ಬಂಡೇಮಠ ಸ್ವಾಮೀಜಿಗೆ ಕೋಟ್ಯಂತರ ರೂಪಾಯಿ ಬೇಡಿಕೆಯಿಟ್ಟಿದ್ದ ಮಹದೇವಯ್ಯ: ಮಠದ ಶಾಲೆ ಪೋಸ್ಟಿಂಗ್ ಅವ್ಯವಹಾರ ಶಂಕೆ
ಇನ್ನೊಂದು ಸಿಡಿ ಎಂದು ಹೇಳಿಕೊಂಡಿದ್ದ ಮಹದೇವಯ್ಯ, ‘ಕೇಳಿದಷ್ಟು ಹಣ ನೀಡದಿದ್ದರೆ ತಮ್ಮ ಬಳಿ ಇರುವ ವಿಡಿಯೊ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದರು’ ಎಂದು ಹೇಳಲಾಗಿದೆ.
ರಾಮನಗರ: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಠದಲ್ಲಿ ಪ್ರಾಧ್ಯಾಪಕರಾಗಿದ್ದ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ ಪೋಸ್ಟಿಂಗ್ಗಾಗಿ ಕೆಲವರದಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಪ್ರಯತ್ನಕ್ಕೆ ಬಂಡೇಮಠದ ಬಸವಲಿಂಗ ಸ್ವಾಮೀಜಿ ಕೊಕ್ಕೆ ಹಾಕಿದ್ದರು. ಇದರಿಂದಾಗಿ ಜಿದ್ದು ಬೆಳಸಿಕೊಂಡಿದ್ದ ಮೃತ್ಯುಂಜಯ ಸ್ವಾಮೀಜಿ ಸಮಯ ಕಾದು ಬಸವಲಿಂಗ ಸ್ವಾಮೀಜಿಯನ್ನು ಮಟ್ಟ ಹಾಕಬೇಕು ಎಂದುಕೊಂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹನಿಟ್ರ್ಯಾಪ್ ವಿಡಿಯೊ ಸಿಕ್ಕಿದ್ದರಿಂದ ಅದನ್ನು ಬಸವಲಿಂಗ ಸ್ವಾಮೀಜಿಯನ್ನು ತಮಗೆ ಬೇಕಾದಂತೆ ಬಾಗಿಸಲು ಬಳಸಿಕೊಂಡರು. ಬಸವಲಿಂಗ ಸ್ವಾಮೀಜಿ ಸಾವಿಗೆ ಇದೂ ಒಂದು ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ತನ್ನ ಬಳಿ ಇನ್ನೊಂದು ಸಿಡಿ ಎಂದು ಹೇಳಿಕೊಂಡಿದ್ದ ಪ್ರಕರಣದ ಮತ್ತೋರ್ವ ಆರೋಪಿ ಮಹದೇವಯ್ಯ, ‘ಕೇಳಿದಷ್ಟು ಹಣ ನೀಡದಿದ್ದರೆ ತಮ್ಮ ಬಳಿ ಇರುವ ವಿಡಿಯೊ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಷ್ಟೊಂದು ಮೊತ್ತದ ಹಣ ಹೊಂದಿಸಲು ಸಾಧ್ಯವಾಗದೆ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಪೊಲೀಸರು ಅನುಮಾನಿಸಿದ್ದಾರೆ.
ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಡಾ ಮೃತ್ಯುಂಜಯ ಸ್ವಾಮೀಜಿ ಹಾಗೂ ಮಹದೇವಯ್ಯ ಅವರನ್ನು ಪೊಲೀಸರು ಮಾಗಡಿ ಎಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಗಳನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ಕೋರಿದರು.
ಹನಿಟ್ರ್ಯಾಪ್ ಸಂಚು ರೂಪಿಸಿದ ಮುಖ್ಯ ಆರೋಪಿ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ, ನಿವೃತ್ತ ಶಿಕ್ಷಕ ಹಾಗೂ ವಕೀಲ ಮಹದೇವಯ್ಯ, ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಯುವತಿ ದೊಡ್ಡಬಳ್ಳಾಪುರದ ನೀಲಾಂಬಿಕೆ (ಚಂದು) ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಲು ರಾಮನಗರ ಪೊಲೀಸರು ನಿರ್ಧರಿಸಿದ್ದಾರೆ. ಮೂವರೂ ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಳ್ಳಲು ನ್ಯಾಯಾಧೀಶರಿಗೆ ಪೊಲೀಸರು ಮನವಿ ಮಾಡಲಿದ್ದಾರೆ.
ಪ್ರಸ್ತುತ ಈ ಮೂವರೂ ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಮೃತ್ಯುಂಜಯ ಸ್ವಾಮೀಜಿ ಹಾಗೂ ಮಹದೇವಯ್ಯ ಅವರನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಲಾಗಿದೆ. ನೀಲಾಂಬಿಕೆಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ನ್ಯಾಯಾಲಯವು ಈ ಆರೋಪಿಗಳನ್ನು ಪೊಲೀಸರ ವಶಕ್ಕೆ ಕೊಟ್ಟು, ಪೊಲೀಸ್ ವಿಚಾರಣೆ ಮುಂದುವರಿದರೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವಾಗ ಯಾವ ಕೇಸ್ ಬಗ್ಗೆಯೂ ನಾನು ಮಾತನಾಡುವುದಿಲ್ಲ. ತನಿಖೆಯ ಬಗ್ಗೆ ಗೌಪ್ಯತೆ ಏನೂ ಇಲ್ಲ’ ಎಂದರು.
Published On - 12:39 pm, Mon, 31 October 22