ಭ್ರಷ್ಟಾಚಾರ ಆರೋಪದಡಿ ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸರ್ಕಾರಿ ಅಧಿಕಾರಿಗಳ ಮುಷ್ಕರದಂದು, ಕಚೇರಿ ಒಳಗಡೆ ಸೇರಿಕೊಂಡು ಅಧಿಕಾರಿಗಳೊಂದಿಗೆ ಕೆಲಸ ಮಾಡಿದ್ದ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಜಗದೀಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಬೆಂಗಳೂರು: ದೇವನಹಳ್ಳಿ (Devanahalli) ಕ್ಷೇತ್ರದ ಜೆಡಿಎಸ್ (JDS) ಶಾಸಕ ನಿಸರ್ಗ ನಾರಾಯಣಸ್ವಾಮಿ (Nisarga Narayanaswamy) ಭ್ರಷ್ಟಾಚಾರ (Corruption) ಎಸಗಿದ್ದಾರೆಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಜಗದೀಶ್ ಲೋಕಾಯುಕ್ತಕ್ಕೆ (Lokayukta) ದೂರು ನೀಡಿದ್ದಾರೆ. ಸರ್ಕಾರಿ ನೌಕರರ ಮುಷ್ಕರ (Government Employees Strike) ದಿನದಂದು ತಾಲೂಕು ಕಚೇರಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ (Sub Registrar Office) ಅಕ್ರಮ ಪ್ರವೇಶ ಮಾಡಿ, ಹೊರಗಡೆಯಿಂದ ಬೀಗ ಜಡಿದು, ಒಳಗಡೆ ಅಧಿಕಾರಿಗಳೊಂದಿಗೆ ಸೇರಿಕೊಂಡು ಸರ್ಕಾರಿ ದಾಖಲೆಗಳನ್ನು ತಿದ್ದುಪಡಿ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಸರ್ಕಾರಿ ದಾಖಲೆಗಳನ್ನು ತಿರುಚಿ, ಬಡವರ ಆಸ್ತಿಗಳನ್ನು ಕಬಳಿಸಲು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದಾಖಲೆ ಸಮೇತ ಲೋಕಾಯುಕ್ತಕ್ಕೆ ಜಗದೀಶ್ ದೂರು ನೀಡಿದ್ದಾರೆ.
ಇನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ನೂರಾರು ಭೂ ಮಾಫಿಯಾ, ಭೂ ಕಬಳಿಕೆಯ ದಂಧೆಯಲ್ಲೂ ತೊಡಗಿಕೊಂಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಯಾವುದೇ ಕೆಲಸವನ್ನು ಮಾಡಿಕೊಡುತ್ತಿಲ್ಲ. ಹದ್ದುಗಿಡ ಹಳ್ಳದ ರಾಜಕಾಲುವೆ ಒಳಗೊಂಡಂತೆ 15 ಎಕರೆ ಭೂಮಿಯನ್ನ ಕಬಳಿಕೆ ಮಾಡಿದ್ದಾರೆ. ಎನ್ಎಂ ಇನ್ ಕ್ಲೋವ್ ಅನ್ನುವ ಬಡಾವಣೆಯ ನಿರ್ಮಾಣ. ಸರ್ಕಾರಿ ದಾಖಲೆಗಳನ್ನು ತಿರುಚಿ ಆಸ್ತಿ ಕಬಳಿಕೆ ಮಾಡಿದ್ದಾರೆಂದು ಆರೋಪ ಜಗದೀಶ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಶಾಕ್, ಸುಪ್ರೀಂಕೋರ್ಟ್ ಮೊರೆ ಹೋದ ಲೋಕಾಯುಕ್ತ, ಎಲ್ಲರ ಚಿತ್ತ ಕೋರ್ಟ್ ನತ್ತ
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಶಾಸಕರಿಗಾಗಿ ಕೆಲಸ ಮಾಡಿದ ಅಧಿಕಾರಿಗಳು
7ನೇ ವೇತನ ಜಾರಿಗೆ ಆಗ್ರಹಿಸಿ ಮಾರ್ಚ್ 01 ರಂದು ರಾಜ್ಯಾದ್ಯಂತ ಸರ್ಕಾರಿ ನೌಕರರು ಮುಷ್ಕರ ಮಾಡಿದ್ದರು. ಅಂದು ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಲಾಗಿತ್ತು. ಆದರೂ ದೇವನಹಳ್ಳಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಅಧಿಕಾರಿಗಳನ್ನು ಕೂರಿಸಿಕೊಂಡು ಕೆಲಸ ಮಾಡಿದ್ದರು.
ಕಚೇರಿಯ ಹೊರಗಡೆ ಬಾಗಿಲಿಗೆ ಬೀಗ ಹಾಕಿಕೊಂಡು ಒಳಗಡೆ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಕೂರಿಸಿಕೊಂಡು ಅಧಿಕಾರಿಗಳು, ಅವರ ಕೆಲಸ ಮಾಡಿಕೊಟ್ಟಿದ್ದರು. ಜನ ಸಾಮಾನ್ಯರಿಗೊಂದು ನ್ಯಾಯ ಜನಪ್ರತಿನಿಧಿಗಳಿಗೊಂದು ನ್ಯಾಯ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದರು.
ಶಾಸಕರ ನಡೆಗೆ ಸಾರ್ವಜನಿಕರ ಆಕ್ರೋಶ
ಇನ್ನು ಶಾಸಕರ ನಡೆಗೆ ಸಾರ್ವಜನಿಕರು, ಆಮ್ ಆದ್ಮಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದರು. ಹಾಗೂ ಶಾಸಕರನ್ನು ಕಚೇರಿಯಿಂದ ಹೊರಗಡೆ ಬರಲು ಬಿಡದೆ ಆಕ್ರೋಶ ವ್ಯಕ್ತಪಡಿಸಿದ್ದರು. ಬೀಗ ತೆಗೆಯಲು ಬಿಡದೆ ಆಮ್ ಆದ್ಮಿ ಕಾರ್ಯಕರ್ತರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಾಗಿಲಿಗೆ ಅಡ್ಡಲಾಗಿ ನಿಂತಿದ್ದರು. ಒಂದು ಗಂಟೆಗೂ ಅಧಿಕ ಸಮಯದಿಂದ ಶಾಸಕರು ಒಳಗಡೆಯೇ ಬಂಧಿಯಾಗಿದ್ದರು. ಇನ್ನು ಪರಿಸ್ಥಿತಿ ನಿಯಂತ್ರಿಸಿ ಶಾಸಕರನ್ನು ಕಚೇರಿಯಿಂದ ಹೊರ ತರಲು ಬಂದ ಪೊಲೀಸರ ನಡುವೆಯೂ ಮಾತಿನ ಚಕಮಕಿ ನಡೆದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Tue, 14 March 23