AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು ವಿದ್ಯುತ್ ಉತ್ಪಾದನಾ ಘಟಕದ ಕಲ್ಲಿದ್ದಲು ಖಾಸಗಿ ಫ್ಯಾಕ್ಟರಿಗಳಿಗೆ ಸಪ್ಲೈ: ಕೋಟ್ಯಂತರ ರೂ ಲೂಟಿ?

ರಾಯಚೂರು ತಾಲೂಕಿನ ಯರಮರಸ್ ಬಳಿಯ ವೈಟಿಪಿಎಸ್​​ ವಿದ್ಯುತ್ ಉತ್ಪಾದನಾ ಘಟಕದ ಕಲ್ಲಿದ್ದಲನ್ನು ಅಕ್ರಮ ಸಾಗಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಅಕ್ರಮವಾಗಿ ಕಲ್ಲಿದ್ದಲನ್ನು ಖಾಸಗಿ ಫ್ಯಾಕ್ಟರಿಗಳಿಗೆ ಸರಬರಾಜು ಮಾಡಿ ಕೋಟ್ಯಂತರ ರೂ ಲೂಟಿ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳ ತಂಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾಯಚೂರು ವಿದ್ಯುತ್ ಉತ್ಪಾದನಾ ಘಟಕದ ಕಲ್ಲಿದ್ದಲು ಖಾಸಗಿ ಫ್ಯಾಕ್ಟರಿಗಳಿಗೆ ಸಪ್ಲೈ: ಕೋಟ್ಯಂತರ ರೂ ಲೂಟಿ?
ಕಲ್ಲಿದ್ದಲು
ಭೀಮೇಶ್​​ ಪೂಜಾರ್
| Updated By: ಗಂಗಾಧರ​ ಬ. ಸಾಬೋಜಿ|

Updated on: Dec 14, 2025 | 9:09 PM

Share

ರಾಯಚೂರು, ಡಿಸೆಂಬರ್​ 14: ಅದು ರಾಜ್ಯಕ್ಕೆ ವಿದ್ಯುತ್ ಪೂರೈಸುವ ವಿದ್ಯುತ್ ಉತ್ಪಾದನಾ ಘಟಕ (Power generation plant). ಅದೇ ಘಟಕಕ್ಕೆ ಸರಬರಾಜು ಆಗುವ ಕೋಟ್ಯಂತ ರೂ ಮೊತ್ತದ ಕಲ್ಲಿದ್ದಲು (Coal) ಈಗ ನಿರ್ವಹಣೆ ಹೆಸರಿನಲ್ಲಿ ಖಾಸಗಿ ಫ್ಯಾಕ್ಟರಿಗಳಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿರುವ ಆರೋಪ ಕೇಳಿಬಂದಿದೆ. ಈ ಹಿಂದೆಯೂ ಇದೇ ರೀತಿ ಕಲ್ಲಿದ್ದಲು ಕಳ್ಳತನ ಸಂಬಂಧ ಎಫ್​ಐಆರ್ ದಾಖಲಾಗಿತ್ತು. ಆದರೆ ಇದೀಗ ಮತ್ತೆ ಅದೇ ರೀತಿ ದಂಧೆ ವಿಸ್ತರಿಸಿಕೊಂಡಿದ್ದು ಬೆಳಕಿಗೆ ಬಂದಿದೆ.

ಅಕ್ರಮವಾಗಿ ಕಲ್ಲಿದ್ದಲು ಮಾರಾಟ ಆರೋಪ

ರಾಜ್ಯ ಸರ್ಕಾರ ಅಧೀನದಲ್ಲಿರುವ ರಾಯಚೂರಿನ ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಸೇರಿರುವ ಕಲ್ಲಿದ್ದಲನ್ನು ಹಾಡಹಗಲೇ ರಾಜಾರೋಷವಾಗಿ ರಾಶಿರಾಶಿ ಸಾಗಾಟ ಮಾಡಲಾಗುತ್ತಿದೆ. ಇದೇ ಕಲ್ಲಿದ್ದಲನ್ನ ನಿರ್ವಹಣೆ ಹೆಸರಿನಲ್ಲಿ ಖಾಸಗಿ ಫ್ಯಾಕ್ಟರಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿರುವ ಆರೋಪ ಕೇಳಿ ಬಂದಿದೆ.

