ಮಂತ್ರಾಲಯದಲ್ಲಿ ಮಧ್ಯರಾಧನೆ: ತಿರುಪತಿ ತಿರುಮಲದಿಂದ ಬಂದ ಶೇಷವಸ್ತ್ರ ರಾಯರ ಬೃಂದಾವನಕ್ಕೆ ಸಮರ್ಪಣೆ
ರಾಯರ ಮಧ್ಯರಾಧನೆ ಹಿನ್ನೆಲೆಯಲ್ಲಿ ರಾಯರ ಮೂಲ ಬೃಂದಾವನಕ್ಕೆ ತಿರುಪತಿ ತಿರುಮಲದಿಂದ ಶೇಷವಸ್ತ್ರ ಸಮರ್ಪಣೆ ಮಾಡಲಾಗಿದೆ. ಮಹಾದ್ವಾರದಿಂದ ಅದ್ದೂರಿ ಮೆರವಣಿಗೆ ಮೂಲಕ ಶೇಷವಸ್ತ್ರವನ್ನು ಮಂತ್ರಾಲಯ ಶ್ರೀಗಳು ಬರಮಾಡಿಕೊಂಡಿದ್ದಾರೆ.
ರಾಯಚೂರು: ರಾಘವೇಂದ್ರ ಮಹಾಸ್ವಾಮಿಗಳು ನೆಲೆಸಿರುವ ತುಂಗಾತೀರ ಮಂತ್ರಾಲಯದಲ್ಲಿ ರಾಯರ 350ನೇ ಆರಾಧನಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ.ಇಂದು ರಾಯರು ಬೃಂದಾವನ ಪ್ರವೇಶಿಸಿದ ಪವಿತ್ರ ದಿನ. ಹೀಗಾಗಿ ರಾಯರ ಮಧ್ಯರಾಧನೆಯನ್ನು ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ರಾಯರ ಮೂಲ ಬೃಂದಾವನಕ್ಕೆ ತಿರುಪತಿ ತಿರುಮಲದಿಂದ ಶೇಷವಸ್ತ್ರ ಸಮರ್ಪಣೆ ಮಾಡಲಾಗಿದೆ. ಮಹಾದ್ವಾರದಿಂದ ಅದ್ದೂರಿ ಮೆರವಣಿಗೆ ಮೂಲಕ ಶೇಷವಸ್ತ್ರವನ್ನು ಮಂತ್ರಾಲಯ ಶ್ರೀಗಳು ಬರಮಾಡಿಕೊಂಡಿದ್ದಾರೆ. ಮಂತ್ರಾಲಯ ಶ್ರೀಗಳು ರಾಯರ ಬೃಂದಾವನಕ್ಕೆ ಇಂದು ಮಹಾ ಮಂಗಳಾರತಿ ನೆರವೆರಿಸಿದ್ದಾರೆ.
ಕಲಿಯುಗದ ಕಲ್ಪವೃಕ್ಷ ಕಾಮಧೇನು ಗುರು ರಾಘವೇಂದ್ರ ಮಹಾಸ್ವಾಮಿಗಳು ನೆಲೆಸಿರುವ ತುಂಗಾತೀರದ ಮಂತ್ರಾಲಯದಲ್ಲಿ ರಾಯರ 350ನೇ ಆರಾಧನೆ ಮಹೋತ್ಸವದ ನಡೆಯುತ್ತಿದೆ. ಆಗಸ್ಟ್ 21 ರಿಂದ ಆರಂಭವಾದ ರಾಯರ ಆರಾಧನೆ ಮಹೋತ್ಸವ ಆಗಸ್ಟ್ 27ರವರೆಗೂ ನಡೆಯಲಿದೆ. ಸೋಮವಾರ ರಾಯರ ಪೂರ್ವಾರಾಧನೆ ಹಿನ್ನೆಲೆ ಮೂಲಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಮತ್ತು ಮಹಾ ಮಂಗಳಾರತಿ ನೆರವೇರಿಸಲಾಯಿತು. ಇಡೀ ಮಂತ್ರಾಲಯ ಕ್ಷೇತ್ರದಲ್ಲಿ ಆರಾಧನೆ ಸಂಭ್ರಮಾಚರಣೆ ನಡೆಯಿತು. ತುಂಗಾ ತೀರದಲ್ಲಿ ಅಸಂಖ್ಯಾತ ಭಕ್ತರು ಮಿಂದೆದ್ದು ರಾಯರ ದರ್ಶನ ಪಡೆಯುವ ಮೂಲಕ ಪುನೀತರಾಗುತ್ತಿದ್ದಾರೆ.
