ಬೆಂಗಳೂರು, ಫೆಬ್ರವರಿ 23: ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ (Rajya Sabha Election) ಐದನೇ ಅಭ್ಯರ್ಥಿ ಸ್ಪರ್ಧಿಸಿರುವುದರಿಂದ ರಾಜ್ಯ ರಾಜಕಾರಣದಲ್ಲಿ ಲೆಕ್ಕಾಚಾರಗಳು ಗರಿಗೆದರಿವೆ. ಬಿಜೆಪಿ ಜೆಡಿಎಸ್ (JDS) ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ (Kupendra Reddy) ಅವರನ್ನು ಹೇಗಾದರೂ ಮಾಡಿ ಗೆಲ್ಲಿಸಿಕೊಳ್ಳಬೇಕೆಂದು ಉಭಯ ಪಕ್ಷಗಳು ಕಸರತ್ತು ನಡೆಸಿವೆ. ಈ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಗುರುವಾರ ಸಂಜೆ ಲೋಕಸಭಾ ಚುನಾವಣಾ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ನೇತೃತ್ವದಲ್ಲಿ ಬಿಜೆಪಿ (BJP) ಶಾಸಕಾಂಗ ಸಭೆ ನಡೆಯಿತು. ರಾಜ್ಯಸಭೆ ಹಾಗೂ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆ ಸೇರಿದಂತೆ ಹಲವು ರಣತಂತ್ರಗಳ ಬಗ್ಗೆ ಚರ್ಚಿಸಲಾಯ್ತು.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.
ಫೆಬ್ರವರಿ 28ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ ತನ್ನದೇ ಆದ ತಂತ್ರಗಾರಿಕೆ ಹೆಣೆದಿದೆ. ಮತ ಹಾಕಲು ಮೂರು ಶಾಸಕರ ಬ್ಯಾಚ್ ಮಾಡಿದೆ. ಒಂದು ಬ್ಯಾಚ್ ಗೆ ಒಬ್ಬ ಹಿರಿಯ ಶಾಸಕನನ್ನು ಲೀಡರ್ ಆಗಿ ನೇಮಕ ಮಾಡಲಾಗಿದೆ. 27ರಂದು ಬೆಳಗ್ಗೆ 8.30ಕ್ಕೆ ವಿಧಾನಸೌಧದಲ್ಲಿ ವಿಪಕ್ಷ ನಾಯಕರ ಕೊಠಡಿಯಲ್ಲಿ ಉಪಹಾರಕ್ಕೆ ಹಾಜರಾಗುವಂತೆ ಎಲ್ಲಾ ಶಾಸಕರಿಗೆ ಸೂಚನೆ ನೀಡಲಾಗಿದೆ.
ಬಿಜೆಪಿ ಶಾಸಕಾಂಗ ಸಭೆಗೆ ಬಸನಗೌಡ ಪಾಟೀಲ್ ಯತ್ನಾಳ್, ಎಸ್‌ಟಿ.ಸೋಮಶೇಖರ್, ಅರವಿಂದ್ ಬೆಲ್ಲದ್ ಗೈರಾಗಿದ್ದಾರೆ. ಸಭೆ ಬಳಿಕ ಮಾತನಾಡಿದ ಆರ್.ಅಶೋಕ್, ವಿಧಾನಸಭೆಗೆ ಯಾರು ಆಗಮಿಸಿದ್ದರೋ ಅವರು ಮಾತ್ರ ಬಂದಿದ್ದಾರೆ. ಕೆಲವರು ಊರಿಗೆ ಹೋಗಿರುವುದರಿಂದ ಸಭೆಗೆ ಬರಲಾಗಿಲ್ಲ. ಮೂರು ಜನರ ಬ್ಯಾಚ್ ಮಾಡಿದ್ದೇವೆ. ಅವರ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿಸುವ ಕ್ರಮ ನಡೆಯಲಿದೆ ಅಂತ ಹೇಳಿದ್ದಾರೆ.
ಇದನ್ನೂ ಓದಿ: ದಿಲ್ಲಿಯಿಂದ ಬೆಂಗಳೂರಿಗೆ ಕುಮಾರಸ್ವಾಮಿ ವಾಪಸ್: ಸೀಟು ಹಂಚಿಕೆ ಬಗ್ಗೆ ಹೇಳಿದ್ದಿಷ್ಟು
ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್, ಬಿಜೆಪಿ ನಡುವೆ ಗೊಂದಲವಿಲ್ಲ ಎಂದು ದೇವನಹಳ್ಳಿ ಏರ್‌ಪೋರ್ಟ್‌ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ದೆಹಲಿಗೆ ಬೆಂದಾಗ ಭೇಟಿ ಮಾಡಬೇಕೆಂದು ಅಮಿತ್ ಶಾ ಹೇಳಿದ್ದರು. ಹೀಗಾಗಿ ಕೇಂದ್ರ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಬಂದಿದ್ದೇನೆ. ಲೋಕಸಭೆ ಚುನಾವಣೆಗೆ ಇನ್ನೂ 2 ತಿಂಗಳು ಸಮಯವಿದೆ. ಮುಂದಿನ ವಾರದೊಳಗೆ ಎಲ್ಲಾ ಬಗೆಹರಿಯುತ್ತದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