ಸೋದರತ್ತೆ ಬೆದರಿಕೆಗೆ ಹೆದರಿ ಅಳಿಯ ಆತ್ಮಹತ್ಯೆ! 17 ಗುಂಟೆ ಸೈಟ್ ವಿವಾದ, ಡೆತ್ ನೋಟ್ನಲ್ಲಿತ್ತು ರಹಸ್ಯ
ಆ ಬಡ ಕುಟುಂಬ, ಮನೆ ಮಗನ ಮೇಲೆ ಜೀವವನ್ನೇ ಇಟ್ಟುಕೊಂಡಿತ್ತು. ಆದ್ರೆ, ರಕ್ತ ಸಂಬಂಧಿಗಳ ಅಟ್ಟಹಾಸಕ್ಕೆ ಆ ಯುವಕ 20 ರ ಹರೆಯದರಲ್ಲೇ ಆತ್ಮಹತ್ಯೆ ಮಾಡಿಕೊಂಡು ಸಾವಿನ ಮನೆ ಸೇರಿದ್ದಾನೆ. ಅಷ್ಟಕ್ಕೂ ಆತ್ಮಹತ್ಯೆಗೆ ಕಾರಣವೇ ಆತನ ಸೋದರ ಅತ್ತೆ ಹಾಕಿದ್ದ ಬೆದರಿಕೆ. ಏನಿದು ಅಂತೀರಾ? ಈ ಸ್ಟೋರಿ ಓದಿ.
ರಾಯಚೂರು, ಅ.03: ಜಿಲ್ಲೆಯ ಸಿರವಾರ(Sirwar) ತಾಲ್ಲೂಕಿನ ಕಲ್ಲೂರು ಗ್ರಾಮದ 20 ವರ್ಷದ ಯುವಕ ಹುಲಿಗೆಪ್ಪ ಎಂಬಾತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮನೆ ಮಗ ಹೆಣವಾಗಿ ಬಿದ್ದಿದ್ದನ್ನ ನೋಡಿ ಕುಟುಂಬಸ್ಥರು ಕಿರುಚಾಡುತ್ತಾ ಕಣ್ಣೀರಿಟ್ಟಿದ್ದರು. ಆದ್ರೆ, ಆತನ ಸಾವಿಗೆ ಕಾರಣ ಏನು ಎಂದು ಗೊತ್ತಾಗಿರಲಿಲ್ಲ. ಆಗ ಅಲ್ಲೇ ಮನೆ ಬಾಗಿಲ ಬಳಿ ಬಿದ್ದಿದ್ದ ಪತ್ರವೊಂದನ್ನ ಓದಿದಾಗ ಅಸಲಿ ಕಥೆ ರಿವೀಲ್ ಆಗಿದೆ. ಆತ ಸಾಯುವುದಕ್ಕೂ ಮುನ್ನ ಡೆತ್ನೋಟ್ ಬರೆದು ಅದರಲ್ಲಿ ತನ್ನ ಸಾವಿಗೆ ಕಾರಣ ಏನು ಎನ್ನುವುದನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದ.
17 ಗುಂಟೆ ಸೈಟ್ ವಿವಾದ, ಡೆತ್ ನೋಟ್ನಲ್ಲಿತ್ತು ರಹಸ್ಯ!
ಹೌದು, ಸೋದರ ಅತ್ತೆ ಲಕ್ಷ್ಮೀ, ಆಕೆಯ ಕುಟುಂಬಸ್ಥರ ಟಾರ್ಚರ್ ಹಾಗೂ ಬೆದರಿಕೆಗೆ ಹುಲಿಗೆಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಹುಲಿಗೆಪ್ಪನ ಕುಟುಂಬ ಹಾಗೂ ಆರೋಪಿತ ಸೋದರ ಅತ್ತೆ ಲಕ್ಷ್ಮೀ ಕುಟುಂಬದ ಮಧ್ಯೆ 17 ಗುಂಟೆ ಸೈಟ್ ವಿವಾದವಿತ್ತು. ಮೃತ ಹುಲಿಗೆಪ್ಪನ ಅಜ್ಜಿ ತಾಯಮ್ಮ ಎನ್ನುವವರು ಇದೇ ಕಲ್ಲೂರು ಗ್ರಾಮದ ದೊಡ್ಡ ಲಕ್ಷ್ಮಪ್ಪ ಹಾಗೂ ಮುತ್ತಮ್ಮ ದಂಪತಿ ಮಗಳು. ಈ ದಂಪತಿಗೆ ಗಂಡು ಮಕ್ಕಳಿರ್ಲಿಲ್ಲ. ಇಬ್ಬರು ಹೆಣ್ಣು ಮಕ್ಕಳಿದ್ದರು. ಅದರಲ್ಲಿ ಒಬ್ಬರು ಮೃತ ಹುಲಿಗೆಪ್ಪನ ಅಜ್ಜಿ ತಾಯಮ್ಮ. ಮತ್ತೊಬ್ಬರು ಮೃತ ಹುಲಿಗೆಪ್ಪನ ಸೋದರ ಅತ್ತೆ ಆರೋಪಿ ಲಕ್ಷ್ಮೀ ತಾಯಿ ಭೀಮಕ್ಕ.
