ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಹಾಲಾಪುರ ಗ್ರಾಮ ಪಂಚಾಯಿತಿಯಲ್ಲಿ ಕೋಟಿ ಕೋಟಿ ಭ್ರಷ್ಟಾಚಾರ ನಡೆದಿತ್ತು. ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಅಭಿಯಾನ ಎನ್ನುವ ಮಹತ್ವದ ಯೋಜನೆಗೆ ನೂರಾರು ಕೋಟಿ ಹಣ ಮೀಸಲಿಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಬಯಲು ಮುಕ್ತ ಶೌಚಾಲಯಕ್ಕಾಗಿ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಶೌಚಾಲಯ ನಿರ್ಮಿಸಿದರೆ ಸರ್ಕಾರದಿಂದ 12 ರಿಂದ15 ಸಾವಿರ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಆದರೆ ಹಾಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗರು ತಮ್ನ ಸ್ವಂತ ಹಣದಲ್ಲಿ ಶೌಚಾಲಯ ಕಟ್ಟಿಸಿಕೊಂಡಿದ್ದಾರೆ. ಹೌದು ಹೀಗೆ ಫಲಾನುಭವಿಗಳ ಪಾಲಾಗಬೇಕಿದ್ದ ವಿವಿಧ ಯೋಜನೆಗಳ ಕೋಟ್ಯಾಂತರ ರೂ. ಹಣವನ್ನ ಇದೇ ಹಾಲಾಪುರ ಪಂಚಾಯತಿ ಕಂಪ್ಯೂಟರ್ ಆಪರೇಟರ್ ರಂಗಪ್ಪ ಎಂಬಾತ ನುಂಗಿ ಹಾಕಿರುವ ಆರೋಪ ಕೇಳಿಬಂದಿತ್ತು. ಜೊತೆಗೆ ಭ್ರಷ್ಟಾಚಾರ ಮಾಡಿದ್ದು ಕೂಡ ಇಲಾಖಾ ತನಿಖೆಯಲ್ಲಿ ಬಯಲಾಗಿದೆಯಂತೆ. ಆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಂಗಪ್ಪ ಎಷ್ಟು ಕ್ರಿಮಿನಲ್ ಅಂದ್ರೆ ನಕಲಿ ಫಲಾನುಭವಿಗಳಿಗೆ ಅಸಲಿ ಫಲಾನುಭವಿಗಳ ಹಣವನ್ನ ಜಮೆ ಮಾಡಿಸಿದ್ದಾನೆ. ಫಲಾನುಭವಿಯ ಹೆಸರಿಗೆ ಕಾಮಗಾರಿಯ ನಕಲಿ ಫೋಟೋ ಅಟ್ಯಾಚ್ ಮಾಡುತ್ತಿದ್ದ. ಇದರ ಜೊತೆಗೆ ಫಲಾನುಭವಿಗಳ ದಾಖಲೆಗೆ ಬೇರೊಬ್ಬರ ಬ್ಯಾಂಕ್ ಅಕೌಂಟ್ ನಂಬರ್ ನೀಡಿ ವಂಚಿಸಿರುವ ಆರೋಪ ಕೂಡ ಇದೆ. ಈ ಬಗ್ಗೆ ರಾಯಚೂರು ಜಿಲ್ಲಾ ಪಂಚಾಯತ್ ಸಿಇಓ ಸೇರಿ ವಿವಿಧ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿರಲಿಲ್ಲವಂತೆ. ಬಳಿಕ ಖುದ್ದು ಈ ಹಾಲಾಪುರ ಪಂಚಾಯಿತಿ ಸದಸ್ಯರು ಪಂಚಾಯಿತಿ ಮಟ್ಟದ ಸಭೆ ಕರೆದು ಕಂಪ್ಯೂಟರ್ ಆಪರೇಟರ್ ರಂಗಪ್ಪನನ್ನ ವಜಾಗೊಳಿಸಿದ್ದಾರೆ. ನಂತರ ಆಗಿದ್ದೇ ಬೇರೆ.
