ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಹೊಸುರು ಸಿದ್ದಾಪುರ ಗ್ರಾಮದ ಬಳಿ, ನೀರಿನ ಕಾಲುವೆ ಒಡೆದು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ನಾರಾಯಣಪುರ ಬಲದಂಡೆಯ 9ನೇ ವಿತರಣಾ ಕಾಲುವೆಯ 4ನೇ ಕಿ.ಮೀ ಹತ್ತಿರ ನೀರಿನ ಕಾಲುವೆ ಒಡೆದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಇಂದು (ಸೆಪ್ಟೆಂಬರ್ 20, ಸೋಮವಾರ) ಬೆಳಿಗ್ಗೆ ಈ ಘಟನೆ ಜರುಗಿದ್ದು, 200 ಎಕರೆಗೂ ಅಧಿಕ ಪ್ರದೇಶದಲ್ಲಿ ರೈತರು ಬೆಳೆದಿದ್ದ ಭತ್ತ, ಮೇಣಸಿನಕಾಯಿ, ಸೇಂಗಾ, ಈರುಳ್ಳಿ, ಸಜ್ಜೆ ಸೇರಿದಂತೆ ಅನೇಕ ಬೆಳೆ ನೀರು ಪಾಲಾಗಿದೆ.
ಈ ಬೆಳೆಗಳಿಗೆ ಸಾವಿರಾರೂ ರೂಪಾಯಿ ಸಾಲಮಾಡಿ ರಸಗೊಬ್ಬರ ಹಾಕಲಾಗಿತ್ತು. ಕಾಲುವೆ ಒಡೆದು ನುಗ್ಗಿದ ನೀರಿನ ರಭಸಕ್ಕೆ ಎಲ್ಲಾ ರಸಗೊಬ್ಬರ, ಕೀಟನಾಶಕ ಕೊಚ್ಚಿಹೋಗಿದೆ ಎಂದು ರೈತರು ಅಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಕಾಲುವೆ ಒಡೆಯಲು ಪ್ರಮುಖ ಕಾರಣ ಅಧಿಕಾರಿಗಳು. ಕಾಲುವೆ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲವಾಗಿದೆ. ಪ್ರಸಕ್ತ ವರ್ಷ ಕಾಲುವೆಯ ದುರಸ್ತಿ ಹಾಗೂ ಜಂಗಲ್ ಕಟಿಂಗ್, ಹೂಳು ಸ್ವಚ್ಛತೆಗೆ ಕೃಷ್ಣ ಭಾಗ್ಯ ಜಲ ನಿಗಮ 11 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ. ಆದರೆ, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಗುತ್ತಿಗೆದಾರರು ಸೇರಿ ಯಾವುದೇ ದುರಸ್ತಿ, ಕಾಲುವೆ ಹೂಳು ಸ್ವಚ್ಛತೆ ಮಾಡದೇ ಇರುವುದರಿಂದ ಒಡೆಯಲು ಕಾರಣವಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಕಾಲುವೆಯ ಎಡ ಭಾಗದ ಲೈನಿಂಗ್ ಒಡೆದು ಅಪಾರ ಪ್ರಮಾಣದ ಬೆಳೆ ಹಾಳಾಗಿದೆ. ಕಾಲುವೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿರುವುದೇ ಕಾಲುವೆ ಒಡೆಯಲು ಕಾರಣವಾಗಿದೆ. ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತಕ್ಕೆ ಹಾಕಿದ ರಸಗೋಬ್ಬರ ಎಲ್ಲಾ ನೀರಿನಲ್ಲಿ ಹರಿದು ಹೋಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದ್ದು, ರೈತರಿಗೆ ಬೆಳೆ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಈದೀಗ ಕಾಲುವೆ ನೀರು ಹರಿವು ಸ್ಥಗಿತಗೊಳಿಸಿ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಸಹಾಯಕ ಇಂಜನಿಯರ್ ಎಂ.ಎಸ್. ಭಜಂತ್ರಿ, ಕಿರಿಯ ಇಂಜನಿಯರ್ ಶ್ರೀಧರ್ ಭೇಟಿ ನೀಡಿ, ಅಗತ್ಯ ಕ್ರಮ ಕೈಗೊಂಡು ಸಂಜೆಯ ಹೊತ್ತಿಗೆ ಕಾಲುವೆಗೆ ನೀರು ಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಅಕಾಲಿಕ ಮಳೆಗೆ ನಲುಗಿದ ಯಾದಗಿರಿ; ವರುಣನ ಅಬ್ಬರಕ್ಕೆ ಶೇಂಗಾ ಬೆಳೆ ನೀರು ಪಾಲು
Onion Diseases: ಬೆಲೆ ಕುಸಿತದ ನಡುವೆ ಈರುಳ್ಳಿ ಬೆಳೆಗೆ ಕೊಳೆ ರೋಗ ಕಾಟ, ರೈತರು ಕಂಗಾಲು
Published On - 1:09 pm, Mon, 20 September 21