ಕಲ್ಲಿದ್ದಲು ಮೂಲಕ ರಾಯಚೂರಿನ ವೈಟಿಪಿಎಸ್ ವಿದ್ಯುತ್ ಉತ್ಪಾದನೆ ಮಾಡಲಾಗತ್ತೆ. ಇದೇ ಕಾರಣಕ್ಕೆ ಹಂತಹಂತವಾಗಿ ಗೂಡ್ಸ್ ರೈಲ್ವೆ ಮೂಲಕ ಒಂದು ಬಾರಿಗೆ ಸುಮಾರು 50-55 ಗೂಡ್ಸ್ ಬೋಗಿಗಳಲ್ಲಿ ಕಲ್ಲಿದ್ದಲನ್ನ ಇಲ್ಲಿಗೆ ಸರಬರಾಜು ಮಾಡಲಾಗತ್ತೆ. ಹೀಗೆ ವೈಟಿಪಿಎಸ್ ಕೇಂದ್ರದಲ್ಲಿ ರೈಲ್ವೆ ಬೋಗಿಗಳಲ್ಲಿನ ಎಲ್ಲಾ ಕಲ್ಲಿದ್ದಲನ್ನ ಅನ್ ಲೋಡ್ ಮಾಡಿ, ಬಳಿಕ ಅದನ್ನ ಘಟಕದಲ್ಲಿಯೇ ಸ್ವಚ್ಛಗೊಳಿಸಬೇಕು. ಈ ನಿರ್ವಹಣೆಯನ್ನ ಖಾಸಗಿ ಕಂಪನಿಗೆ ಟೆಂಡರ್ ನೀಡಲಾಗಿದೆ.

ಇದನ್ನೂ ಓದಿ: ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಭಾರಿ ಚಿನ್ನದ ನಿಕ್ಷೇಪ ಪತ್ತೆ! ಉತ್ಖನನಕ್ಕೊಪ್ಪದ ಅರಣ್ಯ ಇಲಾಖೆ

ಸ್ವಚ್ಛತಾ ಕಾರ್ಯ ನಿರ್ವಹಣೆ ಮಾಡುವ ಖಾಸಗಿ ಕಂಪನಿಯವರೇ ಈ ಎಲ್ಲಾ ಕಲ್ಲಿದ್ದಲನ್ನ ಅನ್ ಲೋಡ್ ಪ್ರಕ್ರಿಯೆಯ ನಿರ್ವಹಣೆ ನೋಡಿಕೊಳ್ಳಬೇಕು. ಹೀಗೆ ಅನ್ ಲೋಡ್ ಹಾಗೂ ಸ್ವಚ್ಛತಾ ಕಾರ್ಯವಾದ ಬಳಿಕ ಈ ಗೂಡ್ಸ್ ರೈಲಿನಲ್ಲಿರುವ ಕಲ್ಲಿದ್ದಲನ್ನ ರಾಯಚೂರಿನ ಯರಮರಸ್ ರೈಲು ನಿಲ್ದಾಣದ ಬಳಿ ನಿಲ್ಲಿಸಿ, ಇಲ್ಲಿಯೂ ಸ್ವಚ್ಛತಾ ಕಾರ್ಯ ಮಾಡಲಾಗತ್ತೆ. ಆಗ ರೈಲ್ವೆ ಬೋಗಿಗಳಲ್ಲಿರುವ ಕಲ್ಲಿದ್ದಲನ್ನ ರೈಲು ನಿಲ್ದಾಣದ ಬಳಿ ಡಂಪ್ ಮಾಡಲಾಗತ್ತೆ. ಹೀಗೆ ಡಂಪ್ ಆಗುವ ಕಲ್ಲಿದ್ದಲು ಪುಡಿಯಾಗಿರಲ್ಲ, ಕಳಪೆ ಗುಣಮಟ್ಟದ್ದು ಇರಲ್ಲ.

ವಿದ್ಯುತ್ ಉತ್ಪಾದನಾ ಘಟಕಕ್ಕೆ ಸರಬರಾಜು ಆಗುವ ಗುಣಮಟ್ಟದ ದೊಡ್ಡದೊಡ್ಡ ಗಾತ್ರದ ಕಲ್ಲಿದ್ದಲನ್ನೇ ಇಲ್ಲೂ ಡಂಪ್ ಮಾಡಲಾಗತ್ತೆ. ಅಂದರೆ ಘಟಕದೊಳಗಡೆ ಪೂರ್ಣ ಪ್ರಮಾಣದಲ್ಲಿ ಕಲ್ಲಿದ್ದಲನ್ನ ಅನ್ ಲೋಡ್ ಮಾಡದೇ, ಕೆಲವೊಂದಿಷ್ಟು ಕಲ್ಲಿದ್ದಲನ್ನ ಹಾಗೆಯೇ ಉಳಿಸಿಕೊಂಡು ಬಂದು, ರೈಲ್ವೆ ನಿಲ್ದಾಣದ ಬಳಿ ಅದನ್ನ ರಾಶಿ ಹಾಕಿ, ಬಳಿಕ ಆ ಕಲ್ಲಿದ್ದಲನ್ನ ಟಿಪ್ಪರ್, ಟ್ರಾಕ್ಟರ್ ಮೂಲಕ ಖಾಸಗಿ ಫ್ಯಾಕ್ಟರಿಗಳು, ಇಟ್ಟಿಗೆ ಫ್ಯಾಕ್ಟರಿಗಳಿಗೆ ಸಾಗಾಟ ಮಾಡಲಾಗುತ್ತಿದೆ ಎಂದು ಸ್ಥಳೀಯ ಹೋರಾಟಗಾರ ಸುರೇಶ್ ಬಾಬು ಆರೋಪಿಸಿದ್ದಾರೆ.

