ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲೇ ರಾಮ ಮಂದಿರ ನಿರ್ಮಾಣ: ಡಾ ಸಿ ಎನ್ ಅಶ್ವಥ್ ನಾರಾಯಣ. ಸಚಿವರು
ಮುಖ್ಯಮಂತ್ರಿ ಮತ್ತು ಮುಜರಾಯಿ ಖಾತೆ ಸಚಿವ ಶಶಿಕಲಾ ಜೊಲ್ಲೆ ಅವರಿಗೆ ಪತ್ರವೊಂದನ್ನು ಬರೆದಿರುವ ಸಚಿವರು, ರಾಮನಗರದ ಜಿಲ್ಲೆಯಲ್ಲಿರುವ ರಾಮದೇವರ ಬೆಟ್ಟವನ್ನು ದಕ್ಷಿಣ ಭಾರತದ ಅಯೋಧ್ಯೆಯಾಗಿ ಅಭಿವೃದ್ಧಿಪಡಿಸಿ ಅದನ್ನೊಂದು ಪಾರಂಪರಿಕ ಪ್ರವಾಸಿ ಕ್ಷೇತ್ರವಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ

ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ (Ram Mandir) ಮಾದರಿಯಲ್ಲೇ ಕರ್ನಾಟಕದಲ್ಲೂ ಮಂದಿರ ನಿರ್ಮಿಸುವ ನಿರ್ಧಾರವನ್ನು ಮುಂದಿನ ವರ್ಷ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಘೋಷಿಸಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ (Dr CN Ashwath Narayan) ಹೇಳಿದ್ದಾರೆ. ಬುಧವಾರದಂದು ಬೆಳಗಾವಿ (Belagavi) ಸುವರ್ಣ ಸೌಧದ ಬಳಿ ಸುದ್ದಿಗಾರರೊಂದದಿಗೆ ಮಾತಾಡಿದ ಸಚಿವರು, ‘ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ಹಾಗೆ ಕರ್ನಾಟಕದಲ್ಲೂ ನಿರ್ಮಿಸಲಾಗುವುದು,’ ಎಂದು ಹೇಳಿದರು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ನಾರಾಯಣ ಅವರು ಅಯೋಧ್ಯೆಯ ರಾಮಮಂದಿರದ ಹಾಗೆಯೇ, ರಾಮನಗರಬೆಟ್ಟದಲ್ಲೂ ರಾಮ ಮಂದಿರ ನಿರ್ಮಿಸಲು, ಒಂದು ಅಭಿವೃದ್ಧಿ ಸಮಿತಿಯನ್ನು ರಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದರು.
ಮುಖ್ಯಮಂತ್ರಿ ಮತ್ತು ಮುಜರಾಯಿ ಖಾತೆ ಸಚಿವ ಶಶಿಕಲಾ ಜೊಲ್ಲೆ ಅವರಿಗೆ ಪತ್ರವೊಂದನ್ನು ಬರೆದಿರುವ ಸಚಿವರು, ರಾಮನಗರದ ಜಿಲ್ಲೆಯಲ್ಲಿರುವ ರಾಮದೇವರ ಬೆಟ್ಟವನ್ನು ದಕ್ಷಿಣ ಭಾರತದ ಅಯೋಧ್ಯೆಯಾಗಿ ಅಭಿವೃದ್ಧಿಪಡಿಸಿ ಅದನ್ನೊಂದು ಪಾರಂಪರಿಕ ಪ್ರವಾಸಿ ಕ್ಷೇತ್ರವಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ರಾಮದೇವರ ಅ ಬೆಟ್ಟದಲ್ಲಿ ಮುಜರಾಯಿ ಇಲಾಖೆಗೆ ಸೇರಿರುವ 19 ಎಕರೆ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಿಸಬೇಕೆಂದು ಸಚಿವರು ಹೇಳಿದರು.
ನಾರಾಯಣ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜೆಡಿ(ಎಸ್) ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ವಿಧಾನ ಸಭೆ ಚುನಾವಣೆ ಕೆಲವೇ ತಿಂಗಳು ದೂರ ಇರುವಾಗ ರಾಮ ಮಂದಿರ ನಿರ್ಮಾಣ ಮಾಡುವ ಸಚಿವರ ಪ್ರಸ್ತಾಪವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಕಳೆದ ಮೂರು ವರ್ಷಗಳಲ್ಲಿ ಏನನ್ನೂ ಮಾಡದ ಪಕ್ಷವೊಂದು, ವಿಧಾನ ಸಭೆ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿಯಿರುವಾಗ ರಾಮಂದಿರ ನಿರ್ಮಿಸುವ ಬಗ್ಗೆ ಮಾತಾಡುತ್ತಿದೆ,’ ಎಂದು ಅವರು ಹೇಳಿದರು.
