ಬಿಸಿಲಿನ ತಾಪಕ್ಕೆ ನಿರ್ಜಲೀಕರಣ: ರಾಯಚೂರಿನಲ್ಲಿ ಅವಳಿ ಮಕ್ಕಳ ಸಾವು
ರಾಜ್ಯದಲ್ಲಿ ಬಿಸಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಿಸಿಲಿಗೆ ಜನರು ಬಳಲುತ್ತಿದ್ದಾರೆ. ಬಿಸಿಲಿನಿಂದ ಜನರು ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ರಾಯಚೂರು, ಕಲಬುರಗಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಬಿಸಿಲಿನ ತಾಪಕ್ಕೆ ನಿರ್ಜಲಿಕರಣ ಉಂಟಾಗಿ ರಾಯಚೂರಿನಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ರಾಯಚೂರು, ಏಪ್ರಿಲ್ 28: ರಾಜ್ಯದಲ್ಲಿ ಬಿಸಿಲಿನ ತಾಪಮಾನ (Summer) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಿಸಲಿನ ತಾಪಕ್ಕೆ ನಿರ್ಜಲೀಕರಣ (Dehydration) ಉಂಟಾಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಯಚೂರು (Raichur) ತಾಲೂಕಿನ ಚಿಕ್ಕಸುಗೂರು ಗ್ರಾಮದ ಹುಸೇನಮ್ಮ ಹಾಗೂ ಮಾರುತಿ ದಂಪತಿ ಮಕ್ಕಳಾದ ಆರತಿ (9) ಹಾಗೂ ಪ್ರಿಯಾಂಕಾ (7) ಮೃತ ದುರ್ದೈವಿಗಳು. ಪುತ್ರ ಲಕ್ಕಪ್ಪ (5)ಗೆ ರಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ಮಾರುತಿ ತಂದೆ ಲಕ್ಷ್ಮಣ ಅವರನ್ನೂ ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ (ಏ.27)ರ ಸಂಜೆ ಏಕಾಏಕಿ ಸಮಸ್ಯೆ ಉಲ್ಬಣಗೊಂಡಿತ್ತು. ಕುಟುಂಬ ಕೃಷ್ಣಾ ನದಿ ನೀರನ್ನ ಕುಡಿಯುತ್ತಿತ್ತು ಎಂಬ ಮಾಹಿತಿ ದೊರೆತಿದೆ.
ಘಟನಾ ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು,ಆರೋಗ್ಯ ಇಲಾಖೆ ಮತ್ತು ಆಹಾರ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಮೃತರ ಮನೆಯಲ್ಲಿ ನೀರಿನ ಸ್ಯಾಂಪಲ್, ಆಹಾರದ ಸ್ಯಾಂಪಲ್ ಪಡೆದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಯ ಅವಧಿಯಲ್ಲಿ ದೇಶದಲ್ಲಿ ಭಾರೀ ಬಿಸಿಲು; ಐಎಂಡಿ ಮುನ್ಸೂಚನೆ
ಬಿಸಿಲಿನಿಂದ ಉಂಟಾಗುವ ಅನಾರೋಗ್ಯ ತಡೆಗಟ್ಟಲು ಹವಾಮಾನ ಇಲಾಖೆ ಸೂಚನೆಗಳು
- ಗರಿಷ್ಠ ತಾಪಮಾನದ ಅವಧಿಯಲ್ಲಿ ಹೊರಗಡೆ ಹೋಗಬೇಡಿ
- ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯಿರಿ
- ಹಗುರವಾದ, ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿಬಟ್ಟೆ ಧರಿಸಿ
- ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡ, ಛತ್ರಿ/ ಟೋಪಿ, ಬೂಟುಗಳು ಅಥವಾ ಚಪ್ಪಲಿ ಬಳಸಿ
- ಉಷ್ಣತೆ ಅಧಿಕವಾಗಿರುವಾಗ ಶ್ರಮದಾಯಕ ಚಟುವಟಿಕೆಯಿಂದ ದೂರವಿರಿ.
- ಪ್ರಯಾಣ ಮಾಡುವಾಗ, ನೀರನ್ನು ಜೊತೆಯಲ್ಲಿ ಒಯ್ಯುವುದು.
- ದೇಹವನ್ನು ನಿರ್ಜಲೀಕರಣಗೊಳಿಸುವ ಮದ್ಯ, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯ ಸೇವಿಸದಿರುವುದು.
- ಸಾಧ್ಯವಾದಷ್ಟು ಬಿಸಿ ಆಹಾರ ಸೇವಿಸಿ.
- ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ORS ಸೇವಿಸಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:02 am, Sun, 28 April 24