ಮಾಸ್ಕ್ ಇಲ್ಲದೇ ರೈಲ್ವೆ ಸ್ಟೇಷನ್ಗೆ ಕಾಲಿಟ್ಟರೆ ಹುಷಾರ್; ಬೀಳಲಿದೆ ಭಾರೀ ದಂಡ
ಕೊರೊನಾ ವೈರಸ್ ನಿಯಂತ್ರಿಸಲು ಎಲ್ಲ ಆಯಾಮದಿಂದಲೂ ಸರ್ಕಾರ ಪ್ರಯತ್ನಿಸುತ್ತಿದೆ. ರೈಲಿನಲ್ಲಿ ಪ್ರಯಾಣ ಮಾಡುವವರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದೆ. ಮಾಸ್ಕ್ ಇಲ್ಲದಿದ್ದರೆ ಭಾರೀ ದಂಡ ವಿಧಿಸಲು ನಿರ್ಧರಿಸಲಾಗಿದೆ.
ಬೆಂಗಳೂರು: ಮಾಸ್ಕ್ ಇಲ್ಲದೇ ತಿರುಗಾಡಿದರೆ ಸದ್ಯ 250 ರೂ. ದಂಡ ಬೀಳುತ್ತದೆ. ಆದರೆ ರೈಲ್ವೆ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ದುಪ್ಪಟ್ಟು ದಂಡ ವಿಧಿಸಲು ನಿರ್ಧರಿಸಲಾಗಿದೆ. ರೈಲುಗಳಲ್ಲಿ ಪ್ರಯಾಣ ಮಾಡುವವರು ಮತ್ತು ನಿಲ್ದಾಣದ ಆವರಣದಲ್ಲಿ ಓಡಾಡುವವರು ಮಾಸ್ಕ್ ಧರಿಸದೇ ಇದ್ದರೆ 500 ರೂಪಾಯಿ ದಂಡ ಹಾಕಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದರ ಜೊತೆಗೆ ಪ್ಲಾಟ್ಫಾರ್ಮ್ ಟಿಕೆಟ್ ಬೆಲೆಯನ್ನೂ ಏರಿಸಲಾಗಿದೆ. ಇದರಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ.
ದೇಶಾದ್ಯಂತ ಕೊರೊನಾ ವೈರಸ್ ಎರಡನೇ ಅಲೆ ಜೋರಾಗಿದೆ. ಅತಿ ವೇಗದಲ್ಲಿ ಹಬ್ಬುತ್ತಿರುವ ಈ ಮಹಾಮಾರಿಯನ್ನು ನಿಯಂತ್ರಿಸಲು ಹಲವು ಬಗೆಯಲ್ಲಿ ಪ್ರಯತ್ನಿಸಲಾಗುತ್ತಿದೆ. ಅತಿ ಹೆಚ್ಚು ಜನರು ಸೇರುವ ಪ್ರದೇಶಗಳ ಮೇಲೆ ಸರ್ಕಾರ ಕಣ್ಣಿಟ್ಟಿದೆ. ಸಾಧ್ಯವಾದಷ್ಟು ಜನದಟ್ಟಣೆ ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರೈಲು ನಿಲ್ದಾಣಗಳಲ್ಲಿ ಜನರು ಅನಗತ್ಯವಾಗಿ ಓಡಾಡುವುದನ್ನು ನಿಯಂತ್ರಿಸುವ ಸಲುವಾಗಿ ಪ್ಲಾಟ್‌ಫಾರ್ಮ್ ಟಿಕೆಟ್ ದರ ಏರಿಸಲಾಗಿದೆ. ಇಂದಿನಿಂದ (ಏ.17) ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ದರ 50 ರೂಪಾಯಿ ಆಗಿದೆ.
ಈ ಮೊದಲು ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ದರ ಕೇವಲ 10 ರೂಪಾಯಿ ಆಗಿತ್ತು. ಆದರೆ ಈಗ ಏಕಾಏಕಿ 50 ರೂಪಾಯಿ ಆಗಿರುವುದರಿಂದ ಜನರ ಜೇಬಿಗೆ ಹೊರೆಯಾಗಲಿದೆ. ಆದರೂ ಕೊರೊನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈ ದರ ನಿಗದಿ ಮಾಡಲಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ಅನಗತ್ಯವಾಗಿ ಜನರು ಸೇರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಕಂಟೋನ್ಮೆಂಟ್ ಯಶವಂತಪುರ, ಕೆ.ಆರ್. ಪುರ ನಿಲ್ದಾಣಗಳಲ್ಲಿ ದರ ಹೆಚ್ಚಳ ಆಗಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.
ಅತಿ ವೇಗದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ 9 ಸಾವಿರಕ್ಕೂ ಅಧಿಕ ಜನರಿಗೆ ಪ್ರತಿದಿನ ಕೊರೊನಾ ಪಾಸಿಟಿವ್ ಆಗುತ್ತಿದೆ. ಸದ್ಯ ರಾಜ್ಯದ ಅನೇಕ ಕಡೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಆದರೂ ಕೊವಿಡ್ ನಿಯಂತ್ರಣಕ್ಕೆ ಬರುತ್ತಿಲ್ಲ. ಹೆಚ್ಚಿನ ಕ್ರಮ ಕೈಗೊಳ್ಳುವ ಉದ್ದೇಶದಿಂದ ಶುಕ್ರವಾರ ತಜ್ಞರ ಜೊತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಭೆ ನಡೆಸಿದ್ದರು. ಅದರ ಬೆನ್ನಲ್ಲೇ ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ದರ ಏರಿಸಲಾಗಿದೆ.
ಇದನ್ನೂ ಓದಿ: ಕೊರೊನಾ ಸೋಂಕು ತಡೆ ಕುರಿತು ಚರ್ಚಿಸಲು ಏ.18ಕ್ಕೆ ನಿಗದಿಯಾಗಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ
ಕುಂಭಮೇಳದಲ್ಲಿ ಭಾಗವಹಿಸಿದ್ದ ನಿರ್ವಾನಿ ಅಖಾಡದ ನಾಯಕ ಕೊವಿಡ್ನಿಂದ ಸಾವು; ಮೇಳದಿಂದ ನಿರ್ಗಮಿಸಲು ಎರಡು ಅಖಾಡ ನಿರ್ಧಾರ
(Railway platform ticket price hike to 50 rupees to prevent overcrowding in railway stations)
Published On - 7:59 am, Sat, 17 April 21