ಖಾಸಗಿ ಫ್ಯಾಕ್ಟರಿಗಳಿಗೆ ಸರಬರಾಜು: ಕೋಟ್ಯಂತರ ರೂ ಲೂಟಿ

ಹೀಗೆ ಯರಮರಸ್ ರೈಲ್ವೆ ನಿಲ್ದಾಣದ ಬಳಿ ಅಕ್ರಮವಾಗಿ ಕಲ್ಲಿದ್ದಲನ್ನು ಖಾಸಗಿ ಫ್ಯಾಕ್ಟರಿಗಳಿಗೆ ಸರಬರಾಜು ಮಾಡಿ ಕೋಟ್ಯಂತರ ರೂ ಲೂಟಿ ಮಾಡಲಾಗುತ್ತಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಈ ಹಿಂದೆ 2023 ರಲ್ಲೂ ಇದೇ ರೀತಿ ಅಕ್ರಮವಾಗಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ಸಪ್ಲೈ ಆಗುವ ಕಲ್ಲಿದ್ದಲನ್ನ ನಿರ್ವಹಣೆ ಹೆಸರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗಿದ್ದ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಆಗ ಅಲರ್ಟ್ ಆಗಿದ್ದ ಅಧಿಕಾರಿಗಳು ಗುತ್ತಿಗೆದಾರ ಹಾಗೂ ರೈಲ್ವೆ ನಿಲ್ದಾಣ ಮಾಸ್ಟರ್ ವಿರುದ್ಧ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿತ್ತು.

ಇದಾದ ಬಳಿಕ ಈಗ ಮತ್ತೆ ಅದೇ ರೀತಿ ಅಕ್ರಮವಾಗಿ ಕಲ್ಲಿದ್ದಲು ಸಾಗಾಟ ಮಾಡುತ್ತಾ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ ಉಂಟುಮಾಡಲಾಗುತ್ತಿದೆ. ಈ ಅಕ್ರಮದಲ್ಲಿ ಗುತ್ತಿಗೆದಾರರು, ಕೆಲ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಅಂತ ಸ್ಥಳೀಯ ಹೋರಾಟಗಾರರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮನೆ, ಅಂಗಡಿ-ಮುಂಗಟ್ಟು ಆಯ್ತು: ಈಗ ರಾಯಚೂರಿನಲ್ಲಿ ಕಳ್ಳರಿಗೆ ಬಿಳಿ ಬಂಗಾರ ಟಾರ್ಗೆಟ್

ಇತ್ತ ಘಟನೆ ಬೆಳಕಿಗೆ ಬರುತ್ತಿದ್ದಂತೆ ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ತಂಡ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಠಿಕಾಣಿ ಹೂಡಿದೆ. ನಿನ್ನೆ ರಾತ್ರೋರಾತ್ರಿ ಠಾಣೆಯಲ್ಲೇ ಕೂತು ಈ ಬಗ್ಗೆ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಅಲ್ಲದೇ ಘಟನೆ ಬಗ್ಗೆ ಠಾಣಾಧಿಕಾರಿಗಳಿಗೆ ವಿದ್ಯುತ್ ಉತ್ಪಾದನಾ ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಎಫ್ಐಆರ್ ದಾಖಲಿಸಲು ಮುಂದಾಗಿದ್ದಾರೆ.

ಪೊಲೀಸರೇ ಈ ಬಗ್ಗೆ ತನಿಖೆ ಮಾಡುತ್ತಾರೆ: ಅಶೋಕ್ ಬೊಮ್ಮನಹಳ್ಳಿ

ಈ ಬಗ್ಗೆ ವೈಟಿಪಿಎಸ್ ಘಟಕದ ಇ.ಡಿ ಅಶೋಕ್ ಬೊಮ್ಮನಹಳ್ಳಿ ಪ್ರತಿಕ್ರಿಯಿಸಿದ್ದು, ಈಗ ಇದು ಪ್ರಾಥಮಿಕ ಹಂತದಲ್ಲಿದೆ. ಪೊಲೀಸರೇ ಈ ಬಗ್ಗೆ ತನಿಖೆ ಮಾಡುತ್ತಾರೆ. ತನಿಖೆ ಬಳಿಕ ವಿವರವಾಗಿ ಹೇಳುತ್ತೇವೆ. ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ರಾಜ್ಯ ಸರ್ಕಾರವಾಗಲಿ, ಇಲ್ಲಾ ಇಂದನ ಇಲಾಖೆ ಸಚಿವರು ಈ ಬಗ್ಗೆ ಗಮನ ಹರಿಸಿ ಇಂಥದ್ದೊಂದು ಅಕ್ರಮದ ಜಾಲದ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.