ರಾಯಚೂರು, ಡಿ.16: ಬಿಸಿಲುನಾಡು ರಾಯಚೂರು (Raichur) ಜಿಲ್ಲೆ ಶಿಕ್ಷಣದಲ್ಲಿ ಹಿಂದುಳಿದ ಪ್ರದೇಶ ಅನ್ನೋ ಹಣೆ ಪಟ್ಟಿ ಕಟ್ಟಿಕೊಂಡಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಕೆಲ ಕುತೂಹಲಕಾರಿ ಅಂಶಗಳು, ಸಂಶೋಧನೆ, ಅನ್ವೇಷಣೆ, ವಿಜ್ಞಾನದ ಬಗ್ಗೆ ಪ್ರಾಕ್ಟಿಕಲ್ ಆಗಿ ತಿಳಿದುಕೊಳ್ಳೊ ಅವಕಾಶಗಳು ಕಡಿಮೆ. ಆದರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಒಂದೊಳ್ಳೆ ಘಳಿಗೆ ಒದಗಿಬಂದಿತ್ತು. ಚಂದ್ರಯಾನ-3 (Chandrayaan -3) ಮಿಷನ್ ಸಕ್ಸಸ್ ಆದ ಟೀಂನಲ್ಲಿ ಕಾರ್ಯನಿರ್ವಹಿಸಿರೊ ವಿಜ್ಞಾನಿ ಡಾ.ಬಿ.ಎಂ.ದ್ವಾರಕೀಶ್ (Dr BM Dwarakish) ಅವರು ರಾಯಚೂರು ನಗರದ ಜಿಲ್ಲಾ ಪಂಚಾಯತ್ ಭವನದಲ್ಲಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳ (Student) ಜೊತೆ ಸಂವಾದ ನಡೆಸಿದರು.
ಅತೀ ಅಪರೂಪದ ಕ್ಷಣಗಳು, ಮಾಹಿತಿಗಾಗಿ ಕಾದು ಕುಳಿತಿದ್ದ ಮಕ್ಕಳು ತಮ್ಮ ವಿವಿಧ ಪ್ರಶ್ನೆಗಳನ್ನ ವಿಜ್ಞಾನಿ ದ್ವಾರಕೀಶ್ಗೆ ಕೇಳಿ ಉತ್ತರ ಪಡೆದರು. ಚಂದ್ರಯಾನ-3 ಸಕ್ಸಸ್ ಆದ ಬಗ್ಗೆ, ಚಂದ್ರಯಾನ-3 ಉಡಾವಣೆಯಿಂದ ಆಗುತ್ತಿರುವ ಲಾಭಗಳ ಬಗ್ಗೆ ಚರ್ಚೆ ನಡೆಸಲಾಯ್ತು. ಚಂದ್ರಯಾನವನ್ನ ದಕ್ಷಿಣ ಪಥದಲ್ಲೇ ಯಾಕೆ ಲ್ಯಾಂಡ್ ಮಾಡಲಾಯ್ತು ಅನ್ನೋದರ ಬಗ್ಗೆ ವಿದ್ಯಾರ್ಥಿಗಳು ಎಳೆಎಳೆಯಾಗಿ ಮಾಹಿತಿ ಪಡೆದರು. ಈ ವೇಳೆ ಚಂದ್ರನತ್ತ ಸಾಮಾನ್ಯ ಜನ ಹೋಗಿ ಬರೋಕೆ ಎಷ್ಟು ಖರ್ಚಾಗತ್ತೆ ಅಂತ ಪ್ರಶ್ನಿಸಲಾಯ್ತು. ಅದಕ್ಕೆ ನಗುತ್ತಲೇ ಉತ್ತರಿಸಿದ ವಿಜ್ಞಾನಿ ಡಾ.ದ್ವಾರಕೀಶ್ ಆ ಬಗ್ಗೆ ಸಂಶೋಧನೆ ನಡೆಸ್ತಿರೊ ಸಂಸ್ಥೆಗಳ ಸಂಖ್ಯೆ ಹೆಚ್ಚಾದಾಗ ಖರ್ಚು ವೆಚ್ಚ ಕಡಿಮೆ ಆಗತ್ತೆ. ಆದರೆ ಸದ್ಯ ಅಲ್ಲಿಗೆ ಹೋಗಲು ರಿಚರ್ಡ್ ಅನ್ನೊ ಸಂಸ್ಥೆ 32 ಕೋಟಿ ನಿಗದಿ ಪಡಿಸಿದೆ ಅಂತ ತಿಳಿಸಿದ್ರು.
