
ರಾಯಚೂರು, ಆಗಸ್ಟ್ 31: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ (Mantralaya Aradhana Mahotsava) ನಿಮಿತ್ತ ಇಂದು ಉತ್ತರಾಧನೆ ನಡೆಯಿತು. ಶ್ರೀಗಳು, ಅರ್ಚಕರು ಬಣ್ಣದೋಕುಳಿಯಲ್ಲಿ ಮಿಂದೆದ್ದು ವಸಂತೋತ್ಸವ ಆಚರಿಸಿದರು. ಅಷ್ಟೇ ಅಲ್ಲ, ಮಹಾರಥೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು. ಪ್ರಹ್ಲಾದ ರಾಜರ ಮೆರವಣಿಗೆಗೆ ಭಕ್ತರು ಸಾಕ್ಷಿಯಾದರು.
ಕಲಿಯುಗದ ಕಾಮಧೇನು, ಕೇಳಿದ ವರವನ್ನ ಕಲ್ಪಿಸುವ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಮಂತ್ರಾಲಯ ರಾಯರ ಮಠದಲ್ಲಿ ಬಳ ಶ್ರದ್ಧೆಯಿಂದ ನೆರವೇರುತ್ತಿದೆ. ಗುರು ಸಾರ್ವಭೌಮರು ವೃಂದಾವನಸ್ಥರಾದ ಮರುದಿನವನ್ನ ಮಂತ್ರಾಲಯದಲ್ಲಿ ಉತ್ತರರಾಧನೆಯಾಗಿ ಆಚರಿಸಲಾಗುತ್ತೆ. ಅದೇ ರೀತಿ ಇಂದು ರಾಯರ ಸನ್ನಿಧಿಯಲ್ಲಿ ಸಂಭ್ರಮದಿಂದ ಉತ್ತರಾಧನೆ ಆಚರಿಸಲಾಯ್ತು. ಉತ್ತರಾಧನೆ ಹಿನ್ನೆಲೆ ರಾಯರು, ಪ್ರಹ್ಲಾದ್ ರಾಜರ ಉತ್ಸವ ಮೂರ್ತಿ ರೂಪದಿಂದ ಬಂದು ಭಕ್ತರಿಗೆ ರಾಜ ಬೀದಿಯಲ್ಲಿ ದರ್ಶನ ಕೊಡುತ್ತಾರೆ ಅನ್ನೋ ಪ್ರತೀತಿಯಿದೆ.
ಇದನ್ನೂ ಓದಿ: Mantralaya Aradhana Mahotsava: ರಾಯರ ಆರಾಧನಾ ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!
ಇದರ ಭಾಗವಾಗಿ ಗುರುರಾಯರನ್ನ ಪ್ರಹ್ಲಾದ್ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಸಕಲ ವಾದ್ಯಗಳೊಂದಿಗೆ ಶ್ರೀಮಠದಲ್ಲಿ ಪ್ರಹ್ಲಾದ ರಾಜರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ನಂತರ ಮಠದ ಮದ್ವದ್ವಾರ ಮೂಲಕ ರಾಜಬೀದಿಯಲ್ಲಿ ಮಹಾರಥೋತ್ಸದತ್ತ ಶ್ರೀಗಳು ಆಗಮಿಸಿ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಮಂತ್ರಾಲಯ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಭಕ್ತರನ್ನ ಉದ್ದೇಶಿಸಿ ಅನುಗೃಹ ಸಂದೇಶ ನೀಡಿದರು. ನೇಪಾಳದಲ್ಲಿ ನಡೆದ ಪ್ರಕೃತಿ ವಿಕೋಪದ ಬಗ್ಗೆ ಶ್ರೀಗಳು ಕಳವಳ ವ್ಯಕ್ತಪಡಿಸಿದರು. ‘ನೇಪಾಳ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡಿರುವವರಿಗೆ ಸದ್ಗತಿ ಆಗಲಿ ಅಂತ ಪ್ರಾಥಿಸುತ್ತೇವೆ. ಯಾರೆಲ್ಲಾ ನಿರಾಶ್ರಿತರಾಗಿ ಸಂತ್ರಸ್ತರಾಗಿದ್ದಾರೆ ಅವರಿಗೆ ಆತ್ಮಸ್ತೈರ್ಯ ಸಿಗಲಿ. ಪ್ರವಾಹ, ಸುನಾಮಿ, ಭೂಕಂಪಗಳು ಆದಾಗ ಶ್ರೀಮಠ ಆರ್ಥಿಕವಾಗಿ, ಸಾಮಾಜಿಕವಾಗಿ ಸೇವೆ ಮಾಡುತ್ತಿದೆ. ಇದು ಯಾವುದೇ ಸಂಪಾದನೆ, ಪ್ರಚಾರಕ್ಕಲ್ಲ. ಮಠ-ಮಾನ್ಯಗಳಿರುವುದೇ ಭಕ್ತರಿಗೆ ಸಹಾಯ ಹಸ್ತ ಚಾಚುವುದಕ್ಕೆ. ನೇಪಾಳ ಸಂತ್ರಸ್ತರಿಗೆ ಸಹಾಯ ಸಹಕಾರವನ್ನ ಏರ್ಪಾಡು ಮಾಡಲಿಕ್ಕೆ ಶ್ರೀಮಠ ಸಿದ್ದವಾಗಿದೆ’ ಅಂತ ಶ್ರೀಗಳು ಹೇಳಿದರು.
