Raichur: ಕಲ್ಲಿದ್ದಲಿಗೆ ಕನ್ನ; ಖಾಸಗಿ ಕಂಪನಿಗೆ ಶಾಕ್ ಕೊಟ್ಟ ವೈಟಿಪಿಎಸ್
ರಾಯಚೂರಿನ ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಸೇರಿದ 10 ಲಕ್ಷ ರೂ. ಮೌಲ್ಯದ 200 ಟನ್ ಕಲ್ಲಿದ್ದಲು ಅಕ್ರಮ ಸಾಗಾಟದ ಸಂಬಂಧ ಖಾಸಗಿ ಎಂ.ಆರ್.ಎಸ್. ಪವರ್ ಮೆಕ್ ಕಂಪನಿ ವಿರುದ್ಧ ದೂರು ದಾಖಲಾಗಿದೆ. ನಿರ್ವಹಣಾ ಕಂಪನಿಯು ರೈಲುಗಳಿಂದ ಪೂರ್ಣ ಕಲ್ಲಿದ್ದಲು ಇಳಿಸದೆ, ಉಳಿದದ್ದನ್ನು ಖಾಸಗಿ ಕಾರ್ಖಾನೆಗಳಿಗೆ ಮಾರಾಟ ಮಾಡಿ ಸರ್ಕಾರಕ್ಕೆ ನಷ್ಟ ಉಂಟುಮಾಡಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಕೇಸು ದಾಖಲಾಗಿದೆ.

ರಾಯಚೂರು, ಡಿಸೆಂಬರ್ 16: ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಸೇರಿದ ಕಲ್ಲಿದ್ದಲು ಅಕ್ರಮ ಸಾಗಾಟ ಸಂಬಂಧ ಖಾಸಗಿ ನಿರ್ವಣಾ ಕಂಪನಿ ವಿರುದ್ಧ ದೂರು ದಾಖಲಾಗಿದೆ. ವಿದ್ಯುತ್ ಉತ್ಪಾದನಾ ಘಟಕದ ಮುಖ್ಯ ಅಭಿಯಂತರ ಚಂದ್ರಶೇಖರ್ ಶೆಟ್ಟಿ ಅವರ ದೂರಿನ ಅನ್ವಯ ಕಲ್ಲಿದ್ದಿಲು ಡಂಪಿಂಗ್ ಹಾಗೂ ಸ್ವಚ್ಛತೆ ನಿರ್ವಹಣೆ ಮಾಡುತ್ತಿದ್ದ ಎಂ.ಆರ್.ಎಸ್. ಪವರ್ ಮೆಕ್ ಕಂಪನಿಯ ಉಪಾಧ್ಯಕ್ಷ ಅಜಯ್ ಕುಮಾರ್ ಹಾಗೂ ಉಸ್ತುವಾರಿ ಸುರೇಂದ್ರನಾಥ್ ವಿರುದ್ಧ ಕೇಸ್ ದಾಖಲಾಗಿದೆ.
200 ಟನ್ ಕಲ್ಲಿದ್ದಲು ಅಕ್ರಮ ಸಾಗಾಟ
2025ರ ಮೇ ತಿಂಗಳಿನಿಂದ ಡಿಸೆಂಬರ್ 11ರ ವರೆಗೆ ಅಕ್ರಮವಾಗಿ 10 ಲಕ್ಷ ಮೌಲ್ಯದ ಸುಮಾರು 200 ಟನ್ ಕಲ್ಲಿದ್ದಲು ಸಾಗಾಟ ನಡೆಸಲಾಗಿದೆ. ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಿರ್ವಹಣಾ ಕಂಪನಿ ನಷ್ಟ ಉಂಟುಮಾಡಿದೆ ಎಂದು ರಾಯಚೂರು ಗ್ರಾಮೀಣ ಠಾಣೆಗೆ ನೀಡಲಾದ ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ರಾಯಚೂರು ವಿದ್ಯುತ್ ಉತ್ಪಾದನಾ ಘಟಕದ ಕಲ್ಲಿದ್ದಲು ಖಾಸಗಿ ಫ್ಯಾಕ್ಟರಿಗಳಿಗೆ ಸಪ್ಲೈ; ಕೋಟ್ಯಂತರ ರೂ ಲೂಟಿ?
ಕಂಪನಿ ಕಳ್ಳಾಟ
ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರತಿನಿತ್ಯ 3-4 ಗೂಡ್ಸ್ ರೈಲುಗಳ ಮೂಲಕ 180-240 ಬೋಗಿ ಕಲ್ಲಿದ್ದಲು ಸರಬರಾಜಾಗುತ್ತದೆ. ರೈಲಿನಲ್ಲಿ ಬರುವ ಸುಮಾರು 12-16 ಸಾವಿರ ಟನ್ ಪೈಕಿ ಪೂರ್ಣ ಕಲ್ಲಿದ್ದಲು ಡಂಪ್ ಮಾಡದೆ ಕಳ್ಳಾಟ ಆಡುತ್ತಿದ್ದ ಕಂಪನಿ, ಕೆಲ ಪ್ರಮಾಣದ ಕಲ್ಲಿದ್ದಲನ್ನು ರೈಲಿನಲ್ಲಿಯೇ ಬಾಕಿ ಉಳಿಸಿಕೊಳ್ಳುತ್ತಿತ್ತು. ಬಳಿಕ ಯರಮರಸ್ ರೈಲು ನಿಲ್ದಾಣದ ಬಳಿ ಉಳಿದ ಕಲ್ಲಿದ್ದಲು ಅನ್ಲೋಡ್ ಮಾಡಿಕೊಂಡು, ಅಲ್ಲಿಂದ ಅವನ್ನು ಖಾಸಗಿ ಫ್ಯಾಕಟ್ರಿಗಳು ಮತ್ತು ಇಟ್ಟಿಗೆ ಕಾರ್ಖಾನೆಗಳಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿತ್ತು ಎಂದು ದೂರಲ್ಲಿ ಆರೋಪಿಸಲಾಗಿದೆ.
ವಿದ್ಯುತ್ ಉತ್ಪಾದನಾ ಘಟಕಕ್ಕೆ ಸೇರಿದ ಕಲ್ಲಿದ್ದಲು ಅಕ್ರಮ ಸಾಗಾಟದ ಕುರಿತು 2023ರಲ್ಲಿ ಟಿವಿ9 ವಿಸ್ತೃತವಾದ ವರದಿ ಬಿತ್ತರಿಸಿತ್ತು. ಆ ಬಳಿಕ ಕೆಪಿಸಿಎಲ್ ಅಧಿಕಾರಿಗಳು ರಾಯಚೂರು ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದರು. ಈ ಮಧ್ಯೆ ಮತ್ತೆ ವೈಟಿಪಿಎಸ್ ಘಟಕಕ್ಕೆ ಸೇರಿದ ಕಲ್ಲಿದ್ದಿಲು ಅಕ್ರಮ ಸಾಗಾಟದ ಆರೋಪ ಕೇಳಿಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



