ಬರಡಾದ ಕೃಷ್ಣ; ಹನಿ ನೀರಿಗಾಗಿ ರಾಯಚೂರು ಗ್ರಾಮಗಳಲ್ಲಿ ಕಣ್ಣೀರು, ಸರ್ಕಾರದ ವಿರುದ್ಧ ವಾಗ್ದಾಳಿ
ಕೃಷ್ಣಾ ನದಿ ತೀರದ ಡಿ.ರಾಂಪುರ, ಕುರುವಕಲ, ಕುರುವಕುರ್ದ ಸೇರಿ ಏಳೆಂಟು ಗ್ರಾಮಗಳಲ್ಲಿ ಹನಿ ನೀರಿಗಾಗಿಯೂ ಹಾಹಾಕಾರ ಎದ್ದಿದೆ. ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ವೃದ್ಧೆಯೊಬ್ಬರು ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಸರ್ಕಾರ ಎಲ್ಲಿ ಹೋಗಿದೆ? 8 ದಿನಗಳಿಂದ ನೀರು ಬಂದಿಲ್ಲ. ನಾವು ಸ್ನಾನ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ರಾಯಚೂರು, ಫೆ.18: ರಾಯಚೂರು (Raichur) ಜಿಲ್ಲೆಯ ಎಡ ಮತ್ತು ಬಲಭಾಗದಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ಹರಿಯುತ್ತಿದ್ದರೂ, ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ (Drinking Water Crisis). ನೀರಿಲ್ಲದೇ ಆ ಗ್ರಾಮದಲ್ಲಿ ಕಳೆದೊಂದು ವಾರದಿಂದ ಶೇಕಡಾ 60% ರಷ್ಟು ಜನ ಸ್ನಾನವನ್ನೇ ಮಾಡಿಲ್ಲ. ಹೇಗಾದರೂ ಮಾಡಿ ಕುಡಿಯುವುದಕ್ಕಾದರೂ ನೀರಿನ ವ್ಯವಸ್ಥೆ ಮಾಡಿಸಿ ಎಂದು ಗ್ರಾಮಸ್ಥರು ಟಿವಿ9 ಮುಂದೆ ಅಳಲು ತೋಡಿಕೊಂಡಿದ್ದಾರೆ.
ತೆಲಂಗಾಣ ಗಡಿಯ ರಾಯಚೂರು ತಾಲೂಕಿನ ಡಿ.ರಾಂಪುರ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಕೃಷ್ಣಾ ನದಿ ತೀರದ ಡಿ.ರಾಂಪುರ, ಕುರುವಕಲ, ಕುರುವಕುರ್ದ ಸೇರಿ ಏಳೆಂಟು ಗ್ರಾಮಗಳಲ್ಲಿ ಹನಿ ನೀರಿಗಾಗಿಯೂ ಜನರು ಪರದಾಡುವಂತಹ ಪರಿಸ್ಥಿತಿ ಇದೆ. ಕೃಷ್ಣಾ ನದಿ ಮೇಲೆ ಅವಲಂಬಿತವಾಗಿದ್ದ ಗ್ರಾಮಗಳಲ್ಲಿ ಕಳೆದ 10ಕ್ಕೂ ಹೆಚ್ಚು ದಿನಗಳಿಂದ ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ಇದೆ. ಭೀಕರ ಬರಗಾಲಕ್ಕೆ ಕೃಷ್ಣಾ ನದಿ ಒಣಗಿ ಹೋಗಿದೆ. ಈ ಹಿನ್ನೆಲೆ ಬೇಸಿಗೆ ಪ್ರಾರಂಭದಲ್ಲೇ ಈ ಭಾಗದ ಜನರಿಗೆ ನೀರಿನ ಸಮಸ್ಯೆ ಶುರುವಾಗಿದೆ. ಮೂರ್ನಾಲ್ಕು ಕಿಮಿ ದೂರ ಸಾಗಿ ಜಮೀನುಗಳಲ್ಲಿನ ಬೋರ್ ವೆಲ್ ನೀರನ್ನ ತಂದು ಜನ ಜೀವನ ಸಾಗಿಸಬೇಕಿದೆ. ಇತ್ತ ನಿತ್ಯ ನೂರಾರು ಗ್ರಾಮಸ್ಥರು ನೀರಿಗೆ ದುಂಬಾಲು ಬೀಳುತ್ತಿರುವ ಹಿನ್ನೆಲೆ ಬೆಳೆಗೆ ನೀರು ಸಾಕಾಗಲ್ಲ ಅಂತ ಜಮೀನಿನ ಮಾಲೀಕರು ಕೂಡ ನಿತ್ಯ ನೀರು ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಬಿಂದಿಗೆ ನೀರಿಗಾಗಿ ಜನರ ಪರದಾಟ; ಶಾಲೆ ಬಿಟ್ಟು ನೀರು ತುಂಬಿಸೋದನ್ನೇ ಕೆಲಸ ಮಾಡಿಕೊಂಡಿರುವ ಶಾಲಾ ಮಕ್ಕಳು
ಸರ್ಕಾರದ ವಿರುದ್ಧ ವೃದ್ಧೆ ಕಿಡಿ
ಇನ್ನು ವೃದ್ಧೆಯೊಬ್ಬರು ತೆಲುಗಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಎಂಟು ದಿನ ಆಯ್ತು ನೀರಿಲ್ಲ. ಸ್ನಾನ ಮಾಡಲು ನೀರಿಲ್ಲ, ಕುಡಿಯಲು ನೀರಿಲ್ಲ. ಹೊಲದವರು ನೀರು ಬಿಡ್ತಿಲ್ಲ. ಬೋರ್ ವೆಲ್ ನೀರನ್ನ ತಂದು ಸ್ನಾನ ಮಾಡಿದ್ರೆ, ಮೈ ಎಲ್ಲಾ ತುರಿಕೆ ಬರ್ತಿದೆ. ಸರ್ಕಾರ ಎಲ್ಲಿ ಹೋಗಿದೆ? ಅಲ್ಲಿ ಓಟು ಹಾಕಿ ಇಲ್ಲಿ ಹೋಗಿ ಅಂತಾರೆ. ಇಲ್ಲಿ ನೀರಿಲ್ಲದೇ ಸತ್ತು ಹೋಗೊ ಸ್ಥಿತಿ ಬಂದಿದೆ ಅಂತ ವೃದ್ಧೆ ನರಸಮ್ಮ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