
ರಾಯಚೂರು, ಜುಲೈ 14: ಶಾಲೆಗಳು ಆರಂಭವಾಗಿ ತಿಂಗಳಿಗೂ ಹೆಚ್ಚು ಸಮಯ ಕಳೆದಿದ್ದರೂ, ಕರ್ನಾಟಕ–ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಗಡಿ ಭಾಗಗಳಲ್ಲಿರುವ 10 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇನ್ನೂ ಎಲ್ಲಾ ವಿಷಯಗಳ ಕನ್ನಡ ಪಠ್ಯಪುಸ್ತಕಗಳು ಲಭ್ಯವಾಗಿಲ್ಲ. ಒಟ್ಟು 16 ಪ್ರಾಥಮಿಕ ಹಾಗೂ 17 ಪ್ರೌಢಶಾಲೆಗಳಿಗೆ ಇನ್ನೂ ಪಠ್ಯಪುಸ್ತಕಗಳು ತಲುಪಬೇಕಿದ್ದು, ಸರ್ಕಾರದ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಡಿ ಭಾಗದ ಹಲವು ಶಾಲೆಗಳ ಶಿಕ್ಷಕರು ಒಂದು ಪುಸ್ತಕವನ್ನು 7–8 ವಿದ್ಯಾರ್ಥಿಗಳು ಹಂಚಿಕೊಂಡು ಓದುವಂತೆ ವ್ಯವಸ್ಥೆ ಮಾಡುತ್ತಿದ್ದಾರೆ. ಹಿಂದಿನ ವರ್ಷದ ವಿದ್ಯಾರ್ಥಿಗಳಿಂದ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಕೊರತೆಯನ್ನು ನೀಗಿಸುವ ಪ್ರಯತ್ನ ನಡೆಯುತ್ತಿದೆ. ಮೇ ತಿಂಗಳಲ್ಲೇ ಪಠ್ಯಪುಸ್ತಕಗಳ ಬೇಡಿಕೆಯನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದರೂ ಇನ್ನೂ ಪುಸ್ತಕಗಳು ಬಂದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಸ್ಟೂಡೆಂಟ್ ಯೂನಿಯನ್ ಎಲೆಕ್ಷನ್ ಮತ್ತೆ ಜಾರಿ ಮಾಡುವುದಾಗಿ ಹೇಳಿ ಸೈಲೆಂಟ್ ಆದ ಸರ್ಕಾರ; ಕಾರಣವೇನು?
ಕೃಷ್ಣ ಮಂಡಲ, ಮಗನೂರು, ಕುನ್ಸಗಿ, ಹಿಂದುಪುರ, ಗುಲ್ಯಂ, ಹೊಳಗುಂದ, ಹಸನಾಳ, ಬಡಿನೆಹಾಳ, ಕುಂಟನಾಳ, ಸುಳೇಕೆರೆ, ಬಾಪುರ, ದೊಡ್ಡಹರಿವಾಣ, ನಡಿಚಾಗಿ, ರೌದೂರು, ಆದೋನಿ, ಕೌತಾಳಂ, ಹಳಹರವಿ ಸೇರಿದಂತೆ ಹಲವು ಗಡಿ ಗ್ರಾಮಗಳಲ್ಲಿ ಶತಮಾನಕ್ಕೂ ಹೆಚ್ಚು ಕಾಲದಿಂದ ಕನ್ನಡ ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಬಿಟ್ಟು ತೆಲುಗು ಹಾಗೂ ಇಂಗ್ಲಿಷ್ ಮಾಧ್ಯಮದತ್ತ ಮುಖ ಮಾಡುತ್ತಿದ್ದಾರೆ ಎಂದು ಹೋರಾಟಗಾರ ಬಸವರಾಜ ಕಲಸಾ ಹೇಳಿದ್ದಾರೆ. ಒಂದೊಮ್ಮೆ ಕರ್ನಾಟಕದ ಶಾಲೆಗಳಲ್ಲಿ ಓದಲು ಮಕ್ಕಳನ್ನು ಕಳುಹಿಸಿದರೂ, ಅವರು ಕರ್ನಾಟಕದ ನಿವಾಸಿಗಳಲ್ಲ ಎಂಬ ಕಾರಣ ನೀಡಿ ವಸತಿ ನಿಲಯಗಳಲ್ಲಿ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರಾಯಚೂರು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಜಿ., ಪಠ್ಯಪುಸ್ತಕಗಳ ಬೇಡಿಕೆಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ. ಹಂತ ಹಂತವಾಗಿ ಪುಸ್ತಕಗಳು ಬರುತ್ತಿದ್ದು, ನೆರೆಯ ರಾಜ್ಯಗಳಲ್ಲಿರುವ ಕನ್ನಡ ಶಾಲೆಗಳಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿರೋದಾಗಿ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:51 pm, Tue, 14 July 26