ಇದನ್ನೂ ಓದಿ:ಹೃದಯ ವಿದ್ರಾವಕ ಘಟನೆ: ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಗಂಡು ಮಕ್ಕಳಿಲ್ಲದ ಕಾರಣಕ್ಕೆ ದೊಡ್ಡ ಲಕ್ಷ್ಮಪ್ಪ ಹಾಗೂ ಮುತ್ತಮ್ಮ ದಂಪತಿ ತಮಗೆ ಸೇರಿದ್ದ 17 ಗುಂಟೆ ಸೈಟ್ ಹಾಗೂ ಒಂದು ಮನೆಯನ್ನ ತನ್ನಿಬ್ಬರು ಹೆಣ್ಮಕ್ಕಳಿಗೆ ಕೊಟ್ಟಿದ್ದರು. ಈ ಆಸ್ತಿಯಲ್ಲಿ ಆರೋಪಿತೆ ಲಕ್ಷ್ಮೀ ತಾಯಿ ಭೀಮಕ್ಕ, ನೀನು 17 ಗುಂಟೆ ಜಮೀನು ತೆಗೆದುಕೋ, ನಾನು ಇದೇ ಕಲ್ಲೂರಿನಲ್ಲಿರುವ ಮಮನೆಯನ್ನ ತೆಗೆದುಕೊಳ್ಳುವೆ ಹೇಳಿದ್ದರಂತೆ. ಆಗ ಮೃತ ಹುಲಿಗೆಪ್ಪನ ಅಜ್ಜಿ ತಾಯಮ್ಮ ಹಾಗೂ ಆರೋಪಿತೆ ಲಕ್ಷ್ಮೀ ತಾಯಿ ಭೀಮಕ್ಕ ಪರಸ್ಪರ ಒಪ್ಪಿಕೊಂಡಿದ್ದರಂತೆ. ಆದ್ರೆ, ಇತ್ತೀಚೆಗೆ ಆರೊಪಿತ ಲಕ್ಷ್ಮೀ ಯಾರಿಗೂ ಗೊತ್ತಾಗದ ರೀತಿ ಮೃತ ಹುಲಿಗೆಪ್ಪನ ಅಜ್ಜಿ ತಾಯಮ್ಮಗೆ ಸೇರಬೇಕಿದ್ದ 17 ಗುಂಟೆ ಸೈಟ್ನ್ನು ತನ್ನ ಮಗಳು ಮಹಾದೇವಿ ಹೆಸರಿಗೆ ರಿಜಿಸ್ಟರ್ ಮಾಡಿಸಿದ್ದರಂತೆ. ಇದರಿಂದಲೇ ಎರಡು ಕುಟುಂಬಗಳ ಮಧ್ಯೆ ಗಲಾಟೆ ಶುರುವಾಗಿದೆ.
ಈ ಹಿನ್ನಲೆ ಇತ್ತೀಚೆಗೆ ಹುಲಿಗೆಪ್ಪ ನ್ಯಾಯ ಪಂಚಾಯತಿ ಎಂದು ಓಡಾಡುತ್ತಿದ್ದ. ಇದರಿಂದ ಕೆರಳಿದ್ದ ಅತ್ತೆ ಲಕ್ಷ್ಮೀ ಹಾಗೂ ಕುಟುಂಬಸ್ಥರು ಹುಲಿಗೆಪ್ಪನಿಗೆ ಬೆದರಿಕೆ ಹಾಕಿದ್ದರಂತೆ. ಇದಕ್ಕೆ ಹೆದರಿ ಹುಲಿಗೆಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಬಳಿಕ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಹುಲಿಗೆಪ್ಪನ ಕುಟುಂಬಸ್ಥರು ಅತ್ತೆ ಲಕ್ಷ್ಮೀ ಸೇರಿ ಒಟ್ಟು ಏಳು ಜನರ ವಿರುದ್ಧ ಸಿರವಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದೆನೆ ಇರಲಿ ಅತ್ತೆ ಲಕ್ಷ್ಮೀ ಅಕ್ರಮವಾಗಿ ಸೈಟ್ ಪಡೆದಿರುವ ಆರೋಪದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ಹುಲಿಗೆಪ್ಪ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