ಅದು ಗಟ್ಟಿ ಚಿನ್ನವನ್ನ ತೆಗೆಯುವ ಸಂಸ್ಥೆ.. ಕೊರೊನಾ ಮಾರಿಯೇ ಬರಲೀ, ಅದಕ್ಕಿಂದ ದೊಡ್ಡ ಮಹಾಮಾರಿಯೇ ಬಂದರೂ ಅಲ್ಲಿ ಒಂದು ನಯಾ ಪೈಸೆಯೂ ನಷ್ಟ ಆಗೋದೇ ಇಲ್ಲ.. ಸರ್ಕಾರಕ್ಕೆ ಸಾವಿರಾರು ಕೋಟಿ ಲಾಭ ತಂದು ಕೊಡುವ ಆ ಸಂಸ್ಥೆಯ ಕಾರ್ಮಿಕರ (Labourers) ಸ್ಥಿತಿ ನೋಡಿದ್ರೆ ನೀವೇ ಶಾಕ್ ಆಗ್ತಿರಾ..
ಸರ್ಕಾರಕ್ಕೆ ನೂರಾರು ಕೋಟಿ ಲಾಭ ತಂದುಕೊಡುವ ಕಾರ್ಮಿಕರಿಗಿಲ್ಲ ಸುವ್ಯವಸ್ಥೆ..!
ಹೌದು..ಹಟ್ಟಿ ಚಿನ್ನದ ಗಣಿ ಅಂದ್ರೆ ಅದು ಈಗಲೂ ಆಕ್ಟಿವ್ನಲ್ಲಿರೊ ಚಿನ್ನ ಉತ್ಪಾದನಾ ಕೇಂದ್ರ.. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನಲ್ಲಿರೋ (Lingasugur in Raichur) ಹಟ್ಟಿ ಚಿನ್ನದ ಗಣಿಯಲ್ಲಿ ಈಗಲೂ ಚಿನ್ನ ಉತ್ಪಾದನೆ ಮಾಡಲಾಗುತ್ತೆ.. ಸರ್ಕಾರದ ಖಜಾನೆಯನ್ನ ತುಂಬಿಸೋದ್ರಲ್ಲಿ ಹಟ್ಟಿ ಚಿನ್ನದ ಗಣಿ (Hatti mines) ತನ್ನದೇ ಆದ ಖ್ಯಾತಿ ಪಡೆದಿದೆ.. ಕೊರೊನಾ ಬಂದ ವೇಳೆ ಯಾವ ಯಾವ ಕಂಪನಿಗಳು ಬೀದಿಗೆ ಬಂದವು.. ಅದೆಷ್ಟೋ ಕಂಪನಿಗಳು ನಷ್ಟಕ್ಕೊಳಗಾಗಿ ಈಗಲೂ ಪರಿತಪಿಸುತ್ತಿವೆ..
ಕೊರೊನಾ ಕಾಲದಲ್ಲಿ ಲಾಭ ಕಂಡವರಿಗಿಂತ ಲಾಸ್ ಆಗಿರೋರೇ ಹೆಚ್ಚು.. ಅಂಥ ವೇಳೆಯಲ್ಲೂ ಇದೇ ಹಟ್ಟಿ ಚಿನ್ನದ ಗಣಿ ಕೇಜಿಗಟ್ಟಲೇ ಚಿನ್ನವನ್ನ ಉತ್ಪಾದಿಸಿದೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ಕೊಡುಗೆ ನೀಡಿದೆ. ಆದ್ರೆ ಅದೇ ಹಟ್ಟಿ ಚಿನ್ನದ ಗಣಿಯಲ್ಲಿ ಕೆಲಸ ಮಾಡೋ ಕಾರ್ಮಿಕರ ಸ್ಥಿತಿ ಯಾರಿಗೂ ಬೇಡ.. ಚಿನ್ನ ಉತ್ಪಾದಿಸೋ ಕಾರ್ಮಿಕರ ಬಾಳೇ ಕತ್ತಲಲ್ಲಿದೆ.. ಇಲ್ಲಿ ಕೆಲಸ ಮಾಡೋ ಕಾರ್ಮಿಕರ ಸಮಸ್ಯೆ, ಅಳಲು ಒಂದ ಎರಡಾ… ಎಂದು ವಿಷಾದದ ದನಿಯಲ್ಲಿ ಹೇಳುತ್ತಾರೆ ಕಾರ್ಮಿಕ ಕಂಠಿ ಬಸವ.