ಮಂದಿರ ನಿರ್ಮಾಣದ ಶಂಕುಸ್ಥಾಪನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಆಮಂತ್ರಿಸುವ ಯೋಜನೆಯನ್ನೂ ಮಾಜಿ ಮುಖ್ಯಮಂತ್ರಿಗಳು ವಿರೋಧಿಸಿದರು.
‘ಯುಪಿ ಮುಖ್ಯಮಂತ್ರಿಗಳನ್ನು ಕರೆತರುವಷ್ಟು ದಿವಾಳಿತನ ಕರ್ನಾಟಕಕ್ಕೆ ಬಂದಿಲ್ಲ. ರಾಮನಗರದ ಜನತೆ ರಾಮದೇವರಬೆಟ್ಟದಲ್ಲಿ ರಾಮ ಮಂದಿರದ ಸ್ಥಾಪನೆಯಾಗಬೇಕೆಂದು ಬಯಸಿದರೆ, ಆದಿಚುಂಚನಗಿರಿ ಮಠದ ಶ್ರೀಗಳ ನೇತೃತ್ವದಲ್ಲಿ ನಾನೇ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವೆ. ಶಂಕು ಸ್ಥಾಪನೆ ನೆರವೇರಿಸಲು ಸುತ್ತೂರು ಮಥದ ಶ್ರೀಗಳನ್ನು ಆಮಂತ್ರಿಸಲಾಗುವುದು,’ ಎಂದು ಬುಧವಾರದಂದು ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಪಂಚರತ್ನ ಯಾತ್ರೆಯಲ್ಲಿ ಮಗ್ನರಾಗಿದ್ದ ಕುಮಾರಸ್ವಾಮಿ ಹೇಳಿದರು.
ರಾಮನಗರ ತಮ್ಮ ಮತಕ್ಷೇತ್ರವಾಗಿರುವುದರಿಂದ ಅಲ್ಲಿ ಹೊರಗಿನವರಿಗೆ ಯಾವುದೇ ಕೆಲಸ ಮಾಡಲು ಅವಕಾಶ ನೀಡಲಾಗದು ಎಂದು ಕುಮಾರಸ್ವಾಮಿ ಹೇಳಿದರು. ದೇವರು ನನಗೆ ಬೇಕಾದಷ್ಟು ಶಕ್ತಿ ಒದಗಿಸಿದ್ದಾನೆ. ಚುನಾವಣೆಯ ಸಮಯದಲ್ಲಿ ಹೊರರಾಜ್ಯದವರನ್ನು ನನ್ನ ಕ್ಷೇತ್ರಕ್ಕೆ ಕರೆತರುವ ಅವಶ್ಯಕತೆಯಿಲ್ಲ. ನನ್ನ ಮತ್ತು ರಾಮನಗರದ ನಡುವಿನ ಸಂಬಂಧ ತಾಯಿ ಮತ್ತು ಮಗುವಿನಂತಿದೆ. ಹೊರಗಿನವರಿಗೆ ಇಲ್ಲಿ ಪ್ರವೇಶವಿಲ್ಲ, ಎಂದು ಕುಮಾರಸ್ವಾಮಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರು ಕೂಡ ಸಚಿವ ಅಶ್ವಥ್ ನಾರಾಯಣ ಹೇಳಿಕೆಯನ್ನು ಗೇಲಿ ಮಾಡಿದ್ದಾರೆ. ‘ರಾಮಮಂದಿರ ಕಟ್ಟಲಿ, ಸೀತಾ ಮಂದಿರ ಕಟ್ಟಲಿ. ಆಂಜನೇಯನ ದೇವಸ್ಥಾನ ಕಟ್ಟಲಿ ಮತ್ತು ಅಶ್ವಥ್ ನಾರಾಯಣ ಮಂದಿರವನ್ನೂ ಕಟ್ಟಲಿ, ನಮ್ಮದೇನೂ ಅಭ್ಯಂತರವಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರಾಗಿ ರಾಮನಗರವನ್ನು ಸ್ವಚ್ಛ ಮಾಡಿದರು, ಈಗ ಮಂದಿರ ಕಟ್ಟಲು ಮುಂದಾಗಿದ್ದಾರೆ,’ ಎಂದು ಶಿವಕುಮಾರ ವ್ಯಂಗ್ಯವಾಗಿ ಹೇಳಿದ್ದಾರೆ.
ಮತ್ತಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:06 pm, Fri, 30 December 22