ಲಿಂಗಸುಗೂರು: ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ; ಸಹಜ ಹೆರಿಗೆಗೆ 5 ಸಾವಿರ ರೂ. ಹಣ ಪಡೆದಿದ್ದ ನರ್ಸ್‌ಗಳು ಸಸ್ಪೆಂಡ್
ಲಿಂಗಸಗೂರು ತಾಲೂಕು ಆಸ್ಪತ್ರೆಯಲ್ಲಿ ಸಹಜ ಹೆರಿಗೆಗೆ 5 ಸಾವಿರ ರೂ. ಲಂಚ ಪಡೆದಿದ್ದ ನರ್ಸ್‌ಗಳನ್ನು ಅಮಾನತು ಮಾಡಿ ಜಿಲ್ಲಾ ವೈದ್ಯಾಧಿಕಾರಿ ಡಾ.ಸುರೇಂದ್ರಬಾಬು ಆದೇಶ ಹೊರಡಿಸಿದ್ದಾರೆ.
ರಾಯಚೂರು: ಎಲ್ಲಿ ನೋಡಿದರು ಲಂಚ ಲಂಚ. ಲಂಚ ಕೊಡದೆ ಇದ್ದರೇ ಸರ್ಕಾರಿ ಕೆಲಸ ಆಗುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ವ್ಯವಸ್ಥೆ ಹಾಳಾಗಿದೆ. ಈ ಲಂಚಾವತಾರ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಿಟ್ಟು ಅದೆಷ್ಟೋ ದಿನಗಳಾಗಿವೆ. ಹೀಗೆಯೇ ಜಿಲ್ಲೆಯ ಲಿಂಗಸೂಗೂರು ತಾಲೂಕು ಆಸ್ಪತ್ರೆಯ (Lingasugur Government Hospital) ಇಬ್ಬರು ನರ್ಸ್‌ಗಳು (Nurses) ಹೆರಿಗೆ ಮಾಡಿಸಲು ಆಸ್ಪತ್ರೆಯಲ್ಲೇ ಲಂಚ ಪಡೆದಿದ್ದಾರೆ. ಟಿವಿ9 ಈ ಸುದ್ದಿ ಬಿತ್ತರಿಸುತ್ತಿದ್ದಂತೆ ಜಿಲ್ಲಾ ವೈದ್ಯಾಧಿಕಾರಿ (DHO) ಡಾ.ಸುರೇಂದ್ರಬಾಬು ಇಬ್ಬರು ನರ್ಸ್‌ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಸಹಜ ಹೆರಿಕೆ ಮಾಡಿಸಲು ಲಂಚಕ್ಕೆ ಕೈ ಚಾಚಿದ ಲಿಂಗಸಗೂರು ಆಸ್ಪತ್ರೆ ನರ್ಸ್ ವಿಡಿಯೋ ವೈರಲ್
15 ಸಾವಿರ ಲಂಚ ಬೇಡಿಕೆ ಇಟ್ಟಿದ್ದ ನರ್ಸ್‌ಗಳು
ಲಿಂಗಸಗೂರು ತಾಲೂಕು ಆಸ್ಪತ್ರೆಯಲ್ಲಿ ಲಂಚ ನೀಡಿದರೆ ರೋಗಿಗಳು ಗುಣಮುಖರಾಗಿ ಬರುತ್ತಾರೆ ಎನ್ನುವಷ್ಟರಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪವಿದೆ. ಹೌದು ಆಸ್ಪತ್ರೆಯಲ್ಲಿ ಸಿಬ್ಬಂದಿ ಸಹಜ ಹೆರಿಗೆಗೆ ಒಂದು ರೇಟ್ ಮತ್ತು ಸಿಜೇರಿಯನ್ಗೆ ಒಂದು ರೇಟ್ ಫಿಕ್ಸ್ ಮಾಡಿದ್ದಾರೆ. ಇದರಂತೆ ಆಸ್ಪತ್ರೆಯ ಗೀತಾ, ಅಂಜನಮ್ಮ ಎಂಬ ಇಬ್ಬರು ನರ್ಸ್‌ಗಳು ಸಹಜ ಹೆರಿಗೆಗೆ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇದರ ಮುಂಗಡವಾಗಿ ರೋಗಿಯ ಕುಟುಂಬಸ್ಥರೊಬ್ಬರಿಂದ ಆಸ್ಪತ್ರೆಯಲ್ಲೇ 5 ಸಾವಿರ ರೂ. ಲಂಚಪಡೆದಿದ್ದರು. ಚಿಕಿತ್ಸೆ ಬಳಿಕ ಉಳಿದ ಹಣ ಕೊಡುವಂತೆ ಸಿಬ್ಬಂದಿ ತಾಕೀತು ಮಾಡಿದ್ದರು. ಲಂಚ ಪಡೆಯುವುದನ್ನು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದ್ದು, ಇದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು. ಈ ಸುದ್ದಿಯನ್ನು ಟಿವಿ9 ಬಿತ್ತರಿಸುತ್ತಿದ್ದಂತೆ ಜಿಲ್ಲಾ ವೈದ್ಯಾಧಿಕಾರಿ ಇಬ್ಬರು ನರ್ಸಗಳನ್ನು ಸಸ್ಪೆಂಡ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 pm, Sun, 18 December 22