೇ ವಿಚಾರಕ್ಕೆ ಮೃತನ ಕಡೆಯವರು ಆಸ್ಪತ್ರೆ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

ಭೀಮೇಶ್​​ ಪೂಜಾರ್
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jun 26, 2024 | 10:48 PM

Share

ರಾಯಚೂರು, ಜೂ.26: ನಗರದಲ್ಲಿ ವಿಜಯ್ ಪಾಲಿ ಕ್ಲೀನಿಕ್ ಹೆಸರಿನ ಹೃದಯ ಸಂಬಂಧಿ ಖಾಯಿಲೆ ಸ್ಪೆಶಲ್ ಆಸ್ಪತ್ರೆ ಇದೆ. ಹೀಗಾಗಿ ನಿನ್ನೆ(ಜೂ.25) ತಡ ರಾತ್ರಿ ಮೂರುವರೆ ಸುಮಾರಿಗೆ ರಾಯಚೂರು(Raichur) ನಗರದ ಅಂದ್ರೂನ್ ಖಿಲ್ಲಾ ಏರಿಯಾದ ಮೊಹಮದ್ ಹಮೀದ್ ಎನ್ನುವವರನ್ನು ಕರೆತರಲಾಗಿತ್ತು. 53 ವರ್ಷದ ಹಮೀದ್​​ ಆಸ್ಪತ್ರೆಗೆ ದಾಖಲಾಗ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ಶುರು ಮಾಡಿದ್ದರಂತೆ. ಆದ್ರೆ, ಕೆಲಹೊತ್ತಲ್ಲೇ ರೋಗಿ ಹಮೀದ್ ಹೃದಯಾಘಾತಕ್ಕೆ ಬಲಿಯಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಳಿಕ, ಮೃತನ ಕಡೆಯವರಿಂದ ಆಸ್ಪತ್ರೆಯಲ್ಲಿ ದೊಡ್ಡ ಗಲಾಟೆಯೇ ನಡೆದಿದ್ದು, ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಹೌದು, ಸಾವು ಎನ್ನುವುದು ಎಂಥವರನ್ನಾದರೂ ಕೆರಳಿಸಿ ಬಿಡತ್ತೆ. ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ್ರೆ, ಇಲ್ಲ ತಡವಾಗಿ ಚಿಕಿತ್ಸೆ ನೀಡಿದ್ದರಿಂದ ಸಾವಾದ್ರೆ ಆಕ್ರೋಶ ಹೊರ ಹಾಕೋದು ಸಾಮಾನ್ಯ. ಆದ್ರೆ, ರೋಗಿಗೆ ಈ ಹಿಂದೆಯೇ ಹೃದಯಾಘಾತವಾಗಿದ್ದು, ಆ ಬಗ್ಗೆ ಫಾಲೋ ಅಪ್ ಮಾಡಿಲ್ಲ. ಹೀಗಾಗಿ ಈಗ ಮತ್ತೆ ಹೃದಯಾಘಾತವಾಗಿದ್ದರಿಂದ ಮೃತಪಟ್ಟಿದ್ದಾನೆ. ಇದ್ರಲ್ಲಿ ನಮ್ಮದೇನು ತಪ್ಪಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆದ್ರೆ, ರೋಗಿ ಹಮೀದ್ ಸಾವಿನ ಬಳಿಕ ಆರು ಜನ ಏಕಾಏಕಿ ಅಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳಾ ಸಿಬ್ಬಂದಿ ಎನ್ನದೇ ಅವರ ಮೇಲೂ ಹಲ್ಲೆ ನಡೆಸಲಾಗಿದೆಯಂತೆ.

ಇದನ್ನೂ ಓದಿ:ತುಮಕೂರು: ಹಲ್ಲೆಗೆ ಯತ್ನ, ಕಳ್ಳತನದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ಜೊತೆಗೆ ಅಲ್ಲಿದ್ದ ಚೇರ್​ಗಳನ್ನೂ ಮುರಿದು ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ರಾಯಚೂರು ನಗರದ ಪಶ್ಚಿಮ ಠಾಣೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಸಂಬಂಧ ಎಫ್​ಐಆರ್ ದಾಖಲಾಗಿದೆ. ಓರ್ವ ಮಹಿಳಾ ಸಿಬ್ಬಂದಿ ಸೇರಿ ಇಬ್ಬರ ಮೇಲೆ ಹಲ್ಲೆ ಹಾಗೂ ಆಸ್ಪತ್ರೆ ವಸ್ತುಗಳನ್ನ ಧ್ವಂಸಗೊಳಿಸಿರೊ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ರೋಗಿಗೆ ಚಿಕಿತ್ಸೆ ನೀಡೊ ವೇಳೆ ವಿಡಿಯೋ ಕಾಲ್ ಮಾಡಿ ಕುಟುಂಬಸ್ಥರೊಂದಿಗೆ ರೋಗಿಯನ್ನ ಮಾತನಾಡಿಸಲಾಗುತ್ತಿತ್ತು ಅಂತಲೂ ಉಲ್ಲೇಖಿಸಲಾಗಿದೆ.

ಇದಷ್ಟೇ ಅಲ್ಲ, ಇತ್ತೀಚೆಗೆ ಅಂದ್ರೆ ಮೇ ತಿಂಗಳಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲೂ ದಾಂಧಲೆ ನಡೆಸಲಾಗಿತ್ತು. ಬಾಣಂತಿ ಸಾವಿಗೆ ವೈದ್ಯರು ಕಾರಣ ಎಂದು ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಿ, ಕಾರ್ ಗ್ಲಾಸ್ ಒಡೆದು ಕೃತ್ಯ ಎಸಗಲಾಗಿತ್ತು. ಈ ಬಗ್ಗೆ ಅಲ್ಲಿನ ವೈದ್ಯಕಿಯ ಸಿಬ್ಬಂದಿ ದೊಡ್ಡ ಹೋರಾಟವನ್ನೇ ನಡೆಸಿದ್ದರು. ಇದಾದ ಬಳಿಕ ಈಗ ಇಂತಹದ್ದೆ ಮತ್ತೊಂದು ಘಟನೆ ರಾಯಚೂರು ನಗರದಲ್ಲಿ ನಡೆದಿದೆ. ಸದ್ಯ ಈ ಘಟನೆ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಹಲ್ಲೆ ನಡೆಸಿರುವ ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 pm, Wed, 26 June 24