ವಿಶೇಷವಾಗಿ ರಾಯರ ಆರಾಧನೆ ವೇಳೆಯಲ್ಲಿ ಮಂತ್ರಾಲಯಕ್ಕೆ ಬಂದು ರಾಯರು ನೆಲೆಸಿರುವ ಮೂಲ ಬೃಂದಾವನದ ದರ್ಶನ ಪಡೆದರೆ ಎಲ್ಲವೂ ಒಳಿತಾಗುತ್ತದೆ ಎನ್ನುವುದು ಭಕ್ತರ ವಾಡಿಕೆ. ಹೀಗಾಗಿ ನಾಡಿನ ಮೂಲೆ ಮೂಲೆಯಿಂದಲು ಅಸಂಖ್ಯಾತ ಭಕ್ತ ಸಮೂಹವೇ ಮಂತ್ರಾಲಯಕ್ಕೆ ಹರಿದು ಬರುತ್ತಿದೆ ಎಂದು ಮಂತ್ರಾಲಯ ಸಾಂಸ್ಕೃತಿಕ ಪೀಠದ ಅಧ್ಯಾಪಕರಾದ ವಾದಿರಾಜಚಾರ್ಯರು ಹೇಳಿದ್ದಾರೆ.
ನಿನ್ನೆ (ಆಗಸ್ಟ್ 23, ಸೋಮವಾರ) ರಾಯರ ಪೂರ್ವಾರಾಧನೆ ಹಿನ್ನೆಲೆಯಲ್ಲಿ ಮೂಲ ಬೃಂದಾವನದ ಸುತ್ತಲೂ ಪ್ರಾಕಾರದಲ್ಲಿ ಪಲ್ಲಕ್ಕಿ ಮೆರವಣಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ನಡೆಸಲಾಯಿತು. ಪ್ರಹ್ಲಾದ ರಾಜರ ಪೂಜೆ ವಿಜೃಂಬಣೆಯಿಂದ ನೆರವೇರಿಸಲಾಯಿತು. ತುಂಗಾ ನದಿಯಿಂದ ತಂದ ಪವಿತ್ರ ಶುದ್ಧ ನೀರಿನಿಂದ ಪಂಚಾಮೃತ ಅಭಿಷೇಕ ನಡೆಸಲಾಯಿತು.
ಮಂತ್ರಾಲಯಕ್ಕೆ ಆಗಮಿಸಿದ್ದ ಸರ್ವ ಭಕ್ತರಿಗೂ ತೀರ್ಥ ಪ್ರಸಾದ ನೀಡಲಾಯಿತು. ಇನ್ನು ಮಂತ್ರಾಲಯ ಶ್ರೀಗಳ ನೇತೃತ್ವದಲ್ಲಿ ನಡೆದ ರಾಯರ ಪವಿತ್ರ ಗ್ರಂಥವನ್ನಿಟ್ಟು ನಡೆಸಿದ ಪಲ್ಲಕ್ಕಿ ಮೆರವಣಿಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಪುನೀತರಾದರು. ಇನ್ನು ರಾಯರ ಪೂರ್ವಾರಾಧನೆಯ ಶುಭ ಸಂದರ್ಭದಲ್ಲಿ ಪ್ರತಿ ವರ್ಷವೂ ಮಂತ್ರಾಲಯ ಶ್ರೀಮಠದಿಂದ ಸಿಬ್ಬಂದಿಗೆ ಬಟ್ಟೆ ಬರೆ ಉಡುಗೊರೆ ನೀಡುವುದು ವಾಡಿಕೆ. ಹೀಗಾಗಿ ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರತೀರ್ಥ ಮಹಾಸ್ವಾಮಿಗಳು ಶ್ರೀಮಠದಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗಳಿಗೆ ವಸ್ತ್ರಗಳನ್ನು ನೀಡಿ ಆರ್ಶಿವದಿಸಿದರು.
ವರದಿ: ಸಿದ್ದು ಬಿರಾದಾರ್
ಇದನ್ನೂ ಓದಿ: ಇಂದಿನಿಂದ ಮಂತ್ರಾಲಯದಲ್ಲಿ ರಾಯರ 350ನೇ ಆರಾಧನ ಮಹೋತ್ಸವ
ಮಂತ್ರಾಲಯದಲ್ಲಿ ಗುರು ರಾಯರ 350ನೇ ಆರಾಧನೆ; ಆ.21ರಿಂದ 27ರ ವರೆಗೆ ಸಪ್ತ ರಾತ್ರೋತ್ಸವ
Published On - 9:28 am, Tue, 24 August 21