ಇದರ ಜೊತೆ ಕೆಲ ವಿದ್ಯಾರ್ಥಿಗಳು ಕುತೂಹಲದಿಂದ ಏಲಿಯನ್ಸ್ಗಳ ಬಗ್ಗೆ ಪ್ರಶ್ನೆ ಮಾಡಿದರು. ಆಗ ಉತ್ತರಿಸಿದ ಡಾ.ದ್ವಾರಕೀಶ್, ಏನಿಯನ್ಸ್ ಇರಬಹುದು ಅಂತ ವಿಜ್ಞಾನ ಹೇಳತ್ತೆ. ಸಂಖ್ಯಾಶಾಸ್ತ್ರಜ್ಞರು ಹೇಳೋ ಪ್ರಕಾರ ಸೂರ್ಯನಂತ ನಕ್ಷತ್ರ, ಭೂಮಿಯಂತ ಗ್ರಹ ಲೆಕ್ಕ ಹಾಕಿದ್ರೆ ಕನಿಷ್ಠ 50 ಸಾವಿರ ಕಡೆ ಮನುಷ್ಯನಂತೆ ಯಾವ ರೂಪದಲ್ಲಾದರೂ ಜೀವಿಗಳಿರತ್ತೆ ಅಂತಾರೆ. ಆ ಜೀವಿಗಳು ಇನ್ನೂ ಶಿಲಾಯುಗದಲ್ಲಿರಬಹುದು, ಅಥವಾ ಸಂದೇಶ ಮುಟ್ಟಿರಬಹುದು ಅಂತ ಹೇಳಿದ್ರು.
ಇದನ್ನೂ ಓದಿ: ಮೈಸೂರಿನ ಉದ್ಯಮಿ ಚಂದ್ರಯಾನ 3 ಯೋಜನೆಗೆ ಬಿಡಿಭಾಗ ಪೂರೈಸಿ ಕೋಟ್ಯಾಧಿಪತಿಯಾಗಿದ್ದಾರೆ! ಇದು ಮೇಕ್ ಇನ್ ಇಂಡಿಯಾ ಫಲ
ಇತ್ತ ಮಕ್ಕಳ ಜೊತೆಗಿನ ಸಂವಾದದ ಬಗ್ಗೆ ವಿಜ್ಞಾನಿ ಡಾ.ದ್ವಾರಕೀಶ್ ಸಂತಸ ವ್ಯಕ್ತಪಡಿಸಿದ್ರು. ಆದಿತ್ಯL1 ಹೀಗಾಗಲೇ ನಡೆಯುತ್ತಿದೆ. ಇದು ಬಹಳ ಮಹತ್ವಪೂರ್ಣವಾಗಿದ್ದು ಅಂತರರಾಷ್ಟ್ರೀಯ ವೈಜ್ಞಾನಿಕ ಸಮುದಾಯದ ಎದುರು ನೋಡ್ತಾ ಇದೆ. ಸೂರ್ಯ ಹೆಚ್ಚು ನಮ್ಮ ಹತ್ತಿರ ಇದ್ರೂ ಅರ್ಥವಾಗದ ಕಾಯವಾಗಿದೆ. ಜಗತ್ತಿನಲ್ಲಿ ಅಲ್ಟ್ರಾ ಲೈಟ್ ನಲ್ಲಿ ಸೂರ್ಯನನ್ನ ನೋಡಲು ಸಾಧ್ಯವಾಗಿದೆ. ಆದಿತ್ಯL1 ಬಳಿಕ ಗಗನಯಾನ ಯೋಜನೆ ನಮ್ಮ ಮುಂದಿದೆ. ಮುಂದಿನ ದಿನಗಳು ಬಹಳಷ್ಟು ಕುತೂಹಲಕಾರಿ ದಿನಗಳು ಆಗಲಿವೆ ಎಂದು ಹೇಳಿದರು.
ಇದರ ಜೊತೆ ವಿಜ್ಞಾನಿ ದ್ವಾರಕೀಶ್ ವಿಜ್ಞಾನ ಮತ್ತು ಆಧ್ಯಾತ್ಮದ ಬಗ್ಗೆಯೂ ಅದ್ಭುತವಾಗಿ ವಿವರಣೆ ನೀಡಿದ್ರು. ನಿಸರ್ಗದ ವಿದ್ಯಮಾನಗಳ ಬಗ್ಗೆ ಯೋಚನೆ ಮಾಡೋದು ವಿಜ್ಞಾನ. ಆದರೆ ದೇವರು ಆಧ್ಯಾತ್ಮ ಅನ್ನೋದು ವೈಯಕ್ತಿಕ ನಂಬಿಕೆ. ವಿಜ್ಞಾನ ಮತ್ತು ಆಧ್ಯಾತ್ಮ ಜೊತೆಯಲ್ಲೇ ಇರುತ್ವೆ ಅಂತ ತಿಳಿಸಿದ್ರು. ಈ ಮೂಲಕ ಮಕ್ಕಳು ವಿಶೇಷ ಜ್ಞಾನದ ಜೊತೆ ಕುತೂಹಲಕಾರಿಗಳ ವಿಷಯಗಳನ್ನ ಪಡೆದು ಸಖತ್ ಖುಷಿ ಪಟ್ಟರು.
ರಾಯಚೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