ಭಟ್ಕಳ: ಕಸದ ಬುಟ್ಟಿ ಬಕೆಟ್ ಖರೀದಿಯಲ್ಲೂ ಗೋಲ್ಮಾಲ್! ನೂರಿನ್ನೂರು ರೂ ಬಕೆಟ್ 950ಕ್ಕೆ ಖರೀದಿ ಮಾಡಿದ ಗ್ರಾಮ ಪಂಚಾಯತ್
ಇದು ಕೇವಲ ಶಿರಾಲಿ ಹಾಗೂ ಮಾರುಕೇರಿ ಭಾಗದಲ್ಲಿ ಮಾತ್ರವಲ್ಲದೇ ಜಿಲ್ಲೆಯ ಇತರೇ ಪಂಚಾಯತ್ ಗಳಲ್ಲೂ ಅಧಿಕ ಬೆಲೆಗೆ ಈ ರೀತಿ ಬಕೆಟ್ ಖರೀದಿ ಮಾಡಿ ಭ್ರಷ್ಟಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ.
ಭ್ರಷ್ಟಾಚಾರ ಅನ್ನೋದು ಇತ್ತೀಚೆಗೆ ಹೆಚ್ಚಾಗಿಯೇ ಆಗುತ್ತಿದೆ. ಕಾಮಗಾರಿಗಳಲ್ಲಿ, ಬಿಲ್ ಮಂಜೂರಿ ಮಾಡಿಕೊಳ್ಳಬೇಕಾದರೆ ಭ್ರಷ್ಟಾಚಾರ ಸಾಮಾನ್ಯ. ಆದರೆ ಸ್ವಚ್ಛ ಗ್ರಾಮದ ಯೋಜನೆಯಡಿ ಜನರಿಗೆ ನೀಡಲು ಖರೀದಿಸಿದ ಬಕೆಟ್ ಗಳಲ್ಲಿಯೇ ಭ್ರಷ್ಟಾಚಾರ ನಡೆದಿರುವ ಆರೋಪ ಇದೀಗ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕೇಳಿ ಬಂದಿದೆ. ಮಾರುಕಟ್ಟೆಯಲ್ಲಿ 100, 200 ರೂಪಾಯಿಗೆ ಸಿಗುವ ಬಕೆಟ್ ಅನ್ನ 950 ರೂಪಾಯಿಗೆ ಖರೀದಿ ಮಾಡುವ ಮೂಲಕ ಲಕ್ಷಾಂತರ ರೂಪಾಯಿಯನ್ನು ತಮ್ಮ ಜೇಬಿಗಿಳಿಸಿದ್ದಾರೆನ್ನುವ ಆರೋಪ ಕೇಳಿ ಬಂದಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ.
ಹೌದು ಭ್ರಷ್ಟಾಚಾರ ತಡೆಗೆ ನಾನಾ ಪ್ರಯತ್ನ ಮಾಡಿದರೂ ಹಣ ಲಪಟಾಯಿಸುವ ನೌಕರರು ಮಾತ್ರ ತಮ್ಮ ಭ್ರಷ್ಟಾಚಾರವನ್ನ ಮಾತ್ರ ನಿಲ್ಲಿಸುವುದಿಲ್ಲ. ಸ್ವಚ್ಛ ಗ್ರಾಮ ಯೋಜನೆಯಡಿ ಜನರಿಗೆ ಕೊಡುವ ಬಕೆಟ್ ನಲ್ಲೇ ಭ್ರಷ್ಟಾಚಾರ (Bucket Golmaal) ನಡೆದಿರುವ ಆರೋಪ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ (Bhatkal Taluk) ಕೇಳಿ ಬಂದಿದೆ. ತಾಲೂಕಿನ ಮಾರುಕೇರಿ ಹಾಗೂ ಶಿರಾಲಿ ಗ್ರಾಮ ಪಂಚಾಯತದಲ್ಲಿ (Gram Panchayat) ಅತ್ಯಧಿಕ ಬೆಲೆ ನೀಡಿ ಲಕ್ಷಾಂತರ ರೂ. ವೆಚ್ಚ ಮಾಡಿ ಬಕೆಟ್ ಖರೀದಿಸಿದ್ದಾರೆನ್ನುವ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛ ಗ್ರಾಮ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಮನೆ ಮನೆ ಕಸ ವಿಲೇವಾರಿಗೆ ಬಳಸಲು ಬಕೆಟ್ ಆಕಾರದ ಕಸದ ಬುಟ್ಟಿ ಖರೀದಿಸಿ, ಅದನ್ನು ಆಯ್ದ ಮನೆಗಳಿಗೆ ಹಂಚಲಾಗಿದೆ.