ಇದು ಅಕ್ಷರಶಃ ನಿಜ.. ಹಟ್ಟಿ ಚಿನ್ನದ ಗಣಿಯಲ್ಲಿ ಸುಮಾರು 4,000 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.. ಆ ಪೈಕಿ ಬಹುತೇಕ ಕಾರ್ಮಿಕರು ಹಟ್ಟಿ ಕಂಪನಿಯ 1,000 ಕ್ಕೂ ಹೆಚ್ಚು ಮನೆಗಳಲ್ಲಿ ವಾಸಿಸುತ್ತಿದ್ದಾರೆ.. ಆದ್ರೆ ಆ ಮನೆಗಳ ಸ್ಥಿತಿ ಶೋಚನೀಯವಾಗಿದೆ.. ಮಳೆ ಬಂದ್ರೆ ಸಾಕು ಹಟ್ಟಿ ಕಂಪನಿಯ ಬಹುತೇಕ ಮನೆಗಳು ಸೋರುತ್ತವೆ..
ಶೀಟ್ ಮನೆಗಳಾಗಿರೋ ಹಿನ್ನೆಲೆ ಬಹುತೇಕ ಮನೆಗಳ ಶೀಟ್ ಒಡೆದು ಹೋಗಿವೆ, ಅವುಗಳ ದುರಸ್ಥಿ ಕಾರ್ಯವೂ ಆಗಿಲ್ಲ.. ಇನ್ನು ಕೆಲ ಮನೆಗಳ ಗೋಡೆ ಬಿರುಕು ಬಿಟ್ಟಿವೆ.. ಮೇಲ್ಛಾವಣಿ ಒಡೆದು ಹೋಗಿವೆ.. ಮಳೆಗಾಲದಲ್ಲಿ ದಿನನಿತ್ಯ ಕುಟುಂಬಸ್ಥರೆಲ್ಲಾ ಸೋರುವ ಮನೆಯಲ್ಲೇ ವಾಸ ಮಾಡೋ ಅನಿವಾರ್ಯತೆ ಇದೆ..
ದುರಸ್ಥಿ ಕಾರ್ಯ ಮಾಡಿಸಿ ಅಂತ ಅಧಿಕಾರಿಗಳಿಗೆ ದೂರು ನೀಡಿದ್ರೆ, ಯಾರೂ ಕ್ಯಾರೆ ಎನ್ನಲ್ಲ.. ಈಗ ಮಾಡೋಣ, ಆಗ ಮಾಡೋಣ ಅಂತಾರೆ.. ಮಳೆಗಾಲದಲ್ಲಿ ಕೇಳಿದರೆ ಮಳೆಗಾಲ ಹೋಗ್ಲಿ ಅಂದ್ರು.. ಆದ್ರೀಗ ತಮ್ಮತ್ತ ತಿರುಗಿಯೂ ನೋಡ್ತಿಲ್ಲ ಅಂತ ಕಾರ್ಮಿಕರ ಕುಟುಂಬಸ್ಥರು ಅಳಲನ್ನ ತೋಡಿಕೊಂಡಿದ್ದಾರೆ. ಈ ಬಗ್ಗೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಹಾಗೂ ಮಾಜಿ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಆಲ್ಕೋಡ್ ಹನುಮಂತಪ್ಪ ಕಿಡಿಕಾರಿದ್ದಾರೆ. ಕೂಡಲೇ ಕಾರ್ಮಿಕರ ಸಮಸ್ಯೆ ಆಲಿಸಿ ಅಂತ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಭಟ್ಕಳ: ಕಸದ ಬುಟ್ಟಿ ಬಕೆಟ್ ಖರೀದಿಯಲ್ಲೂ ಗೋಲ್ಮಾಲ್! ನೂರಿನ್ನೂರು ರೂ ಬಕೆಟ್ 950ಕ್ಕೆ ಖರೀದಿ ಮಾಡಿದ ಗ್ರಾಮ ಪಂಚಾಯತ್
ಇದಷ್ಟೇ ಅಲ್ಲ, ಇಲ್ಲಿ ಕಾರ್ಮಿಕರ ಭತ್ಯೆ, ಮೆಡಿಕಲ್ ಭತ್ಯೆ, ಕಾರ್ಮಿಕರ ಮಕ್ಕಳಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿವೆ. ಈಗಲಾದ್ರೂ ಸರ್ಕಾರವಾಗಲಿ ಇಲ್ಲವೇ ಸಂಬಂಧಪಟ್ಟ ಅಧಿಕಾರಿಗಳಾಗಲಿ ಸರ್ಕಾರಕ್ಕೆ ಕೋಟಿ ಕೋಟಿ ಆದಾಯ ತಂದು ಕೊಡುವ ಈ ಕಾರ್ಮಿಕರ ಶ್ರಮಕ್ಕೆ ತಕ್ಕಂತೆ, ಅವರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕಿದೆ. (ವರದಿ: ಭೀಮೇಶ್ ಪೂಜಾರ್, ಟಿವಿ 9, ರಾಯಚೂರು)
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