ಇದನ್ನೂ ಓದಿ:40 ಪರ್ಸೆಂಟ್ ಕಮಿಷನ್ ಆರೋಪ, ಗುತ್ತಿಗೆದಾರ ಕೆಂಪಣ್ಣ ಆರೋಪ ನಿರಾಧಾರ: ಜಯರಾಂ ರಾಯಪುರ
ಹೀಗೆ ಪಂಚಾಯಿತಿ ಮಟ್ಟದ ಸಭೆಯಲ್ಲಿ ವಜಾಗೊಳಿಸಿದ್ದನ್ನ ಪ್ರಶ್ನಿಸಿ ರಂಗಪ್ಪ ಹೈಕೋರ್ಟ್ ಮೊರೆ ಹೋಗಿದ್ದ. ನಂತರ ಕೋರ್ಟ್ ಇದಕ್ಕೆ ಸ್ಟೇ ನೀಡಿ, ನೋಟಿಸ್ ಕೊಡದೇ ಈ ಪ್ರಕ್ರಿಯೆ ನಡೆಸಿರುವ ಬಗ್ಗೆ ಸೂಚಿಸಿತ್ತು. ಇದಾದ ಬಳಿಕ ಮತ್ತೆ ಸಾಮಾನ್ಯ ಸಭೆ ನಡೆಸಿ ತೀರ್ಮಾನ ತೆಗೆದುಕೊಂಡು ಆ ಬಳಿಕ ಭ್ರಷ್ಟ ಕಂಪ್ಯೂಟರ್ ಆಪರೇಟರ್ ರಂಗಪ್ಪನಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳೋಣ ಎಂದು ಹಾಲಾಪುರ ಪಂಚಾಯಿತಿ ಸದಸ್ಯರೆಲ್ಲ ಇದೇ ಪಂಚಾಯಿತಿ ಪಿಡಿಓ ಮಲ್ಲಿಕಾರ್ಜುನ್ ರೆಡ್ಡಿಗೆ ತಿಳಿಸಿದ್ದಾರೆ. ಆದರೆ ಪಂಚಾಯಿತಿ ಅಭಿವೃದ್ಧಿ ಮಾಡಬೇಕಿದ್ದ ಮಲ್ಲಿಕಾರ್ಜುನ್ ರೆಡ್ಡಿ ಕೂಡ ಕಂಪ್ಯೂಟರ್ ಆಪರೇಟರ್ ರಂಗಪ್ಪನ ಪರ ವಕಾಲತ್ತು ವಹಿಸುತ್ತಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲ ಸಾಮಾನ್ಯ ಸಭೆಗೆ ಕರೆದರೂ ಪಿಡಿಓ ಮಲ್ಲಿಕಾರ್ಜುನ ರೆಡ್ಡಿ ಹಾಜರಾಗಿಲ್ಲವಂತೆ. ಜೊತೆಗೆ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ನಾನು ಕಂಪ್ಯೂಟರ್ ಆಪರೇಟರ್ ವಿರುದ್ಧವಾಗಿ ಕ್ರಮಕೈಗೊಳ್ಳಲ್ಲ ಎಂದು ಹೇಳಿ ಸಭೆ ಧಿಕ್ಕರಿಸಿ ಹೋಗಿದ್ದಾನೆ. ಇದಾದ ಬಳಿಕ ಈ ಪಿಡಿಓ ನಡೆಸಿರುವ ಹಿಂದಿನ ಭ್ರಷ್ಟಾಚಾರದ ಬಗ್ಗೆಯೂ ಅಧಿಕಾರಿಗಳಿಗೆ ದೂರು ನೀಡಲಾಗಿದೆಯಂತೆ. ಆದರೂ ಹಿರಿಯ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲವಂತೆ. ಡಿಎಸ್ಓ ಶಿವಪುರೆಗೆ ದೂರು ನೀಡಿದ್ರು ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಸಿಇಓ ಶಶಿಧರ್ ಅವರಿಗೆ ದೂರು ನೀಡಿದ್ದಿವಿ. ಕೂಡಲೇ ಕಂಪ್ಯೂಟರ್ ಆಪರೇಟರ್ ರಂಗಪ್ಪ ಹಾಗೂ ಪಿಡಿಓ ಮಲ್ಲಿಕಾರ್ಜುನ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಲಾಪುರ ಪಂಚಾಯಿತಿ ಸದಸ್ಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಭ್ರಷ್ಟಾಚಾರ ಆರೋಪ; ರಾಜ್ಯದ ಪ್ರತಿಷ್ಠಿತ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬೀಳುತ್ತಾ ಬೀಗ?
ಅದೇನೆ ಇರಲಿ ಕಂಪ್ಯೂಟರ್ ಆಪರೇಟರ್ ರಂಗಪ್ಪ ಭ್ರಷ್ಟಾಚಾರ ಮಾಡಿದ್ದು ಕೂಡ ಇಲಾಖಾ ತನಿಖೆಯಲ್ಲಿ ಬಯಲಾಗಿದೆಯಂತೆ. ಇಷ್ಟಿದ್ರು ಜಿಲ್ಲಾ ಪಂಚಾಯತಿ ಅಧಿಕಾರಿಗಳು ಯಾಕೆ ಮೌನ ವಹಿಸಿದ್ದಾರೋ ಗೊತ್ತಿಲ್ಲ. ಜನ ಸಾಮಾನ್ಯರು, ಫಲಾನುಭವಿಗಳಿಗೆ ಸಿಗಬೇಕಿದ್ದ ಅನುದಾನವನ್ನ ಇಂತಹ ಭ್ರಷ್ಟರು ನುಂಗಿ ನೀರು ಕುಡಿಯುತ್ತಿರೋದಂತು ಸುಳ್ಳಲ್ಲ.
ವರದಿ: ಭೀಮೇಶ್ ಪೂಜಾರ್ ಟಿವಿ9 ರಾಯಚೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