ಅನುಗೃಹ ಸಂದೇಶದ ವೇಳೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರವನ್ನ ಅಭಿನಂದಿಸುವ ವೇಳೆ, ಆಂದ್ರ-ತೆಲಂಗಾಣ ಸರ್ಕಾರಗಳಂತೆ ಕರ್ನಾಟಕ ಸರ್ಕಾರದ ಎಲ್ಲಾ ಮುಖ್ಯಮಂತ್ರಿಗಳು ಶ್ರೀ ಮಠಕ್ಕೆ ಸ್ಪಂದಿಸಿದ್ದಾರೆ. ಈಗಿನ ನೂತನ ಸಿಎಂ ಡಿಕೆ ಶಿವಕುಮಾರ್ ಕೂಡ, ಎರಡು ದಿನ ರಾಯರ ಮಠದಲ್ಲಿ ಸೇವೆ ಸಲ್ಲಿಸಿ, ರಾಯರ ಅನುಗೃಹ ಪಡೆದಿದ್ದಾರೆ’ ಎಂದರು. ‘ಹಿಂದೂ ಧರ್ಮವನ್ನ ಉಳಿಸಿ, ಸಂಘಟಿಸಬೇಕು. ದೇಶ ಭಕ್ತಿ ಬೆಳೆಸಿಕೊಳ್ಳುವಂತೆ’ ಕೂಡ ಶ್ರೀಗಳು ಕರೆ ನೀಡಿದರು.
ರಥೋಥ್ಸವಕ್ಕೂ ಮುನ್ನ ಇಂದು ಉತ್ತರಾರಾಧನೆ ಹಿನ್ನೆಲೆ ಶ್ರೀ ಮಠದಲ್ಲಿ ಪಾರಾಯಣ, ನೈರ್ಮಲ್ಯ ವಿಸರ್ಜನೆ, ಮೂಲರಾಮದೇವರ ಪೂಜೆಗಳನ್ನ ನೆರವೇರಿಸಲಾಯಿತು. ಉತ್ತರಾಧನೆ ವೇಳೆ ಆಚರಿಸಲಾಗುವ ವಸಂತೋತ್ಸವದ ಅಂಗವಾಗಿ ಶ್ರೀಗಳು ರಾಯರಿಗೆ ಬಣ್ಣವನ್ನ ಅರ್ಪಿಸಿದರು. ನಂತರ ಶ್ರೀಗಳು ಭಕ್ತರಿಗೆ, ಅರ್ಚಕರಿಗೆ ಬಣ್ಣವನ್ನ ಎರಸಿ ಬಣ್ಣದೋಕುಳಿ ಆಡುವ ಮೂಲಕ ವಸಂತೋತ್ಸವ ಆಚರಿಸಿದರು. ಇಂದಿನ ಎಲ್ಲಾ ಧಾರ್ಮಿಕ ಕೈಂಕರ್ಯಗಳನ್ನ ಭಕ್ತರು ಕಣ್ತುಂಬಿಕೊಂಡರು.
ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವದ ವೈಭವ: ಇಲ್ಲಿವೆ ಫೋಟೋಸ್
ಒಟ್ಟಿನಲ್ಲಿ ಮಹಾರಥೋತ್ಸವ ವೇಳೆ ವಿವಿಧೆಡೆಯಿಂದ ಆಗಮಿಸಿದ್ದ ಭಜನಾ ಮಂಡಳಿಗಳು, ಕಲಾತಂಡಗಳು ರಾಜಬೀದಿಯಲ್ಲಿ ರಥೋತ್ಸವಕ್ಕೆ ಮೆರಗು ನೀಡಿದವು. ಉತ್ತರಾಧನೆ ಸಂಭ್ರಮಕ್ಕೆ ಸಾಕ್ಷಿಯಾದ ಲಕ್ಷಾಂತರ ಭಕ್ತರು ಸಂತಸ ಇಮ್ಮಡಿಗೊಂಡಿದ್ದಂತು ಸುಳ್ಳಳ್ಳ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.