ರಾಯಚೂರು, ಸೆಪ್ಟೆಂಬರ್ 17: ಸಚಿವ ಆರ್ಬಿ ತಿಮ್ಮಾಪುರ (RB Timmapur) ಒಡೆತನದ ಆರ್ಬಿ ಶುಗರ್ಸ್ ಕಂಪನಿ ವಿರುದ್ಧ ಸರ್ಕಾರಿ ಭೂಮಿ (Government Land) ಕಬಳಿಸಿರುವ ಆರೋಪ ಕೇಳಿಬಂದಿದೆ. ಚಿಕ್ಕ ಉಪ್ಪೇರಿ ಗ್ರಾಮದ ಸರ್ವೆ ನಂ62ರ ಗೈರಾಣಿ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ರೈತ ಸಂಘ ಲಿಂಗಸುಗೂರು ತಹಶೀಲ್ದಾರ್ರಿಗೆ ಪತ್ರ ಬರೆದಿದೆ. ಈ ಭೂಮಿ ಆರ್ಬಿ ಶುಗರ್ಸ್ ಕಂಪನಿ ಹೆಸರಿನಲ್ಲಿದೆ.
ಪ್ರಭಾವಿ ವ್ಯಕ್ತಿಗಳು ಸುಣಕಲ್ ಸಿಮಾಂತರದಲ್ಲಿ ಜಮೀನು ಖರೀದಿ ಮಾಡಿ ಅದರ ಪಕ್ಕದಲ್ಲೇ ಇರುವ ಗೈರಾಣಿ ಭೂಮಿಯನ್ನು ಹೆಚ್ಚುವರಿಯಾಗಿ ವಶಪಡಿಸಿಕೊಂಡಿದ್ದಾರೆ. ಆದರೆ, ಈ ಭೂಮಿ ಜಾನುವಾರು ಅಭಿವೃದ್ಧಿಗಾಗಿ ಸೀಮಿತವಾಗಿದೆ. ಈ ಭೂಮಿಯಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸುವ ವಂದತಿ ಹಬ್ಬಿದ್ದು, ಸುತ್ತಮುತ್ತಲಿನ ಗ್ರಾಮಕ್ಕೆ ಪರಿಸರ ಮಾಲಿನ್ಯವಾಗಲಿದೆ. ಹಾಗೂ ಕಲುಷಿತ ತ್ಯಾಜ್ಯ ಪಕ್ಕದಲ್ಲಿರುವ ಕೃಷ್ಣ ನದಿಗೆ ಹರಿದು ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ಸರ್ಕಾರಿ ಭೂಮಿ ಕಬಳಿಕೆ; ದಕ್ಷಿಣ ಕರ್ನಾಟಕದಲ್ಲಿ ಮುಂಚೂಣಿಯಲ್ಲಿದೆ ಚಿಕ್ಕಮಗಳೂರು
ಇದರಿಂದ ರೈತರ ಬೆಳೆಗೆ ಮತ್ತು ಜಾನುವಾರುಗಳಿಗೆ ತೊಂದರೆಯಾಗಲಿದೆ. ಹೀಗಾಗಿ ಸಕ್ಕರೆ ಕಾರ್ಖಾನೆ ನಿರ್ಮಾಣವಾಗದಂತೆ ತಡೆ ಹಿಡಿದು, ಸರ್ಕಾರಿ ಗೈರಾಣಿ ಭೂಮಿಯನ್ನು ರಕ್ಷಿಸಿ ದನಕರುಗಳು, ಕುರಿ ಮತ್ತು ಮೇಕೆಗಳಿಗೆ ಮೀಸಲಿಡಬೇಕು ಎಂದು ರೈತ ಸಂಘ ಪತ್ರದಲ್ಲಿ ಉಲ್ಲೇಖಿಸಿದೆ. ಅಲ್ಲದೆ ಚಿಕ್ಕ ಉಪ್ಪೇರಿ ಗ್ರಾಮದ ಮಧ್ಯದಲ್ಲಿ 50 ಫೀಟ್ ರಸ್ತೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಇದನ್ನು ತಡೆಯಬೇಕು ಎಂದು ಒತ್ತಾಯಿಸಿದೆ.
ಇದಲ್ಲದೇ ಅರಣ್ಯ ಹಾಗೂ ಕಂದಾಯ ಇಲಾಖೆಯ ಭೂಮಿ ಕೂಡ ಕಬಳಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಕಂದಾಯ ಇಲಾಖೆಯ 49 ಎಕರೆ, ಹಾಗೂ ಅರಣ್ಯ ಇಲಾಖೆಯ 43 ಎಕರೆ ಕಬಳಿಕೆ ಮಾಡಿರುವ ಆರೋಪವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:19 am, Wed, 18 September 24