ಆದಾಯ ಮೀರಿ ಶೇ.216ರಷ್ಟು ಆಸ್ತಿ ಗಳಿಕೆ: ರಾಮನಗರ ಉಪವಿಭಾಗಾಧಿಕಾರಿ ಸೇವೆಯಿಂದ ಅಮಾನತು
ಎಸಿ ಮಂಜುನಾಥ್ ಮನೆ, ಫಾರ್ಮ್‌ಹೌಸ್, ಕಚೇರಿ ಮೇಲೆ 2022ರ ಮಾರ್ಚ್ 16ರಂದು ಎಸಿಬಿ ಅಧಿಕಾರಿಗಳಿಂದ ಏಕಕಾಲದಲ್ಲಿ ದಾಳಿ ನಡೆದಿತ್ತು. ಈ ವೇಳೆ ಅಕ್ರಮ ಆಸ್ತಿ ಸಂಬಂಧ ದಾಖಲೆ ಸಿಕ್ಕಿದ್ದ ಹಿನ್ನಲೆ ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ರಾಮನಗರ: ಆದಾಯ ಮೀರಿ ಆಸ್ತಿ ಗಳಿಕೆ (Asset accumulation beyond income) ಮಾಡಿರುವುದು ಪತ್ತೆಯಾದ ಹಿನ್ನೆಲೆ ರಾಮನಗರ ಉಪವಿಭಾಗಾಧಿಕಾರಿ (Ramanagara Sub-Divisional) ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಉಮಾದೇವಿ ಅವರು ಆದೇಶ ಹೊರಡಿಸಿದ್ದಾರೆ. ಎಸಿಬಿ (ಸದ್ಯ ರಾಜ್ಯದಲ್ಲಿ ACB ರದ್ದುಗೊಳಿಸಲಾಗಿದೆ) ವರದಿ ಆಧರಿಸಿ ರಾಮನಗರ ಉಪವಿಭಾಗಾಧಿಕಾರಿ ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿದೆ.
2022ರ ಮಾರ್ಚ್ 16ರಂದು ಎಸಿಬಿ ಅಧಿಕಾರಿಗಳು ಎಸಿ ಮಂಜುನಾಥ್ ಮನೆ, ಫಾರ್ಮ್‌ಹೌಸ್, ಕಚೇರಿ ಮೇಲೆ ದಾಳಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿರುವುದಕ್ಕೆ ದಾಖಲೆ ಲಭ್ಯವಾಗಿದ್ದವು. ಆದಾಯಕ್ಕಿಂತ ಶೇ.216ರಷ್ಟು ಅಕ್ರಮ ಆಸ್ತಿ ಪತ್ತೆಯಾದ ಬಗ್ಗೆ ಸರ್ಕಾರಕ್ಕೆ ಎಸಿಬಿ ವರದಿ ಸಲ್ಲಿಸಲಾಗಿತ್ತು. ಈ ವರದಿಯಾಧರಿಸಿ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿಯವರು ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮಂಜುನಾಥ್ ನಿವಾಸದ ಮೇಲೆ ಮಾತ್ರವಲ್ಲದೆ ಇತರೆ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದ್ದವು. ರಾಮನಗರದಲ್ಲಿರುವ ಸರ್ಕಾರಿ ಕಚೇರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅವರಿಗೆ ಸಂಬಂಧಿಸಿದ ಸ್ಥಿರಾಸ್ತಿಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ವಶಕ್ಕೆ ಪಡೆದಿದ್ದ ಆಸ್ತಿ ದಾಖಲೆಗಳ ಬಗ್ಗೆ ತನಿಖೆ ನಡೆಸಿದಾಗ ಆದಾಯ ಮೀರಿ ಭಾರೀ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವುದು ಬೆಳಕಿಗೆ ಬಂದಿತ್ತು.
ಬೆಂಗಳೂರು ನಗರದ ಜಿಕೆವಿಕೆ ಬಳಿ ಇರುವ ಮಂಜುನಾಥ್ಗೆ ಸೇರಿದ 27 ಕುಂಟೆ ಆಸ್ತಿ (7 ಬ್ಯಾಡ್ಮಿಂಟನ್ ಕ್ರೀಡಾಂಗಣ ಒಳಗೊಂಡ), ಸಹಕಾರ ನಗರದಲ್ಲಿ 2 ಕೋಟಿ ಅಂದಾಜಿನ ಮನೆ, ದೊಡ್ಡಬಳ್ಳಾಪುರದ ದೊಡ್ಡ ತುಮಕೂರು ಗ್ರಾಮದ ಬಳಿ ಫಾರ್ಮ್‌ಹೌಸ್ ಪತ್ತೆಯಾಗಿತ್ತು. ಇಲ್ಲಿ ನಡೆದ ದಾಳಿ ವೇಳೆ ಚಿನ್ನಾಭರಣಗಳು, ಎರಡು ಐಷಾರಾಮಿ ಕಾರುಗಳು ಪತ್ತೆಯಾಗಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