
ರಾಯಚೂರು, ನವೆಂಬರ್ 17: ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಪೊಲೀಸ್ ಠಾಣೆ (Kavithala Police Station) ದೇಶದ ಅತ್ಯುತ್ತಮ ಠಾಣೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕೇಂದ್ರ ಗೃಹ ಸಚಿವಾಲಯದ 2025ರ ವಾರ್ಷಿಕ ಅತ್ಯುತ್ತಮ ಪೊಲೀಸ್ ಠಾಣೆಗಳ ಆಯ್ಕೆಯಲ್ಲಿ ಕರ್ನಾಟಕದಿಂದ ಸ್ಥಾನ ಪಡೆದ ಏಕೈಕ ಠಾಣೆ ಇದಾಗಿದ್ದು, ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದೆ.
ಕವಿತಾಳ ಠಾಣೆ ಜನಸ್ನೇಹಿ ವಾತಾವರಣ ಹೊಂದಿದ್ದು, ಸುವ್ಯವಸ್ಥೆಯಿಂದ ಕೂಡಿದೆ. ಹಲವು ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸುವ ಕ್ಷಮತೆ ಹೊಂದಿದ್ದು, ಮೂಲಭೂತ ಸೌಕರ್ಯಗಳನ್ನೂ ಒದಗಿಸುತ್ತಿದೆ. ಇವೆಲ್ಲವೂ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ನಡೆದ ಮೌಲ್ಯಮಾಪನದಲ್ಲಿ ಕವಿತಾಳ ಠಾಣೆ ಮುಂಚೂಣಿಯಲ್ಲಿ ಕಂಡುಬಂದಿದೆ. ಕೇಂದ್ರದ ತಂಡ ಠಾಣೆಯ ವಾಸ್ತವ ಸ್ಥಿತಿ-ಗತಿ ಬಗ್ಗೆ ಸ್ಥಳೀಯರ ಅಭಿಪ್ರಾಯವನ್ನೂ ಪರಿಗಣಿಸಿದ್ದಾಗಿ ತಿಳಿದುಬಂದಿದೆ.
ಠಾಣೆಗಳಿಗೆ ಪ್ರಶಸ್ತಿ ಪ್ರದಾನಿಸಲಿರುವ ಅಮಿತ್ ಶಾ
ದೇಶದ 74 ಠಾಣೆಗಳ ಪೈಕಿ ಪ್ರಮುಖವಾಗಿ ಆಯ್ಕೆಯಾಗಿದ್ದ ಮೂರು ಠಾಣೆಗಳಲ್ಲಿ ಕವಿತಾಳ ಠಾಣೆಯೂ ಸ್ಥಾನ ಪಡೆದಿದ್ದು, ನವೆಂಬರ್ 28ರಂದು ಛತ್ತೀಸ್‌ಗಢದ ರಾಂಚಿಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ. ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಯ್ಕೆಯಾಗಿರುವ ಠಾಣೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಟಾಪ್ ಮೂರರಲ್ಲಿ ಕವಿತಾಳ ಠಾಣೆಗೆ ಯಾವ ಕ್ರಮಾಂಕ ಲಭಿಸಿದೆ ಎನ್ನುವುದು ಕಾರ್ಯಕ್ರಮದ ದಿನವೇ ಅಧಿಕೃತಗೊಳ್ಳಲಿದೆ.
ಕವಿತಾಳ ಠಾಣೆಯ ಸಾಧನೆ ಬಗ್ಗೆ ಮಾತನಾಡಿದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ, ಹಿಂದುಳಿದ ಜಿಲ್ಲೆಯ ಠಾಣೆ ದೇಶದ ಅತ್ಯುತ್ತಮ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಅತ್ಯಂತ ಸಂತಸದ ವಿಷಯ. ಇದೇ ಉತ್ಸಾಹದಲ್ಲಿ ಇತರ ಠಾಣೆಗಳೂ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.