ಹೀಗೆ ಖರೀದಿಸಲಾದ ಕಸದ ಬುಟ್ಟಿ ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮಾರುಕಟ್ಟೆಯಲ್ಲಿ 100 ರಿಂದ 200 ರೂಪಾಯಿಗೆ ಸಿಗುವ ಬಕೆಟನ್ನ 950 ರೂಪಾಯಿ ನೀಡಿ ಖರೀದಿ ಮಾಡಿರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮಾಹಿತಿ ನೀಡುತ್ತಾರೆ ಹೋಟೆಲ್ ಮಾಲಿಕ ನಾರಾಯಣ.
ಇದನ್ನೂ ಓದಿ: ಪ್ರಧಾನಿ ಕಚೇರಿ ಸೂಚನೆಗೂ ಡೋಂಟ್ ಕೇರ್: ದಾಬಸಪೇಟೆಯಿಂದ ದೇವನಹಳ್ಳಿ ಹೆದ್ದಾರಿ ನಿರ್ಮಾಣ ಅಪಘಾತಗಳ ತಾಣವಾಗುತ್ತಿದೆ!
ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ಎರಡು ಪ್ರತ್ಯೇಕ ಬಿಲ್ ಮೂಲಕ 195 ಬಕೆಟ್ ಖರೀದಿಸಿದ್ದು, ಇದಕ್ಕಾಗಿ 1,85,250 ರೂಪಾಯಿಗಳನ್ನು ವೆಚ್ಚ ಮಾಡಿದೆ. ತೆರಿಗೆ ಸೇರಿ 950 ರೂ. ದರಕ್ಕೆ ಹೊನ್ನಾವರದ ಕವಲಕ್ಕಿಯಲ್ಲಿರುವ `ಶಕ್ತಿ ಎಂಟರ್‌ಪ್ರೈಸಸ್ ಹಾಗೂ ಪವರ್ ಸೊಲ್ಯೂಶನ್’ನವರು ಈ ಬಕೆಟ್ ಗಳನ್ನು ಪೂರೈಸಿದ್ದಾರೆ. ಮಾರುಕೇರಿ ಗ್ರಾಮ ಪಂಚಾಯತದಲ್ಲಿ ಸಹ ಇದಕ್ಕೆ ಪೈಪೋಟಿ ನೀಡುವ ದರ ನೀಡಿ ಸುಮಾರು 101 ಬಕೆಟ್ ಖರೀದಿಸಿದೆ.
ಪಂಚಾಯತ್ ಅಧಿಕಾರಿಗಳ ಈ ರೀತಿ ಹೆಚ್ಚಿಗೆ ಹಣವನ್ನ ಕೊಟ್ಟು ಬಕೆಟ್ ಖರೀದಿ ಮಾಡಿರುವುದು ಸ್ಥಳೀಯ ಪಂಚಾಯತ್ ಸದಸ್ಯರ ಆಕ್ರೋಶಕ್ಕೆ ಸಹ ಕಾರಣವಾಗಿದೆ. ಆದರೆ ಈ ಬಗ್ಗೆ ಪಂಚಾಯತ್ ಸದಸ್ಯರುಗಳಿಗೆ ಕೇಳಿದರೆ ದುಬಾರಿ ವೆಚ್ಚದಲ್ಲಿ ಬಕೆಟ್ ಖರೀದಿ ಮಾಡಿರುವುದು ತಮಗೆ ಗೊತ್ತಿಲ್ಲ. ಹಾಗೇನಾದರು ಅವ್ಯವಹಾರ ಆಗಿದ್ದರೆ ತನಿಖೆ ನಡೆಯಲಿ ಎನ್ನುತ್ತಿದ್ದಾರೆ ಶಿರಾಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೆಂಕಟೇಶ್ ನಾಯ್ಕ.
ಇದು ಕೇವಲ ಶಿರಾಲಿ ಹಾಗೂ ಮಾರುಕೇರಿ ಭಾಗದಲ್ಲಿ ಮಾತ್ರವಲ್ಲದೇ ಜಿಲ್ಲೆಯ ಇತರೇ ಪಂಚಾಯತ್ ಗಳಲ್ಲೂ ಅಧಿಕ ಬೆಲೆಗೆ ಈ ರೀತಿ ಬಕೆಟ್ ಖರೀದಿ ಮಾಡಿ ಭ್ರಷ್ಟಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ. ಜಿಲ್ಲಾ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದರೆ ಬಕೆಟ್ ಖರೀಯಲ್ಲೂ ನಡೆದಿರುವ ಅವ್ಯವಹಾರ ಹೊರಬೀಳಲಿದೆ. (ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ)
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